ಪಶುಪಾಲನೆ

ಆಡು-ಕುರಿ ಮರಿಗಳು ಬೇಗ ಕೊಬ್ಬಲು ಈ ರೀತಿ ಆಹಾರ ನೀಡಿ | Goat-Sheep kid food

WhatsApp Group Join Now
Telegram Group Join Now

ಕುರಿ-ಮೇಕೆಗಳು ಹೆಚ್ಚಿನ ಮಾಂಸ ಉತ್ಪಾದನೆ ಮಾಡಲು ಉತ್ತಮ ದರ್ಜೆಯ ಪೌಷ್ಟಿಕವಾದ ಹಸಿರು ಮೇವು, ಒಣ ಮೇವು ಹಾಗೂ ಸಮತೋಲನ ಆಹಾರ ಬಹಳ ಮುಖ್ಯ. ಕುರಿ ಮತ್ತು ಮೇಕೆ ಮರಿಗಳು ಆರೋಗ್ಯಪೂರ್ಣವಾಗಿ ಕೊಬ್ಬಿ ಹೆಚ್ಚಿನ ಮಾಂಸ ಇಳುವರಿ ನೀಡಲು ಯಾವ ರೀತಿಯ ಆಹಾರ ನೀಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ…

ಇತ್ತೀಚಿನ ದಿನಗಳಲ್ಲಿ ಸುಧಾರಿತ ಸಾಕಾಣಿಕೆ ಪದ್ದತಿಗಳನ್ನು ಅಳವಡಿಸಿಕೊಂಡು ಕುರಿ-ಮೇಕೆ ಸಾಕಾಣಿಕೆ ಕೈಗೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ರೈತರು ಆಸಕ್ತಿ ತೋರುತ್ತಿದ್ದಾರೆ. ಸಾಮಾನ್ಯವಾಗಿ ರೈತರು ಕುರಿ-ಮೇಕೆಗಳನ್ನು ಹೊರಗಡೆ ಬಿಟ್ಟು ಮೇಯಿಸುತ್ತಾರೆ. ಕೆಲವು ಕುರಿಗಾರರು ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಹಟ್ಟಿಯಲ್ಲಿದ್ದ ಸಮಯದಲ್ಲಿ ತಾವು ಬೆಳೆದ ಬೆಳೆಗಳಲ್ಲಿ ಕಾಳು ಪಡೆದ ನಂತರ ದೊರೆಯುವ ಉಳಿಕೆ ಉತ್ಪನ್ನಗಳನ್ನು ಒಣಗಿಸಿ ಸಂಗ್ರಹಿಸಿಟ್ಟ ಮೇವನ್ನು ಕುರಿ-ಮೇಕೆಗಳಿಗೆ ನೀಡುತ್ತಾರೆ.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸಬ್ಸಿಡಿ ಸೌಲಭ್ಯಗಳು

ಇದರಿಂದ ಅವುಗಳ ದೇಹಕ್ಕೆ ಬೇಕಾದ ಎಲ್ಲಾ ಆಹಾರ ಪೋಷಕಾಂಶಗಳು ದೊರೆಯುವುದಿಲ್ಲ. ಅವುಗಳು ಉತ್ತಮ ಆರೋಗ್ಯದಿಂದಿದ್ದು, ಅಧಿಕ ಮಾಂಸದ ಇಳುವರಿ ನೀಡಬೇಕೆಂದರೆ ಇದರೊಂದಿಗೆ ಉತ್ತಮ ದರ್ಜೆಯ ಪೌಷ್ಟಿಕವಾದ ಹಸಿರು ಮೇವು ಒಣ ಮೇವು ಹಾಗೂ ಸಮತೋಲನ ಆಹಾರ ನೀಡುವುದು ಬಹು ಮುಖ್ಯ. ಕುರಿ-ಮೇಕೆ ಮರಿಗಳಿಗೆ ಉತ್ತಮ ಆಹಾರ ನೀಡದಿದ್ದಲ್ಲಿ ಅವುಗಳು ಅಪೌಷ್ಟಿಕತೆಯಿಂದಾಗಿ ಮರಣ ಹೊಂದುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಹಾಗೂ ಅವುಗಳಿಂದ ಹೆಚ್ಚಿನ ಮಾಂಸ ಉತ್ಪಾದನೆ ಮಾಡಲು ಈ ಕೆಳಕಂಡ ಪ್ರಮುಖ ಅಂಶಗಳನ್ನು ಗಮನಿಸಬೇಕಾಗಿದೆ:

