ಸುದ್ದಿಗಳು

GKVK KrishiMela-2022 | ರೈತರ ಆದಾಯ ಹೆಚ್ಚಿಸುವ ತಂತ್ರಜ್ಞಾನ ಅನಾವರಣ

WhatsApp Group Join Now
Telegram Group Join Now

ಈ ವರ್ಷದ ಕೃಷಿ ಮೇಳದಲ್ಲಿ ರೈತರ ಆದಾಯ ಹೆಚ್ಚಳಕ್ಕೆ ಪೂರಕವಾದ ಒಂಬತ್ತು ಹೊಸ ತಳಿಗಳು ಮತ್ತು 38 ತಂತ್ರಜ್ಞಾನಗಳ ಬಿಡುಗಡೆಯಾಗಲಿವೆ. ಜೊತೆಗೆ ಬಹುಪಯೋಗಿ ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ತಾಕುಗಳ ಅನಾವರಣವಾಗಲಿದೆ. ಜಿಕೆವಿಕೆ ಕೃಷಿ ಮೇಳ-2022ರ ವಿಶೇಷತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಕೃಷಿ ಮೇಳವನ್ನು ನಿರಂತರವಾಗಿ ಆಚರಿಸುತ್ತಾ ರೈತರು ಹಾಗೂ ವಿಸ್ತರಣಾ ಕಾರ್ಯಕರ್ತರಿಗೆ ಕೃಷಿ ತಾಂತ್ರಿಕತೆಯ ಜ್ಞಾನದ ವಿವಿಧ ಮಜಲುಗಳನ್ನು ಪರಿಚಯ ಮಾಡಿಕೊಡುತ್ತ ಬರುತ್ತಿದೆ. 1966ರಲ್ಲಿ ಪ್ರಾರಂಭವಾದ ಕ್ಷೇತ್ರೋತ್ಸವವು ಕಾಲಾನುಕ್ರಮದಲ್ಲಿ ಕೃಷಿ ಮೇಳವಾಗಿ ಪರಿವರ್ತನೆಗೊಂಡು ಅತ್ಯಂತ ಜನಪ್ರಿಯಗೊಂಡಿದೆ.

ಈ ವರ್ಷ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಕರ್ನಾಟಕ ಸರ್ಕಾರದ ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ಹಾಲು ಮಹಾಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ಕೃ.ವಿ.ವಿ, ಬೆಂಗಳೂರಿನ, ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಕೃಷಿ ಮೇಳವನ್ನು ಬರಲಿರುವ ನವೆಂಬರ್ 3 ರಿಂದ 6, 2022ರ ವರೆಗೆ ನಾಲ್ಕು ದಿನಗಳ ಕಾಲ ‘ಕೃಷಿಯಲ್ಲಿ ನವೋಧ್ಯಮಗಳು’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗುತ್ತಿದೆ.

ನೂತನ ತಳಿಗಳ ಬಿಡುಗಡೆ

ಈ ವರ್ಷ ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿರುವ ರೋಗನಿರೋಧಕ ಶಕ್ತಿಯುಳ್ಳ ಒಟ್ಟು ಒಂಬತ್ತು ತಳಿಗಳನ್ನು ಕೃಷಿಮೇಳದಲ್ಲಿ ಬಿಡುಗಡೆ ಮಾಡಲಾಗುವುದು. ನೂತನ ತಳಿಗಳ ವಿವರ ಈ ಕೆಳಗಿನಂತಿದೆ:

