ಸರಕಾರಿ ಯೋಜನೆ

ಮುಖ್ಯಮಂತ್ರಿ ಅಮೃತ ಜೀವನ ಯೋಜನೆ: ಮಿಶ್ರತಳಿ ಹಸು, ಎಮ್ಮೆ ಖರೀದಿಗೆ ₹15,500 ದಿಂದ ₹20,665 ಸಹಾಯಧನ | ರೈತರೇ ಕೂಡಲೇ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now

ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಮಿಶ್ರತಳಿ ಹಸು ಅಥವಾ ಎಮ್ಮೆ ಖರೀದಿಗೆ ಅರ್ಹ ಅರ್ಜಿ ಆಹ್ವಾನಿಸಲಾಗಿದ್ದು; ಪ್ರತಿ ರೈತರಿಗೂ ₹15,500 ರಿಂದ ₹20,665 ರೂಪಾಯಿ ವರೆಗೂ ಸಹಾಯಧನ ಸಿಗಲಿದೆ. ಈ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ? ಹಸು-ಎಮ್ಮೆ ಖರೀದಿಗೆ ಯಾರಿಗೆ ಎಷ್ಟು ಸಹಾಯಧನ ಸಿಗಲಿದೆ? ರೈತರು ಏನು ಮಾಡಬೇಕು? ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ…

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪಶುಭಾಗ್ಯ ಯೋಜನೆಯಂತೆ ಮುಖ್ಯಮಂತ್ರಿ ಅಮೃತ ಜೀವನ ಯೋಜನೆಯನ್ನು ಕೂಡ ಅನುಷ್ಠಾನಗೊಳಿಸಲಾಗಿದ್ದು; ಸದರಿ ಯೋಜನೆಯಡಿ ಸಬ್ಸಿಡಿಯಲ್ಲಿ ಹಾಲು ಕರೆಯುವ ಹಸು ಹಾಗೂ ಎಮ್ಮೆ ಖರೀದಿಗೆ ಸಹಾಯಧನ ನೀಡಲಾಗುತ್ತದೆ.

ಈ ಯೋಜನೆಯ ಅಡಿಯಲ್ಲಿ ಪ್ರತಿ ಫಲಾನುಭವಿಗಳಿಗೆ ಹೈನುಗಾರಿಕೆ ಘಟಕದಡಿ ಒಂದು ಮಿಶ್ರ ತಳಿ ಹಸು ಅಥವಾ ಎಮ್ಮೆ (ಹೆಚ್.ಎಫ್/ಜೆಆರ್ ಕ್ರಾಸ್) ನೀಡಲಾಗುವುದು. ರೈತರಿಗೆ ಆದ್ಯತೆ ಮೇರೆಗೆ ಕೂಲಿ, ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗುವುದು.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸಬ್ಸಿಡಿ ಸೌಲಭ್ಯಗಳು

ಹಸು-ಎಮ್ಮೆ ಖರೀದಿಗೆ ಸಹಾಯಧನ ಎಷ್ಟು?

ಸದರಿ ಯೋಜನೆಯಡಿ ಘಟಕದ ವೆಚ್ಚ 62,000 ರೂಪಾಯಿ ಇದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ (ಶೇ.33.33) 20,665 ರೂಪಾಯಿ ಸಹಾಯಧನ ಲಭ್ಯವಿದೆ. ಹಾಗೇನೇ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ (ಶೇ.25) 15,500 ರೂಪಾಯಿ ಸಹಾಯಧನ ಒದಗಿಸಲಾಗುವುದು.

ಘಟಕದ ಸಹಾಯಧನ ಹೊರತುಪಡಿಸಿ ಉಳಿದ ಮೊತ್ತವನ್ನು ಫಲಾನುಭವಿಗಳ ವಂತಿಕೆ ಅಥವಾ ಸಾಲದ ರೂಪದಲ್ಲಿ ಬ್ಯಾಂಕಿನಿಂದ ಪಡೆಯಲಾಗುತ್ತದೆ. ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ ಶೇ. 33.3, ಅಲ್ಪಸಂಖ್ಯಾತರಿಗೆ ಶೇ.15 ಹಾಗೂ ಅಂಗವಿಕಲರಿಗೆ ಶೇ.3ರಷ್ಟು ಆದ್ಯತೆ ನೀಡಲಾಗುವುದು.

ಇದನ್ನೂ ಓದಿ: ರೈತರ ಬ್ಯಾಂಕ್ ಖಾತೆಗೆ ₹339 ಕೋಟಿ ಹಾಲಿನ ಪ್ರೋತ್ಸಾಹಧನ ಜಮೆ

ಯಾರೆಲ್ಲ ಅರ್ಹರು?

ಈ ಯೋಜನೆಯ ಪ್ರಯೋಜನ ಪಡೆಯಲಿ ಎಲ್ಲ ವರ್ಗದ ಸಣ್ಣ, ಅತಿ ಸಣ್ಣ ಹಾಗೂ ಪಶುಪಾಲನೆಯಲ್ಲಿ ಆಸಕ್ತಿಯುಳ್ಳವರು ಅರ್ಜಿ ಸಲ್ಲಿಸಬಹುದಾಗಿದೆ. ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳು ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಫ್ರೂಟ್ಸ್ (FRUITS) ತಂತ್ರಾಂಶದಲ್ಲಿ ನೊಂದಾಯಿಸಿರಬೇಕು. ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್ ಹೊಂದಿರಬೇಕು. ಇತ್ತೀಚಿನ ಫೋಟೊಗಳೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು. ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿಯಿಂದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.