ಸಾಮಾನ್ಯವಾಗಿ ಆಡು ಮತ್ತು ಕುರಿಗಳು ಮಾರ್ಚ್-ಏಪ್ರಿಲ್ ಮತ್ತು ಜುಲೈ-ಆಗಸ್ಟ್ ತಿಂಗಳಲ್ಲಿ ಗರ್ಭ ಕಟ್ಟಿ, ಆಗಸ್ಟ್-ಸೆಪ್ಟಂಬರ್ ಮತ್ತು ಡಿಸೆಂಬರ್-ಜನವರಿ ತಿಂಗಳಲ್ಲಿ ಮರಿ ಹಾಕುತ್ತವೆ. ಉತ್ತಮವಾಗಿ ಸಾಕಾಣಿಕೆ ಮಾಡಿದಲ್ಲಿ ಪ್ರತಿ ಎಂಟು ತಿಂಗಳಿಗೊಮ್ಮೆ ಮರಿಗಳನ್ನು ಪಡೆಯಬಹುದು.

ಇದನ್ನೂ ಓದಿ: ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ದೇಶಿಯ ಕುರಿ ಮತ್ತು ಆಡುಗಳಲ್ಲಿ ಹುಟ್ಟಿದ ಮರಿಗಳ ದೇಹ ತೂಕ 2.5 ರಿಂದ 3 ಕಿ.ಗ್ರಾಂ ಇರುತ್ತದೆ. ಮರಿ ಹುಟ್ಟಿದ ಮೊದಲ 48 ಗಂಟೆ ಅತಿ ಕ್ಲಿಷ್ಟಕರವಾಗಿದ್ದು, ಈ ಸಮಯದಲ್ಲಿ ಮರಿಗಳು ಸರಿಯಾದ ಪ್ರಮಾಣದಲ್ಲಿ ಹಾಲನ್ನು ಕುಡಿಯುವಂತೆ ನೋಡಿಕೊಳ್ಳಬೇಕು. ಚಳಿಗಾಲದಲ್ಲಿ ಮರಿಗಳು ಬೆಚ್ಚಗೆ ಇರುವಂತೆ ವ್ಯವಸ್ಥೆ ಮಾಡಬೇಕು.

ಮರಿ ಹುಟ್ಟಿದ ಮೊದಲ 72 ಗಂಟೆಗಳ ವರೆಗೂ ತಾಯಿ ಕುರಿ ಮತ್ತು ಮರಿಯನ್ನು ಒಟ್ಟಿಗೆ ಬೆಚ್ಚನೆಯ 3X4 ಅಳತೆಯ ಜಾಗದಲ್ಲಿ ಕೂಡಿಡಬೇಕು. ಇದರಿಂದ ತಾಯಿ ಮರಿಯ ಸಂಬಂಧ ವೃದ್ಧಿಸುತ್ತದೆ ಮತ್ತು ಮರಿಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ಕುಡಿಯುವುದರಿಂದ ಉತ್ತಮ ಬೆಳವಣಿಗೆ ಹೊಂದಲು ಅನುಕೂಲವಾಗುತ್ತದೆ.

ಪ್ರತಿ ಒಂದು ಕಿ.ಗ್ರಾಂ ಮರಿಗಳ ದೇಹದ ತೂಕಕ್ಕೆ 100 ಮಿಲಿ ಲೀಟರ್ ಹಾಲು ಪ್ರತಿ ದಿನಕ್ಕೆ ಬೇಕಾಗುತ್ತದೆ. ಹುಟ್ಟಿದ ಅರ್ಧ ಗಂಟೆಯೊಳಗೆ ಮರಿಗಳು ತಾಯಿಯ ಹಾಲನ್ನು ಕುಡಿಯದಿದ್ದರೆ ಅಂತಹ ಮರಿಗಳಿಗೆ ಹಾಲು ಕುಡಿಯಲು ಸಹಾಯ ಮಾಡಬೇಕು.

ಮೊದಲ ನಾಲ್ಕು ತಿಂಗಳುಗಳು ಕುರಿ ಮರಿಗಳು ಮೇಕೆ ಮರಿಗಳಿಗಿಂತ ವೇಗವಾಗಿ ಬೆಳೆಯುವುದರ ಜೊತೆಗೆ ಬಹುಬೇಗ ಹುಲ್ಲನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೀಗಾಗಿ ಕುರಿ ಮರಿಗಳಿಗೆ ನೆರಳಿನಲ್ಲಿ ಬಾಡಿಸಿದ ದ್ವಿದಳ ಧಾನ್ಯದ ಹಸಿ ಹುಲ್ಲನ್ನು ಹುಟ್ಟಿದ 10 ದಿನಗಳಿಂದಲೇ ಮೇಯಲು ನೀಡಬಹುದು.