ಭತ್ತ/ ಕೆ.ಎಂ.ಪಿ-225: ಈ ತಳಿಯು ಅಲ್ಪಾವಧಿ ತಳಿಯಗಿದ್ದು, ಬಿತ್ತನೆಯಾದ 120 ರಿಂದ 125 ದಿನಗಳ ನಂತರ ಕಟಾವಿಗೆ ಬರುತ್ತದೆ. ಈ ತಳಿಯನ್ನು ಕರ್ನಾಟಕದ ದಕ್ಷಿಣ ಒಣ ವಲಯದಲ್ಲಿ (ವಲಯ-6) ಜುಲೈ 3ನೇ ವಾರದಿಂದ 4ನೇ ವಾರದೊಳಗೆ ಬಿತ್ತಲು ಸೂಕ್ತವಾಗಿದೆ. ಈ ತಳಿಯ ಅಕ್ಕಿಯು ಬಿಳಿ ಬಣ್ಣದಾಗಿದ್ದು, ಕಾಳುಗಳು ಉದ್ದ ಮತ್ತು ದಪ್ಪವಾಗಿದ್ದು, ಐಆರ್-64 ಭತ್ತದ ಕಾಳುಗಳ ಹಾಗೆ ಹೆಚ್ಚಾಗಿ ಹೋಲುತ್ತವೆ. ಐಆರ್-64 ಭತ್ತದ ತಳಿಗೆ ಹೋಲಿಸಿದಾಗ ಕೆ.ಎಂ.ಪಿ.-225 ತಳಿಯು ಎಲೆ ಹಾಗೂ ಕುತ್ತಿಗೆ ಬೆಂಕಿರೋಗಕ್ಕೆ ಸಾಧಾರಣ ನಿರೋಧಕತೆಯನ್ನು ಹೊಂದಿರುತ್ತದೆ. ಆದ ಕಾರಣ ಬೆಂಕಿರೋಗಕ್ಕೆ ತುತ್ತಾಗುವ ಐಆರ್-64 ತಳಿಯ ಬದಲು ಕೆ.ಎಂ.ಪಿ.-225 ತಳಿಯನ್ನು ಬೆಳೆಯಬಹುದಾಗಿದೆ. ಈ ತಳಿಯು ಪ್ರತಿ ಎಕರೆಗೆ  24-26 ಕ್ವಿಂಟಾಲ್ ಧಾನ್ಯದ ಇಳುವರಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ವಲಯ-6ಕ್ಕೆ ಶಿಫಾರಸ್ಸು ಮಾಡಲಾಗಿದೆ.

ಇದನ್ನೂ ಓದಿ: ನಿರಂತರ ವಿದ್ಯುತ್ ಪಡೆಯಲು ಈ ಯೋಜನೆಯಿಂದ ರೈತರಿಗೆ ಸಿಗಲಿದೆ ಬಂಪರ್ ಸಹಾಯಧನ

ಭತ್ತ/ ಆರ್.ಎನ್.ಆರ್-15048: ಈ ತಳಿಯು ಅಲ್ಪಾವಧಿ ತಳಿಯಗಿದ್ದು, ಬಿತ್ತನೆಯಾದ 120 ರಿಂದ 125 ದಿನಗಳ ನಂತರ ಕಟಾವಿಗೆ ಬರುತ್ತದೆ. ಈ ತಳಿಯನ್ನು ಕರ್ನಾಟಕದ ದಕ್ಷಿಣ ಒಣ ವಲಯದಲ್ಲಿ (ವಲಯ-6) ಜುಲೈ 3ನೇ ವಾರದಿಂದ 4ನೇ ವಾರದೊಳಗೆ ಬಿತ್ತಲು ಸೂಕ್ತವಾಗಿರುತ್ತದೆ. ಈ ತಳಿಯ ಅಕ್ಕಿಯು ತುಂಬಾ ಸಣ್ಣದಾಗಿದ್ದು, ಉತ್ಕೃಷ್ಟ ದರ್ಜೆಯದಾಗಿರುತ್ತದೆ. ಈ ತಳಿಯು ಪ್ರತಿ ಎಕರೆಗೆ 22-24 ಕ್ವಿಂಟಾಲ್ ಧಾನ್ಯದ ಇಳುವರಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ವಲಯ-6ಕ್ಕೆ ಶಿಫಾರಸ್ಸು ಮಾಡಲಾಗಿದೆ.

