News

ಬೆಳ್ಳಿಗೆ ಬಂತು ಬಂಗಾರದ ಬೆಲೆ | ಒಂದು ಲಕ್ಷ ರೂಪಾಯಿ ಗಡಿಯತ್ತ ಬೆಳ್ಳಿದರ All time Record price for Silver

WhatsApp Group Join Now
Telegram Group Join Now

All time Record price for Silver : ಬೆಳ್ಳಿ ಜಗಮಗಿಸತೊಡಗಿದೆ. ಬಂಗಾರದ ಬೆಲೆಯ (Gold price) ಹೋಯ್ದಾಟದ ನಡುವೆಯೇ ಬೆಳ್ಳಿ ಏರುಮುಖಿಯಾಗುತ್ತಿದ್ದು; ಶೀಘ್ರದಲ್ಲಿಯೇ ಒಂದು ಲಕ್ಷ ರೂಪಾಯಿ ಬೆಲೆಗೆ ತೂಗಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಸದ್ಯಕ್ಕೆ ಬೆಳ್ಳಿ ದರ (Silver price) ಮುಂಬಯಿ ಪೇಟೆಯಲ್ಲಿ ಕೆಜಿಯೊಂದಕ್ಕೆ 11 ವರ್ಷದಲ್ಲೇ ಅತ್ಯಧಿಕ ಎನ್ನಲಾದ ಮಟ್ಟದಲ್ಲಿದೆ.

ಸಾರ್ವಕಾಲಿಕ ದಾಖಲೆ ಬೆಲೆ

ಜಾಗತಿಕ ಆರ್ಥಿಕ ಅನಿಶ್ಚಿತತೆ, ಹಣದುಬ್ಬರ ಮತ್ತಿತರ ಕಾರಣಗಳಿಂದಾಗಿ ಕಳೆದೊಂದು ತಿಂಗಳಿಂದ ಬೆಳ್ಳಿಯ ಬೆಲೆ ಮತ್ತ್ತಷ್ಟು ಹೆಚ್ಚಳವಾಗಿದೆ. ಜತೆಗೆ ಚೀನಾ, ಅಮೆರಿಕದಲ್ಲಿನ ಆರ್ಥಿಕ ಮಂದಗತಿ ಕೂಡ ಬೆಲೆ ಏರಿಕೆಗೆ ಪ್ರಚೋದನೆ ನೀಡುತ್ತಿದೆ.

ಪ್ರಸಕ್ತ ಸಾಲಿನ ಮೇ ತಿಂಗಳ ಕೊನೆಯ ವಾರದಲ್ಲಿ ಬೆಳ್ಳಿ ದರ ಔನ್ಸ್ ಒಂದಕ್ಕೆ 31.77 ಡಾಲರ್‌ನಷ್ಟಿತ್ತು. ಎಂಸಿಎಕ್ಸ್ ಜುಲೈ ವಾಯದಾ ಧಾರಣೆ ಕೆಜಿಗೆ 95,450 ರೂಪಾಯಿಗೆ ತಲುಪಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಆದರೆ ಅಕ್ಟೋಬರ್ 2ನೇ ವಾರದಲ್ಲಿ ಕೆಜಿಗೆ 91,000 ರೂಪಾಯಿ ಮಟ್ಟದಲ್ಲಿದ್ದು, ಕೊಂಚ ಇಳಿಕೆಯಾದರೂ ಇನ್ನೂ ದುಬಾರಿಯಾಗಿಯೇ ಇದೆ.

ಬೆಳ್ಳಿ ಬೆಲೆ ಏರಿಕೆಗೆ ಕಾರಣ

ಬೆಳ್ಳಿ ಮಾರುಕಟ್ಟೆ ಬೇಡಿಕೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲವಾದ್ದರಿಂದ ಇದರ ಬೆಲೆ ದಿನೇ ದಿನೆ ಏರುತ್ತಲೇ ಇದೆ. ಕೈಗಾರಿಕೆ ಮತ್ತು ಹಣಕಾಸು ವಲಯದಿಂದ ಉತ್ತಮ ಬೇಡಿಕೆ ಕುದುರಿದ ಪರಿಣಾಮವಾಗಿ ದರ 2013 ಫೆಬ್ರವರಿಯಿಂದ ಇದುವರೆಗೆ ಏರುಗತಿಯಲ್ಲೇ ಸಾಗುತ್ತ ಬಂದಿದೆ.