ಸರ್ಕಾರದಿಂದ ಅನುಮೋದನೆಯಾಗಿರುವಂತೆ ಕಾರ್ಯಕ್ರಮವನ್ನು ಸರ್ಕಾರದ ಮಾರ್ಗಸೂಚಿಯನ್ವಯ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ, ತಾಲ್ಲೂಕುವಾರು ಗುರಿ ನಿಗಧಿಪಡಿಸಲಾಗಿದೆ. ಆಸಕ್ತ, ಅರ್ಹ ಫಲಾನುಭವಿಗಳು ಆಯಾ ತಾಲ್ಲೂಕುಗಳ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿಗಳಿಂದ ನಿಗದಿತ ನಮೂನೆಯ ಅರ್ಜಿ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ 2023ರ ಜನವರಿ 10ರೊಳಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವು ಜಿಲ್ಲಾವಾರು ಬೇರೆ ಬೇರೆಯಾಗಿದ್ದು; ಜನವರಿ 5, 8 ಹಾಗೂ 10ರ ಒಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಇದನ್ನೂ ಓದಿ: ಜಮೀನು ಕಾಲುದಾರಿ, ಬಂಡಿದಾರಿ ಸಮಸ್ಯೆಗೆ ಇಲ್ಲಿದೆ ಸುಲಭ ಕಾನೂನು ಪರಿಹಾರ… 

ಚಿತ್ರದುರ್ಗ ಜಿಲ್ಲೆಯ ರೈತರು ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿಗಳಾದ ಚಿತ್ರದುರ್ಗ-9741927007, ಚಳ್ಳಕೆರೆ-9448816499, ಹೊಳಲ್ಕೆರೆ- 8073900950, ಹೊಸದುರ್ಗ – 9448005250, ಹಿರಿಯೂರು – 9980976980, ಮೊಳಕಾಲ್ಮೂರು- 9900964820 ಗಳಿಗೆ ಸಂಪರ್ಕಿಸಬೇಕೆಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ರೈತರು ಹೆಚ್ಚಿನ ಮಾಹಿತಿಗಾಗಿ ತಾಲೂಕುಗಳ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ), ಮುಖ್ಯ ಪಶು ವೈದ್ಯಾಧಿಕಾರಿ, ಪಶುಆಸ್ಪತ್ರೆ, ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಕಾರಟಗಿ, ಕುಕನೂರು ಮತ್ತು ಕನಕಗಿರಿ ಕಚೇರಿಗಳಿಗೆ ಸಂಪರ್ಕಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ನಾಗರಾಜ ಹೆಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಜನವರಿ 8, 2023 ಕೊನೆಯ ದಿನವಾಗಿದೆ.

ಇದನ್ನೂ ಓದಿ: 30 ಗುಂಟೆ ಬಾಡಿಗೆ ಜಾಗದಲ್ಲಿ ತಿಂಗಳಿಗೆ ₹50,000 ಗಳಿಸುವ ರೈತ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಹೆಚ್ಚಿನ ಮಾಹಿತಿಗಾಗಿ ಮುಖ್ಯ ಪಶು ವೈದ್ಯಾಧಿಕಾರಿಗಳು, ಪಶು ಆಸ್ಪತ್ರೆಗಳಾದ ದೇವನಹಳ್ಳಿ-9480910509, ದೊಡ್ಡಬಳ್ಳಾಪುರ- 9632047920, ಹೊಸಕೋಟೆ- 9448988649, ನೆಲಮಂಗಲ- 9845637387 ಅವರನ್ನು ಸಂಪರ್ಕಿಸಬಹುದು ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಡಾ.ಜಿ.ಎಂ ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಜನವರಿ 5, 2023 ಕೊನೆಯ ದಿನವಾಗಿದೆ.

ಉಡುಪಿ ಜಿಲ್ಲೆಯ ರೈತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಅಥವಾ ಸಮೀಪದ ಪಶುವೈದ್ಯಕೀಯ ಸಂಸ್ಥೆಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಜನವರಿ 10, 2023 ಕೊನೆಯ ದಿನವಾಗಿದೆ.

ಇದೇ ರೀತಿ ರಾಜ್ಯದ ಇತರ ಜಿಲ್ಲೆಗಳಲ್ಲೂ ಅನುದಾನದ ಲಭ್ಯತೆಯ ಆಧಾರದ ಮೇಲೆ ಸದರಿ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಮಿಶ್ರತಳಿ ಹಸು ಮತ್ತು ಎಮ್ಮೆ ಖರೀದಿಗೆ ಸಹಾಯಧನ ನೀಡಲಾಗುತ್ತಿದೆ. ಆಯಾ ಜಿಲ್ಲೆಯ ರೈತರು ಮತ್ತು ಪಶು ಸಂಗೋಪನೆಯಲ್ಲಿ ಆಸಕ್ತಿಯುಳ್ಳ ನಾಗರಿಕರು ಮುಖ್ಯ ಪಶು ವೈದ್ಯಾಧಿಕಾರಿಗಳಿಂದ ನಿಗದಿತ ನಮೂನೆಯ ಅರ್ಜಿ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬಹುದು.

ಪಶುಪಾಲನಾ ಸಹಾಯವಾಣಿ  8277 100 200 ನಂಬರಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿಗಳನ್ನೆಲ್ಲಾ ಪಡೆಯಬಹುದು. ದಿನದ 24 ಗಂಟೆ ಈ ಉಚಿತ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: ಗ್ರಾಮಠಾಣಾ ನಕ್ಷೆ: ಪ್ರತಿಯೊಬ್ಬರೂ ಅರಿತಿರಬೇಕಾದ ನಿಮ್ಮೂರಿನ ಮಾಹಿತಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!