ಮುಸುಕಿನ ಜೋಳ/ ಎಂ.ಎ.ಹೆಚ್ 14-138: ಮುಸುಕಿನ ಜೋಳದ ಏಕ ಸಂಕರಣ ತಳಿ. ಅಧಿಕ ಇಳುವರಿ (34-38 ಕ್ವಿ/ಎ) ಮತ್ತು ಮಧ್ಯಮಾವಧಿ (115-120 ದಿನಗಳು) ಸಂಕರಣ ತಳಿಯಾಗಿದೆ. ಎಲೆ ಅಂಗಮಾರಿ ರೋಗಕ್ಕೆ ನಿರೋಧಕತೆ ಮತ್ತು ಕೇದಿಗೆ ರೋಗಕ್ಕೆ ಸಾಧಾರಣಾ ನಿರೋಧಕತೆ ಹೊಂದಿದ್ದು, ಕಟಾವಿನ ಹಂತದಲ್ಲಿಯೂ ಹಸಿರಾಗಿದ್ದು, ಮೇವಾಗಿ ಕೂಡ ಉಪಯೋಗಿಸಬಹುದಾಗಿದೆ. ಇದರ ತೆನೆಗಳು ನೀಳವಾಗಿದ್ದು, ಕಾಳುಗಳು ತೆಳು ಕಿತ್ತಳೆ ಹಳದಿ ಬಣ್ಣದಿಂದ ಕೂಡಿದ್ದು ಮಾರುಕಟ್ಟೆ ಯಲ್ಲಿ ಉತ್ತಮ ಧಾರಣೆ ಸಿಗುತ್ತದೆ. ದಕ್ಷಿಣ ಕರ್ನಾಟಕದ ಪೂರ್ವ ಒಣ ವಲಯ (ವಲಯ 5) ಮತ್ತು ದಕ್ಷಿಣ ಒಣ ವಲಯ (ವಲಯ 6) ಗಳಿಗೆ ಶಿಫಾರಸ್ಸು ಮಾಡಲಾಗಿದೆ.

ಕೊರಲೆ/ ಜಿಪಿಯುಬಿಟಿ-2: ಈ ತಳಿಯು ಅಧಿಕ ಧಾನ್ಯದ ಇಳುವರಿ (6-8 ಕಿಂ/ಎ) ಹಾಗೂ ಮೇವಿನ ಇಳುವರಿ (1.0-1.2 ಟ/ಎ) ನೀಡುತ್ತದೆ ಮತ್ತು ಸುಮಾರು 85-90 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಗಿಡಗಳು ಮಧ್ಯಮ ಎತ್ತರಕ್ಕೆ ಬೆಳೆಯುತ್ತವೆ (110-120 ಸೆಂ.ಮಿ) ಮತ್ತು ಸುಮಾರು 15-20 ತೆಂಡೆಗಳು ಬಿಡುತ್ತವೆ. ದಟ್ಟವಾದ ಮತ್ತು ಉದ್ದವಾದ ತೆನೆಯನ್ನು ಹೊಂದಿದ್ದು ದುಂಡು ಕೊರಲೆಯೆಂದು ಕರೆಯುತ್ತಾರೆ. ಎಲೆ ಅಂಗಮಾರಿ ರೋಗಕ್ಕೆ ನಿರೋಧಕತೆಯನ್ನು ಹೊಂದಿದೆ. ವಲಯ 5 ಮತ್ತು 6ಕ್ಕೆ ಶಿಫಾರಸ್ಸು ಮಾಡಲಾಗಿದೆ.

ಇದನ್ನೂ ಓದಿ: ನ್ಯಾನೋ ರಸಗೊಬ್ಬರ ಬಳಕೆಯಿಂದ ರೈತರಿಗಾಗುವ ಉಪಯೋಗಗಳೇನು?

ಅವರೆ/ ಹೆಚ್‌ಎ-5: ಈ ತಳಿಯು ಅಲ್ಪಾವಧಿ ತಳಿಯಾಗಿದ್ದು (90-95 ದಿನಗಳು), ಹೆಚ್ಚಿನ ಹಸಿ ಕಾಯಿ (13-14 ಕ್ವಿಂ/ಎ) ಮತ್ತು ಒಣ ಬೀಜದ (2.5-3.0 ಕ್ವಿಂ/ಎ) ಇಳುವರಿ ಕೊಡುತ್ತದೆ. ಸೂರ್ಯ ರಶ್ಮಿ ಅವಧಿಗೆ ಸಂವೇಧನಾಶೀಲತೆ ಹೊಂದಿರುವುದಿಲ್ಲ ಮತ್ತು ಅರೆ ನಿರ್ಣಾಯಕ ಬೆಳವಣಿಗೆ ಆವಾಸಸ್ಥಾನ ಹೊಂದಿದೆ. ವಲಯ ೫ಕ್ಕೆ ಶಿಫಾರಸ್ಸು ಮಾಡಲಾಗಿದೆ.