ಇದನ್ನೂ ಓದಿ: ಜಮೀನು ಕಾಲುದಾರಿ, ಬಂಡಿದಾರಿ ಸಮಸ್ಯೆಗೆ ಇಲ್ಲಿದೆ ಸುಲಭ ಕಾನೂನು ಪರಿಹಾರ… 

ತಾಯಿ ಕುರಿ-ಮೇಕೆಗಳಲ್ಲಿ ಹಾಲಿನ ಕೊರತೆ ಕಂಡು ಬಂದರೆ, ಬೇರೆ ಕುರಿ-ಮೇಕೆ ಅಥವಾ ಹಸುವಿನ ಹಾಲು ಕುಡಿಸಬಹುದು. ಇಲ್ಲವೇ ಶೇಕಡಾ 30ರಷ್ಟು ಹಾಲಿನ ಪುಡಿ, ಶೇ.09ರಷ್ಟು ಸೋಯಾ ಅವರೆ ಹಿಂಡಿ, ಶೇ.52ರಷ್ಟು ಗೋಧಿ ಹಿಟ್ಟು, ಶೇ.07ರಷ್ಟು ತೆಂಗಿನ ಎಣ್ಣೆ ಹಾಗೂ ಶೇ.02ರಷ್ಟು ಖನಿಜ ಮಿಶ್ರಣವನ್ನು ನೀರಿನೊಂದಿಗೆ ಬೆರೆಸಿ ವಿಶೇಷ ಪದಾರ್ಥ ರೆಡಿ ಮಾಡಿಕೊಂಡು ಹಾಲಿನ ಬದಲಾಗಿ ಕುಡಿಸಬಹುದು.

ಮರಿಗಳು ಹುಟ್ಟಿದ 10 ದಿನಗಳಿಂದ ಅಲ್ಪ ಪ್ರಮಾಣದಲ್ಲಿ ಉತ್ಕೃಷ್ಟ ಪೌಷ್ಠಿಕಾಂಶಗಳನ್ನು ಹೊಂದಿರುವ ಆಹಾರ ಮಿಶ್ರಣ ನೀಡುವುದರಿಂದ ಮರಿಗಳ ದಷ್ಟಪುಷ್ಟ ಬೆಳವಣಿಗೆಗೆ ಸಹಾಯವಾಗುತ್ತದೆ.

ಸುಮಾರು 20 ಕಿ.ಗ್ರಾಂ ತೂಕವಿರುವ ಕುರಿ-ಮೇಕೆ ಮರಿಗಳು ಪ್ರತಿ ದಿನಕ್ಕೆ 70 ರಿಂದ 100 ಗ್ರಾಂ ಗಳಷ್ಟು ದೇಹದ ತೂಕವನ್ನು ವೃದ್ಧಿಸಿಕೊಳ್ಳಬೇಕು. ಹೀಗೆ ದೇಹತೂಕ ವೃದ್ದಿಸಿಕೊಳ್ಳಲು ಸಮತೋಲನ ಆಹಾರ ಅತ್ಯಗತ್ಯ.

ಏಕದಳ ಮೇವಿನ ಬೆಳೆಯ ಹುಲ್ಲು 1.50 ಕಿ.ಗ್ರಾಂ, ದ್ವಿದಳ ಮೇವಿನ ಬೆಳೆಯ ಒಣಗಿದ ಹುಲ್ಲು ಅರ್ಧ ಕಿ.ಗ್ರಾಂ ಹಾಗೂ ಸಮತೋಲನ ಆಹಾರ 200 ಗ್ರಾಂನಷ್ಟು ಒದಗಿಸಿದರೆ ಆಡು-ಕುರಿ ಮರಿಗಳು ಸಮೃದ್ಧವಾಗಿ ಬೆಳೆದು ಅಧಿಕ ಮಾಂಸದ ಇಳುವರಿ ನೀಡುತ್ತವೆ.

ಡಾ. ಗೌ ಮು ನಾಗರಾಜು, ಪಶುಪಾಲನಾ ಇಲಾಖೆ ಉಪ ನಿರ್ದೇಶಕರು

ಇದನ್ನೂ ಓದಿ: ಮೊಬೈಲ್‌ನಲ್ಲೇ ಪಡೆಯಿರಿ ನಿಮ್ಮೂರಿನ ಮಳೆ, ಬೆಳೆ, ಜಾನುವಾರು ಮಾಹಿತಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!