ಉದ್ಯೋಗ

ಮೋಸದ ಉದ್ಯೋಗ ಜಾಲ ಪತ್ತೆಗೆ ಈ ನಿಯಮ ಪಾಲಿಸಿ | ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗಳು ತಿಳಿಯಬೇಕಾದ ಮಾಹಿತಿ | Job Scams

WhatsApp Group Join Now
Telegram Group Join Now

ಸರಕಾರಿ ಜಾಬ್, ಪ್ರತಿಷ್ಠಿತ ಕಂಪನಿ ಜಾಬ್, ಪಾರ್ಟ್ ಟೈಂ ಜಾಬ್, ಫುಲ್ ಟೈಂ ಜಾಬ್, ಲಕ್ಷ ಲಕ್ಷ ಸಂಬಳದ ಜಾಬ್ ಇತ್ಯಾದಿ ಉದ್ಯೋಗದ ಆಮೀಷ ತೋರಿಸಿ ಉದ್ಯೋಗಾಕಾಂಕ್ಷಿಗಳನ್ನು ಮೋಸಗೊಳಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಮೋಸದ ಜಾಲವನ್ನು ಪತ್ತೆ ಹಚ್ಚುವುದು ಹೇಗೆ? ಇವುಗಳ ಮೋಸಕ್ಕೆ ಬಲಿಯಾಗದಂತೆ ಪಾಲಿಸಬೇಕಾದ ನಿಯಮಗಳೇನು? ಮೋಸದ ಜಾಲಗಳ ಅಸಲಿ ಹಕೀಕತ್ತೇನು? ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಪೋಷಕರು ತಿಳಿಯಲೇಬೇಕಾದ ಮಹತ್ವದ ಮಾಹಿತಿ ಇಲ್ಲಿದೆ…

ಉದ್ಯೋಗ ಕೊಡುವ ನೆಪದಲ್ಲಿ ವಂಚಿಸುವ ಮೋಸದ ಜಾಲಗಳು ದೇಶಾದ್ಯಂತ ಸಕ್ರೀಯವಾಗಿವೆ. ಸ್ಥಳೀಯವಾಗಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ವಂಚಕರ ಗ್ಯಾಂಗ್ ಉದ್ಯೋಗದ ಆಮೀಷ ತೋರಿಸಿ ಅಭ್ಯರ್ಥಿಗಳನ್ನು ಅತೀ ಸುಲಭವಾಗಿ ಖೆಡ್ಡಾಕ್ಕೆ ಬೀಳಿಸುತ್ತಿವೆ. ಇವರ ವಂಚನಾ ವರ್ತುಲಕ್ಕೆ ಸಿಲುಕಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಹಣ, ಸಮಯನ್ನಷ್ಟೇ ಅಲ್ಲದೇ, ಮಾನ-ಮರ್ಯಾದೆಯನ್ನೂ ಕೂಡ ಕಳೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಸದ್ಯದಲ್ಲೇ ಒಂದು ಲಕ್ಷ ರಾಜ್ಯ ಸರಕಾರಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ತೀರಾ ಇತ್ತೀಚೆಗೆ ರೈಲ್ವೆ ಉದ್ಯೋಗ ಕೊಡಿಸುವ ನೆಪದಲ್ಲಿ ತಮಿಳುನಾಡಿನ 28 ಯುವಕರಿಗೆ ವಂಚಿಸಿರುವ ಘಟನೆ ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಈ 28 ಯುವಕರಿಗೆ ಪ್ರತಿ ದಿನ ನವದೆಹಲಿಯ ರೈಲ್ವೆ ನಿಲ್ದಾಣದ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಂತು, ಅಲ್ಲಿಗೆ ಬರುವ ಮತ್ತು ಅಲ್ಲಿಂದ ಹೊರಡುವ ರೈಲುಗಳನ್ನು ಎಣಿಸಲು ನಿಯೋಜಿಸಲಾಗಿತ್ತು. ಆದರೆ ಇದೊಂದು ಹಗರಣವಾಗಿದ್ದು, ತಾವು ಮೋಸ ಹೋಗುತ್ತಿದ್ದೇವೆ ಎಂದು ತಿಳಿಯದೇ ಯುವಕರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದು, ಕಿಡಿಗೇಡಿಗಳು ಒಟ್ಟು 2.6 ಕೋಟಿಯನ್ನು ಬಾಚಿಕೊಂಡು ಎಸ್ಕೇಪ್ ಆಗಿದ್ದಾರೆ.