ಎಳ್ಳು/ ಜಿಕೆವಿಕೆಎಸ್-1: ಈ ತಳಿಯು ಅಲ್ಪಾವಧಿ ತಳಿಯಾಗಿದ್ದು (80-85 ದಿನಗಳು), ಹೆಚ್ಚು ರೆಂಬೆಗಳು, ತುಂಬಿದ ಕಾಯಿಗಳು ಮತ್ತು ಕಾಯಿ ಬಲಿಯುವಾಗಲೂ ಎಲೆ ಹಸಿರಾಗಿರುತ್ತದೆ. ಬಿಳಿ ಬಣ್ಣದ ಬೀಜಗಳಿದ್ದು, ಶೇ. 47-48ರಷ್ಟು ಎಣ್ಣೆ ಅಂಶವನ್ನು ಹೊಂದಿರುತ್ತದೆ. 1.8-2.0 ಕ್ವಿಂ/ಎ ಬೀಜಗಳ ಇಳುವರಿ ಮತ್ತು 90-95 ಕಿ.ಗ್ರಾಂ ಎಣ್ಣೆ ಇಳುವರಿಯನ್ನು ನೀಡುತ್ತದೆ. ವಲಯ 5ಕ್ಕೆ ಶಿಫಾರಸ್ಸು ಮಾಡಲಾಗಿದೆ.

ಹುಚ್ಚೆಳ್ಳು/ ಕೆಬಿಎನ್-2: ಈ ತಳಿಯು ಅಲ್ಪಾವಧಿ ತಳಿಯಾಗಿದ್ದು (80-85 ದಿನಗಳು), ಹೆಚ್ಚು ರೆಂಬೆಗಳು ಮತ್ತು ತುಂಬಿದ ಕಾಯಿಗಳಿಂದ ಕೂಡಿರುತ್ತದೆ. ಪ್ರತಿ ಎಕರೆಗೆ 1.9-2.0 ಕ್ವಿಂಟಾಲ್ ಬೀಜಗಳ ಇಳುವರಿ ಮತ್ತು 90-100 ಕಿ.ಗ್ರಾಂ ಎಣ್ಣೆ ಇಳುವರಿಯನ್ನು ನೀಡುತ್ತದೆ. ಕಪ್ಪಾದ ದಪ್ಪನೆಯ ಬೀಜಗಳು ಶೇ.47-48 ರಷ್ಟು ಎಣ್ಣೆ ಅಂಶವನ್ನು ಹೊಂದಿರುತ್ತದೆ. ಅಂತರ ಬೆಳೆಗೆ ಸೂಕ್ತವಾದ ತಳಿಯಾಗಿರುತ್ತದೆ. ವಲಯ 5ಕ್ಕೆ ಶಿಫಾರಸ್ಸು ಮಾಡಲಾಗಿದೆ.

ಇದನ್ನೂ ಓದಿ: ನವೆಂಬರ್ 5ರೊಳಗೆ ಅರ್ಜಿ ಸಲ್ಲಿಸಿ ₹4 ಲಕ್ಷ ಬೋರ್‌ವೆಲ್ ಸಹಾಯಧನ ಪಡೆಯಿರಿ

ಹರಳು ಸಂಕರಣ ತಳಿ ಐಸಿಹೆಚ್-66: ಅಧಿಕ ಇಳುವರಿ ಸಾಮರ್ಥ್ಯವಿರುವ (6-7 ಕ್ವಿಂ/ಎಕರೆಗೆ) ಮಧ್ಯಮಾವಧಿ (ಪ್ರಥಮ ಗೊಂಚಲು ಪಕ್ವತೆ ಹೊಂದಲು ಸುಮಾರು 95-98 ದಿನಗಳು ತೆಗೆದುಕೊಳ್ಳುತ್ತದೆ) ಸಂಕರಣ ತಳಿ. ಕೆಂಪಾದ ಕಾಂಡ, ಕಾಯಿಗಳ ಮೇಲೆ ಕಡಿಮೆ ಮುಳ್ಳುಗಳಿದ್ದು, ಸುಂಕೂ/ಬೂದಿ ಮುಚ್ಚಣಿಕೆ ಗಿಡದ ಎಲ್ಲಾ ಭಾಗಗಳಲ್ಲಿ ಕಂಡು ಬರುತ್ತದೆ. ದಕ್ಷಿಣ ಕರ್ನಾಟಕದ ವಲಯಗಳಾದ 4, 5 ಮತ್ತು 6ರಲ್ಲಿ ಮುಂಗಾರು ಹಂಗಾಮಿಗೆ (ಜೂನ್-ಜುಲೈ) ಮಳೆಯಾಶ್ರಿತ ಮತ್ತು ನೀರಾವರಿ ಪ್ರದೇಶದಲ್ಲಿ ಬೆಳೆಯಲು ಸೂಕ್ತವಾಗಿದೆ. ಸೊರಗು ರೋಗಕ್ಕೆ ನಿರೋಧಕತೆಯಿದ್ದು ಹಾಗೂ ಹಸಿರು ಜಿಗಿ ಹುಳುವಿನ ಬಾಧೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಸಹಹೊಂದಿರುತ್ತದೆ. ಈ ಸಂಕರಣ ತಳಿಯನ್ನು ವಲಯ 4, 5 ಮತ್ತು 6ಕ್ಕೆ ಶಿಫಾರಸ್ಸು ಮಾಡಲಾಗಿದೆ.