ಬೆಳ್ಳಿಗೆ ಕೈಗಾರಿಕಾ ಬೇಡಿಕೆ ಹೆಚ್ಚಾಗಿದ್ದರ ಜೊತೆಗೆ ಡಾಲರ್ ದುರ್ಬಲವಾಗಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ. ಕೈಗಾರಿಕಾ ಬೇಡಿಕೆ ಶೇ.9ರಷ್ಟು ಹೆಚ್ಚಳವಾಗುವ ಸಂಭವ ಇದೆ ಎಂದು ಅಂದಾಜಿಸಲಾಗಿದ್ದು, ಆದರೆ ಕೊರತೆ ಮಾತ್ರ ಶೇ.17ರಷ್ಟು ಅಧಿಕವಾಗಿರುವುದೆಂದು ನಿರೀಕ್ಷಿಸಲಾಗಿದೆ.

All time Record price for Silver

ಬೆಳ್ಳಿಗೆ ರಾಜಮರ್ಯಾದೆ

ಬೆಳ್ಳಿ ಕೇವಲ ಆಭರಣ ತಯಾರಿಕೆ ಮಾತ್ರ ಬಳಕೆಯಾಗುತ್ತಿಲ್ಲ. ಕೈಗಾರಿಕಾ ಕಚ್ಚಾ ವಸ್ತುವಾಗಿಯೂ ಹೇರಳವಾಗಿ ಬಳಕೆಯಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು, ಸೌರ ಫಲಕ, 5ಜಿ ಆಂಟೆನಾ ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಕೆಯಲ್ಲಿ ಬೆಳ್ಳಿಯನ್ನು ಕಚ್ಚಾವಸ್ತುವಾಗಿ ಬಳಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಬೆಳ್ಳಿ ಬಳಕೆಯ ಅರ್ಧದಷ್ಟು ಪಾಲು ಕೈಗಾರಿಕಾ ಉದ್ದೇಶಕ್ಕಾಗಿ ಮೀಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆ, ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆ ಹೆಚ್ಚಾಗುತ್ತಿರುವ ಕಾರಣ ಬೆಳ್ಳಿಗೆ ರಾಜಮರ್ಯಾದೆ ಬಂದಂತಾಗಿದೆ. ಜೊತೆಗೆ ಬೆಳ್ಳಿ ಆಭರಣಗಳಿಗೆ ಬೇಡಿಕೆ ಪರಿಸ್ಥಿತಿ ಚೇತರಿಕೆಯಾದ ಪರಿಣಾಮ ಬೆಲೆ ಹೆಚ್ಚಳಕ್ಕೆ ಮತ್ತಿಷ್ಟು ಪುಷ್ಟಿ ದೊರಕಿದೆ.

ಬಂಗಾರಕ್ಕಿಂತ ಅಧಿಕ ಘನತೆ

ಸದ್ಯದ ಪರಿಸ್ಥಿಯಲ್ಲಿ ಬಂಗಾರಕ್ಕಿಂತಲೂ ಬೆಳ್ಳಿಗೆ ಹೆಚ್ಚಿನ ಘನತೆ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಂಗಾರದ ಗಳಿಕೆ ಶೇ.20ರಷ್ಟಾದರೆ, ಈ ವರ್ಷ ಬೆಳ್ಳಿ ಶೇ.35ರಷ್ಟು ಅಧಿಕವಾಗಿದೆ. ಒಂದೆಡೆ ಬಂಗಾರದ ಧಾರಣೆಯಲ್ಲಿ ಹೊಯ್ದಾಟವಿದ್ದರೆ, ಇನ್ನೊಂದೆಡೆ ಬೆಳ್ಳಿ ದುಬಾರಿಯಾಗುತ್ತಲೇ ಸಾಗಿದೆ.

ಸಾಮಾನ್ಯವಾಗಿ ಬೆಳ್ಳಿಗೆ ಕೈಗಾರಿಕಾ ವಲಯದಿಂದಲೇ ಹೆಚ್ಚು ಬೇಡಿಕೆ ಬರುತ್ತದೆ. ಈ ವರ್ಷ ಇದು ಶೇ.9ರಷ್ಟು ವೃದ್ಧಿಯಾಗುವ ಸಂಭವ ಇದೆ. ಬೆಳ್ಳಿ ದರ ಈ ವರ್ಷ ಶೇ.7ರಷ್ಟು ಹೆಚ್ಚಳವಾಗುವ ಸಂಭವ ಇದೆ. ಮುಂದಿನ ವರ್ಷ ಶೇ.4ರಷ್ಟು ಏರಿಕೆಯಾಗಲಿದೆ ಎಂದು ವಿಶ್ವ ಬ್ಯಾಂಕ್ ತನ್ನ ಕಮಾಡಿಟಿ ಔಟ್‌ಲುಕ್-2024ರ ವರದಿಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now

Related Posts

error: Content is protected !!