ಇಂತಹ ಪ್ರಕರಣಗಳು ನಮ್ಮ ನಿಮ್ಮ ಊರುಗಳಿಂದ ಹಿಡಿದು ರಾಜ್ಯದ ಬೇರೆ ಬೇರೆ ಜಿಲ್ಲೆ, ಬೇರೆ ಬೇರೆ ರಾಜ್ಯ, ದೇಶದಾದ್ಯಂತ ನಡೆಯುತ್ತಲೇ ಇವೆ. ಉದ್ಯೋಗಾಕಾಂಕ್ಷಿ ಯುವಕ, ಯುವತಿಯರು ಈ ಮೋಸದ ಜಾಲಗಳ ನಕಲಿ ಆಟಕ್ಕೆ ತಮ್ಮ ಭವಿಷ್ಯವನ್ನೇ ಮಂಕು ಮಾಡಿಕೊಳ್ಳುತ್ತಿದ್ದಾರೆ. ಕೆಲಸ ಸಿಕ್ಕಿರುವಂತೆ ನಕಲಿ ಆಫರ್ ಲೆಟರ್‌ಗಳನ್ನು ಕೊಟ್ಟು ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುತ್ತಿವೆ. ಕರ್ನಾಟಕ ಸೇರಿ ಭಾರತದಾದ್ಯಂತ ಸಾವಿರಾರು 420 ಕೇಸ್‌ಗಳು ದಾಖಲಾಗುತ್ತಿವೆ. ಕರ್ನಾಟಕದಲ್ಲಿ ವರ್ಷಕ್ಕೆ 6,000 ವಂಚನೆ ಪ್ರಕರಣಗಳು ವರದಿಯಾಗುತ್ತಿವೆ.

ಇದನ್ನೂ ಓದಿ: SSLC ಪಾಸಾದವರಿಂದ ರೈಲ್ವೇ ಇಲಾಖೆಯ 4,103 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಥಳೀಯ ಮೋಸದ ಜಾಲಗಳು ನಕಲಿ ವೆಬ್‌ಸೈಟ್ ಸೃಷ್ಟಿಸಿ, ಉದ್ಯೋಗ ಇರುವುದಾಗಿ ಜಾಲತಾಣದಲ್ಲಿ ಜಾಹೀರಾತು ಕೊಡುವ ಮೂಲಕ ಉದ್ಯೋಗಾಕಾಂಕ್ಷಿಗಳನ್ನು ಆಕರ್ಷಿಸುತ್ತಿವೆ. ನೋಂದಣಿ, ಸಂದರ್ಶನದ ಶುಲ್ಕಗಳ ಹೆಸರಲ್ಲಿ ಆರಂಭದಲ್ಲೇ ಹಣ ಕಟ್ಟಿಸಿಕೊಂಡು ನಾಪತ್ತೆಯಾಗುತ್ತವೆ. ಕೆಲಸ ಕೊಡಿಸುವುದಾಗಿ ತಲಾ ಅಭ್ಯರ್ಥಿಯಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುವುದೂ ಉಂಟು. ಈ ಕಪಟಿಗಳು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ತಾತ್ಕಾಲಿಕವಾಗಿ ಸ್ಥಳೀಯ ಏಜೆನ್ಸಿ ಕಚೇರಿ ಕೂಡ ಸ್ಥಾಪನೆ ಮಾಡಿ ನಂಬಿಸುತ್ತವೆ. ಸಿಬಿಐ, ಐಟಿ, ರೈಲ್ವೆ ಇಲಾಖೆಗಳಂತಹ ಸರ್ಕಾರಿ ಉದ್ಯೋಗದ ಹೆಸರಲ್ಲಿ ಅರ್ಜಿ ಆಹ್ವಾನಿಸಿ ಸರಿಯಾಗಿ ನಾಮ ತೀಡುತ್ತವೆ.