ಮೇವಿನ ಜೋಳ/ ಸಿಎನ್‌ಎಫ್‌ಎಸ್-1: ಮುಂಗಾರು ಹಾಗೂ ಮಳೆಯಾಶ್ರಿತ (ಜೂನ್-ಜುಲೈ) ಮತ್ತು ಹಿಂಗಾರಿಗೆ (ಅಕ್ಟೋಬರ್- ನವೆಂಬರ್) ಸೂಕ್ತವಾದ ತಳಿ. ಈ ತಳಿಯು ಹೆಚ್ಚು ಹಸಿರು ಮೇವಿನ ಇಳುವರಿಯನ್ನು (22-23 ಟನ್/ಎ), ಉತ್ತಮ ಗುಣಮಟ್ಟದ ನಾರಿನಂಶ (35-36%) ಮತ್ತು ಸಸಾರಜನಕ (9-10%) ವನ್ನು ಕೊಡುವ ತಳಿಯಾಗಿದೆ. ಈ ತಳಿಯನ್ನು ವಲಯ 6ಕ್ಕೆ ಶಿಫಾರಸ್ಸು ಮಾಡಲಾಗಿದೆ.

ಇದನ್ನೂ ಓದಿ: ಪಿಎಂ ಕಿಸಾನ್ 12ನೇ ಕಂತಿನ ₹2,000 ತಲುಪದ ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ..

ಕೃಷಿ ಮೇಳದ ವೈಶಿಷ್ಟ್ಯತೆ

ಈ ವರ್ಷದ ಕೃಷಿ ಮೇಳದ ವೈಶಿಷ್ಟ್ಯತೆಗಳೆಂದರೆ ಇಲ್ಲಿ ಒಂಬತ್ತು ಹೊಸ ತಳಿಗಳು ಮತ್ತು ೩೮ ತಂತ್ರಜ್ಞಾನಗಳ ಬಿಡುಗಡೆಯಾಗಲಿವೆ. ಕೃಷಿ ಸಾಧಕರಿಗೆ ಪುರಸ್ಕಾರ, ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ತಾಕುಗಳ ಅನಾವರಣವಾಗಲಿದೆ.

  • ಸುಧಾರಿತ ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳು
  • ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು
  • ನೂತನವಾಗಿ ಬಿಡುಗಡೆಯಾದ ವಿವಿಧ  ಬೆಳೆ ತಳಿಗಳ ಪ್ರಾತ್ಯಕ್ಷಿಕೆ
  • ತೋಟಗಾರಿಕೆ ಬೆಳೆಗಳ ಮತ್ತು  ನಿಖರ ಕೃಷಿ ಪ್ರಾತ್ಯಕ್ಷಿಕೆ
  • ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ
  • ಸಿರಿಧಾನ್ಯಗಳು ಹಾಗೂ ಮಹತ್ವ
  • ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯಗಳು
  • ಜಲಾನಯನ ನಿರ್ವಹಣೆ
  • ಸಾವಯವ ಕೃಷಿ ಪದ್ಧತಿಗಳು
  • ಸಮಗ್ರ ಪೋಷಕಾಂಶಗಳು, ರೋಗ ಹಾಗೂ ಪೀಡೆ ನಿರ್ವಹಣೆ
  • ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ
  • ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು
  • ಮಳೆ ಹಾಗೂ ಮೇಲ್ಛಾವಣಿ  ನೀರಿನ ಕೋಯ್ಲು
  • ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ
  • ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ
  • ಬಿತ್ತನೆ ಬೀಜಗಳ ಪರೀಕ್ಷೆ ಹಾಗೂ ಶೇಖರಣೆ
  • ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಣೆ
  • ಮಾರುಕಟ್ಟೆ ನೈಪುಣ್ಯತೆ ಮಾಹಿತಿ
  • ಹವಾಮಾನ ಚತುರ ಕೃಷಿ
  • ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ
  • ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ
  • ರೈತ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ ಹಾಗೂ ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ
  • ಮಣ್ಣು ರಹಿತ ಕೃಷಿ

ಇದನ್ನೂ ಓದಿ: ಭೀಮಾ ಪಲ್ಸ್ ಬ್ರ್ಯಾಂಡ್ ತೊಗರಿ ರೈತರಿಗೆ ತರಲಿದೆ ಭಲೇ ಡಿಮ್ಯಾಂಡ್

ಕೃಷಿ ಸಾಧಕರಿಗೆ ಪುರಸ್ಕಾರ

ರಾಜ್ಯ ಮಟ್ಟದ ಪ್ರಶಸ್ತಿಗಳು: ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗುವುದು, ಅವುಗಳೆಂದರೆ

  1. ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ / ರೈತ ಮಹಿಳೆ ಪ್ರಶಸ್ತಿ
  2. ಡಾ. ಎಂ.ಹೆಚ್. ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ / ರೈತ ಮಹಿಳೆ ಪ್ರಶಸ್ತಿ
  3. ಕೆನರಾ ಬ್ಯಾಂಕ್ ಪ್ರಯೋಜಿತ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ
  4. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ
  5. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ/ರೈತಮಹಿಳೆ ಪ್ರಶಸ್ತಿ

ಜಿಲ್ಲಾ ಮಟ್ಟದ ಪ್ರಶಸ್ತಿಗಳು

ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ಮತ್ತು ರೈತ ಮಹಿಳಾ ಪ್ರಶಸ್ತಿ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯಾಪ್ತಿಗೆ ಒಳಪಡುವ ೧೦ ಜಿಲ್ಲೆಗಳಲ್ಲಿ ಪ್ರಗತಿಪರ ರೈತ ಪ್ರಶಸ್ತಿ ಮತ್ತು ಪ್ರಗತಿಪರ ರೈತ ಮಹಿಳಾ ಪ್ರಶಸ್ತಿಗಳನ್ನು ಅರ್ಹ ಪ್ರಗತಿ ಪರ ರೈತ ಮತ್ತು ರೈತ ಮಹಿಳೆಯರಿಗೆ ನೀಡಲಾಗುವುದು.

ತಾಲ್ಲೂಕು ಮಟ್ಟದ ಪ್ರಶಸ್ತಿಗಳು

ತಾಲ್ಲೂಕು ಮಟ್ಟದ ಪ್ರಗತಿಪರ ಯುವ ರೈತ ಪ್ರಶಸ್ತಿ ಮತ್ತು ಯುವ ರೈತ ಮಹಿಳಾ ಪ್ರಶಸ್ತಿ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯಾಪ್ತಿಗೆ ಒಳಪಡುವ 61 ತಾಲ್ಲೂಕುಗಳಲ್ಲಿ ಪ್ರಗತಿಪರ ಯುವ ರೈತ ಪ್ರಶಸ್ತಿ ಮತ್ತು ಪ್ರಗತಿಪರ ಯುವ ರೈತ ಮಹಿಳಾ ಪ್ರಶಸ್ತಿಗಳನ್ನು ಅರ್ಹ ಪ್ರಗತಿಪರ ಯುವ ರೈತ ಮತ್ತು ಪ್ರಗತಿಪರ ಯುವ ರೈತ ಮಹಿಳೆಯರಿಗೆ  ನೀಡಲಾಗುವುದು. ಅಭ್ಯರ್ಥಿಗಳ ವಯಸ್ಸು 35 ವರ್ಷ ಮೀರಿರಬಾರದು.