ಹಾಗಿದ್ದರೆ ಈ ಮೋಸದ ಜಾಲಗಳನ್ನು ಪತ್ತೆ ಹಚ್ಚುವುದು ಹೇಗೆ? ಇವುಗಳು ಕೊಡುವ ಉದ್ಯೋಗ ಆಮೀಷಕ್ಕೆ ಬಲಿಯಾಗದೇ ಪ್ರಾರಂಭದಲ್ಲಿಯೇ ಗುರುತಿಸಿ ಸೇಫ್ ಆಗುವುದು ಹೇಗೆ? ಇಷ್ಟಕ್ಕೂ ಮೋಸದ ಉದ್ಯೋಗ ಜಾಲಗಳ ಅಸಲಿಯತ್ತನ್ನು ಪತ್ತೆ ಹಚ್ಚುವುದು ಹೇಗೆ? ಇದು ಬಹುತೇಕ ಉದ್ಯೋಗಾಕಾಂಕ್ಷಿಗಳ ಪ್ರಶ್ನೆ.

ಸಾಮಾನ್ಯವಾಗಿ ಇಂದು ಸರಕಾರಿ ಅಥವಾ ಖಾಸಗಿ ಯಾವುದೇ ವಲಯದ ಉದ್ಯೋಗ ಅರ್ಜಿಯನ್ನು ಆನ್‌ಲೈನ್ ಮೂಲಕವೇ ಕರೆಯುವುದುಂಟು. ಹೀಗಾಗಿ ಆನ್‌ಲೈಲ್ ವೆಬ್ ವಿಳಾಸವನ್ನು ಮೊದಲಿಗೆ ಎಚ್ಚರಿಕೆಯಿಂದ ಗಮನಿಸಬೇಕು. ಸರ್ಚ್ ಇಂಜಿನ್, ಸೋಷಿಯಲ್ ಮೀಡಿಯಾ ಜಾಹೀರಾತು ಲಿಂಕ್‌ಗಳನ್ನು ಪ್ರಾಮಾಣಿಕರಿಸದೇ ನಂಬುವುದು ಹುಂಬತನ. ಅರ್ಜಿ ಸಲ್ಲಿಸುವ ಮುನ್ನ ವೆಬ್‌ಸೈಟ್ ಅಸಲಿಯೋ ನಕಲಿಯೋ ಎಂಬುವುದನ್ನು ಖಚಿತಪಡಿಸಿಕೊಂಡೇ ಮುಂದುವರೆಯಿರಿ.

ಇದನ್ನೂ ಓದಿ: ಕೇಂದ್ರ ಸರಕಾರದ 10 ಲಕ್ಷ ಹುದ್ದೆಗಳ ನೇಮಕ | SSC ವಿವಿಧ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಇಲ್ಲಿದೆ

ಬಹುತೇಕ ಎಲ್ಲ ಸರ್ಕಾರಿ ಇಲಾಖೆಗಳ ವೆಬ್‌ಸೈಟ್‌ಗಳಿಗೆ gov.in/nic.in ವಿಳಾಸ ಇರುತ್ತದೆ. ಇದನ್ನು ಮೊದಲು ಗಮನಿಸಿಯೇ ಅರ್ಜಿ ಸಲ್ಲಿಸುವುದು ಕ್ಷೇಮಕರ. ಇನ್ನು ಸರಕಾರಿ ಉದ್ಯೋಗ ಅಥವಾ ಖಾಸಗಿ ವಲಯದ ಕಂಪನಿಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಮಾತ್ರವೇ ಜಾಹೀರಾತು ನೀಡಲಾಗುತ್ತದೆ. ಅಸಲಿ ಕಂಪನಿಗಳ ಇ-ಮೇಲ್ ವಿಳಾಸ ಸಾಮಾನ್ಯವಾಗಿ [email protected]/[email protected] ಆಗಿರುತ್ತದೆ. ಇದರ ಬದಲು [email protected]/[email protected] ಎಂದು ವ್ಯಾಕರಣ ದೋಷವಿದ್ದರೆ ಅದು ನಕಲಿ ಜಾಲ ಎಂದೇ ಭಾವಿಸುವುದು ಉತ್ತಮ.

ಗಮನಾರ್ಹವೆಂದರೆ ಶುಲ್ಕದ ಹೆಸರಲ್ಲಿ ಯಾವ ಕಂಪನಿಯೂ ಹಣ ಕೇಳುವುದಿಲ್ಲ. ಹೀಗಾಗಿ ಉದ್ಯೋಗ ಕೊಡಿಸುವುದಾಗಿ ಹಣ ಕೇಳಿಕೊಂಡು ಇ-ಮೇಲ್ ಸಂದೇಶ ಅಥವಾ ವಾಟ್ಸ್ ಆಪ್ ಸಂದೇಶ ಬಂದರೆ ನಂಬಬೇಡಿ. ಆನ್‌ಲೈನ್ ಇಂಟರ್‌ವ್ಯೂ ಮುನ್ನ ಇತ್ತೀಚೆಗೆ ಸಾಕಷ್ಟು ಕಂಪನಿಗಳು ಟೆಲಿಫೋನ್, ಚಾಟ್ ಸರ್ವೀಸ್, ಸ್ಟೈಪ್ ಕಾಲ್, ಗೂಗಲ್ ಹ್ಯಾಂಗೌಟ್‌ನಲ್ಲೇ ಇಂಟರ್‌ವ್ಯೂ ಮಾಡುತ್ತಿವೆ. ಸಂದರ್ಶನಕ್ಕೆ ಮುನ್ನ ಕಂಪನಿ ಹಾಗೂ ಸಂದರ್ಶಕರ ಬಗ್ಗೆ ಕೂಲಕುಂಶ ಮಾಹಿತಿ ತಿಳಿದುಕೊಳ್ಳುವುದು ಸುರಕ್ಷಿತ.

ಇದನ್ನೂ ಓದಿ: ರಾಜ್ಯ ಸರ್ಕಾರಿ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಅಭಿಯಾನ ಶುರು

ಯಾವುದೇ ದೇಶದಿಂದ ಉದ್ಯೋಗದ ಆಫರ್ ಬಂದಾಗ ಉದ್ಯೋಗದ ಆಹ್ವಾನ ನೀಡಿದ ಸಂಸ್ಥೆ ಹಾಗೂ ವ್ಯಕ್ತಿಗಳ ಕುರಿತಾಗಿ ಸಮಗ್ರ ಮಾಹಿತಿ ಪಡೆದು ವ್ಯವಹಾರ ಮುಂದುವರೆಸುವುದು ಉತ್ತಮ. ಏಕೆಂದರೆ ಈಗೀಗ ಮ್ಯಾನ್ಮಾರ್, ಬ್ಯಾಂಕಾಕ್, ಥಾಯ್ಲೆಂಡ್, ಅರಬ್ ದೇಶಗಳಲ್ಲಿ ಉದ್ಯೋಗ ಕೊಡಿಸುವ ಆಮಿಷ ಹೆಚ್ಚಾಗುತ್ತಿದೆ. ಅಸ್ತಿತ್ವದಲ್ಲಿಲ್ಲದ ಐಟಿ ಕಂಪನಿಗಳನ್ನು ಸೃಷ್ಟಿಸಿ, ಆ ಹೆಸರಲ್ಲೇ ಆನ್‌ಲೈನ್ ಇಂಟರ್‌ವ್ಯೂ ಮಾಡಿ ಮೋಸ ಮಾಡಲಾಗುತ್ತಿದೆ. ಒಂದೇ ಬಾರಿ ಮಾತುಕತೆಗೆ ಉದ್ಯೋಗ ನೀಡುವ ಆಮೀಷ, ಮೊಬೈಲ್‌ನಲ್ಲೇ ಆಫರ್ ಕೊಡುವುದು ಇವೆಲ್ಲ ನಂಬಬೇಡಿ.

ಒಟ್ಟಾರೆ ಉದ್ಯೋಗ ನೀಡುವ ಸುಳ್ಳು ಭರವಸೆ, ನಕಲಿ ವೆಬ್‌ಸೈಟ್/ ಅಧಿಸೂಚನೆ(ಪ್ರಕಟಣೆ)ಗಳಿಂದ ಎಚ್ಚರವಾಗಿರಿ. ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಿ. ಬಹುಮುಖ್ಯವಾಗಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ವಿವರವಾಗಿ ಓದಿ ಈ ಹುದ್ದೆಗಳಿಗೆ ನೀವು ಅರ್ಹರೆ? ಎಂಬುವುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನೂ ಓದಿ: PUC ಅಭ್ಯರ್ಥಿಗಳಿಂದ ರಸಗೊಬ್ಬರ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!