ಇದನ್ನೂ ಓದಿ: ನಿಮಗಿನ್ನೂ ಬೆಳೆಹಾನಿ ಮತ್ತು ಮನೆಹಾನಿ ಪರಿಹಾರ ಬಂದಿಲ್ಲವೆ? ಇಲ್ಲಿದೆ ಮಹತ್ವದ ಮಾಹಿತಿ

ಕೃಷಿ ವಸ್ತು ಪ್ರದರ್ಶನ 

ಕೃ.ವಿ.ವಿ, ಬೆಂಗಳೂರು ಮಳಿಗೆಗಳ, ಕೃಷಿ ಸಂಬಂಧಿ ವಿಶ್ವವಿದ್ಯಾನಿಲಯಗಳು / ಸಂಸ್ಥೆಗಳು, ಅಭಿವೃದ್ಧಿ ಇಲಾಖೆಗಳ ಮಳಿಗೆಗಳು, ಕೃಷಿ ಪರಿಕರಗಳ ಮಳಿಗೆಗಳು, ಕೃಷಿ ಇಂಜಿನಿಯರಿಂಗ್ ಮತ್ತು ಪಶುಸಂಗೋಪನೆ ಮತ್ತು ಕೃಷಿ ವಿಶ್ವವಿದ್ಯಾನಿಲಯದ ನೂತನ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುವುದು ಹಾಗೂ ರೈತರ ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ, ತಜ್ಞ ವಿಜ್ಞಾನಿಗಳ ತಂಡದಿಂದ ಕೃಷಿ ಸಂಬಂಧಿ ಪ್ರಶ್ನೆಗಳಿಗೆ ಭತಿಕವಾಗಿ ಮತ್ತು ಜೂಮ್ ಸಭೆ ಮೂಲಕ ನೇರ ಪರಿಹಾರ, ಪ್ರಾತ್ಯಕ್ಷಿಕಾ ತಾಕುಗಳು, ಮಳಿಗೆಗಳು ಮತ್ತು  ಕೃಷಿ ಮೇಳದ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು,  ನೂತನವಾಗಿ ಬಿಡುಗಡೆಯಾದ ವಿವಿಧ  ಬೆಳೆ ತಳಿಗಳ ಪ್ರಾತ್ಯಕ್ಷಿಕೆ,  ತೋಟಗಾರಿಕೆ ಬೆಳೆಗಳ ಮತ್ತು  ನಿಖರ ಕೃಷಿ ಪ್ರಾತ್ಯಕ್ಷಿಕೆ, ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳು ಹಾಗೂ ಮಹತ್ವ, ಔಷಧೀಯ ಮತ್ತು ಸುಗಂಧದ್ರವ್ಯ  ಸಸ್ಯಗಳು, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ಧತಿಗಳು, ಸಮಗ್ರ ಪೋಷಕಾಂಶಗಳು ಹಾಗೂ ಪೀಡೆ ನಿರ್ವಹಣೆ, ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ, ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ, ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು, ಮಳೆ ಹಾಗೂ ಮೇಲ್ಛಾವಣಿ  ನೀರಿನ ಕೋಯ್ಲು, ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಬಿತ್ತನೆ ಬೀಜಗಳ ಪರೀಕ್ಷೆ ಹಾಗೂ ಶೇಖರಣೆ, ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಣೆ, ಮಾರುಕಟ್ಟೆ ನೈಪುಣ್ಯತೆ ಮಾಹಿತಿ, ಹವಾಮಾನ ಚತುರ ಕೃಷಿ, ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ, ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ, ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ, ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ ವ್ಯವಸ್ಥೆ ಮಾಡಲಾಗುವುದು.

ವಿಶೇಷ ಸವಲತ್ತುಗಳು 

ಜಿ.ಕೆ.ವಿ.ಕೆಯ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣಕ್ಕೆ ತಲುಪಲು ಉಚಿತ ಸಾರಿಗೆ ವ್ಯವಸ್ಥೆ, ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆ ಇರುತ್ತದೆ. ಜೊತೆಗೆ ಉಚಿತ ಪ್ರವೇಶ ಮತ್ತು ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಇರುತ್ತದೆ.

ಇದನ್ನೂ ಓದಿ: ಲಾಭದಾಯಕ ಎರೆಹುಳು ಕೃಷಿ: ಇಲ್ಲಿದೆ ಸಮಗ್ರ ಮಾಹಿತಿ… 

WhatsApp Group Join Now
Telegram Group Join Now

Related Posts

error: Content is protected !!