ಪಂಚಾಯತಿ ಸುದ್ದಿ

ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಬರಲಿದೆ ಹೊಸ ಯೋಜನೆ: ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳಿಗೆ ತರಬೇತಿ | Grama Panchayat visionary plan

WhatsApp Group Join Now
Telegram Group Join Now

ಗ್ರಾಮ ಪಂಚಾಯತಿಗಳ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುವಂತೆ ದೂರದೃಷ್ಟಿ ಯೋಜನೆಗೆ ಸರಕಾರ ತೀವ್ರ ತಯಾರಿ ನಡೆಸಿದೆ. ಏನಿದು ದೂರದೃಷ್ಟಿ ಯೋಜನೆ? ಗ್ರಾಮೀಣ ಅಭಿವೃದ್ಧಿಗೆ ಈ ಯೋಜನೆ ಎಷ್ಟು ಪೂರಕ? ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಪಿಡಿಒ ಮತ್ತು ಸಿಬ್ಬಂದಿಗಳ ಪಾತ್ರವೇನು? ಸಂಪೂರ್ಣ ಮಾಹಿತಿ ಇಲ್ಲಿದೆ… 

ಗ್ರಾಮ ಪಂಚಾಯತ್ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುವಂತೆ ದೂರದೃಷ್ಟಿ ಯೋಜನೆಗೆ ಸರಕಾರ ತೀವ್ರ ತಯಾರಿ ನಡೆಸಿದೆ. ಜನರ ಯೋಜನೆ ಹೆಸರಿನಲ್ಲಿ ಪ್ರತೀ ಪಂಚಾಯತ್‌ಗಳಲ್ಲೂ ದೂರದೃಷ್ಟಿ ಯೋಜನೆ ಮೂಲಕ ಮಾಹಿತಿ ಸಂಗ್ರಹ ನಡೆಸಲು ತರಬೇತಿ ಆರಂಭವಾಗಿದೆ. ತರಬೇತಿ ಮೊದಲ ಹಂತವಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಉಪಕಾರ್ಯದರ್ಶಿಗಳಿಗೆ ಬೆಂಗಳೂರಿನಲ್ಲಿ ಹಾಗೂ ತಾಲ್ಲೂಕು ಪಂವಾಯತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮೈಸೂರಿನಲ್ಲಿ ತರಬೇತಿ ನಡೆದಿದೆ. ಜೊತೆಗೆ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಆಯಾ ತಾಲೂಕಿನಲ್ಲಿ ತರಬೇತಿ ನಡೆಯುತ್ತಿದೆ.

ಗಮನಾರ್ಹವೆಂದರೆ ತರಬೇತಿಗಾಗಿಯೇ ಸರಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ತರಬೇತಿಗೆ ಹಾಜರಾದ 5,963 ಗ್ರಾಮ ಪಂಚಾಯತಿಗಳ 68 ಸಾವಿರ ಸದಸ್ಯರಿಗೂ ದಿನಕ್ಕೆ 300 ರೂಪಾಯಿಗಳಂತೆ ಭತ್ತೆಯಿದ್ದು, ಮೂರು ದಿನಗಳ ತರಬೇತಿ ಆಯೋಜಿಸಲಾಗಿದೆ. ತರಬೇತಿ ನೀಡುವವರಿಗೆ 1,750 ರೂಪಾಯಿ ದೊರೆಯಲಿದೆ. ಉಪಗ್ರಹ ಆಧಾರಿತ ತರಬೇತಿಯೂ ಒಳಗೊಂಡಿದ್ದು, ಗಂಟೆಗೆ ಅಂದಾಜು ಮೂರು ಲಕ್ಷ ರೂಪಾಯಿ ತೆತ್ತು ಉಪಗ್ರಹ ಬಾಡಿಗೆ ಪಡೆಯಲಾಗಿದೆ.

ಇದನ್ನೂ ಓದಿ: ಯುವಕ ಸಂಘ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಸಿಗಲಿದೆ ₹5 ಲಕ್ಷ ಆರ್ಥಿಕ ನೆರವು

ಏನಿದು ದೂರದೃಷ್ಟಿ ಅಭಿವೃದ್ಧಿ ಯೋಜನೆ?

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಳೆದ ವರ್ಷ 2021ರ ಫೆಬ್ರವರಿ 6ರಂದು ನಡೆದ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆ ನೆನಪಿಗಾಗಿ 2021-22ನೇ ಸಾಲಿನಿಂದ 2025-26ನೇ ಸಾಲಿನ ವರೆವಿಗೆ ಐದು ವರ್ಷದ ಅವಧಿಗೆ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆಯನ್ನು ತಯಾರಿಸಿ ಜನರ ಯೋಜನೆ ಹೆಸರಿನಲ್ಲಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 309-ಬಿ ರನ್ವಯ ಗ್ರಾಮ ಪಂಚಾಯಿತಿಗಳು ಹೊಸದಾಗಿ ರಚನೆಯಾದ ಕೂಡಲೆ ಐದು ವರ್ಷಗಳ ದೂರದೃಷ್ಟಿ ಯೋಜನೆಯನ್ನು ಮೂರು ತಿಂಗಳಲ್ಲಿ ತಯಾರಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ರೈತರ ಆದಾಯ ಹೆಚ್ಚಿಸುವ ತಂತ್ರಜ್ಞಾನ ಅನಾವರಣ… 

ಸ್ವಯಂ ಆಡಳಿತ ಸಂಸ್ಥೆಗಳಾದ ಪಂಚಾಯಿತಿಗಳು ಸರ್ವತೋಮುಖವಾದ ಅಭಿವೃದ್ಧಿಯನ್ನು ಸಾಧಿಸುವುದು ಮತ್ತು ಸಾಮಾಜಿಕ ನ್ಯಾಯ ಸ್ಥಾಪನೆಗಾಗಿ, ಸುರಕ್ಷಿತವಲ್ಲದ ವರ್ಗಗಳ ಹಿತಾಸಕ್ತಿಗೆ ಒತ್ತು ನೀಡಿ ಎಲ್ಲಾ ವರ್ಗಗಳ ಜನರ ಅಗತ್ಯತೆಗಳನ್ನು ನಿರ್ಧರಿಸಿ ನಿರ್ಣಯಿಸುವ ಮತ್ತು ತಳಮಟ್ಟದಿಂದ ಅಭಿವೃದ್ಧಿಯಾಗುವಂತೆ ಯೋಜನೆಗಳನ್ನು ಅವುಗಳಿಗೆ ಆದ್ಯತೆ ನಿಗದಿ ಮಾಡಿ ಸಿದ್ಧಪಡಿಸಬೇಕಾಗಿರುತ್ತದೆ.

ಪ್ರತಿಯೊಂದು ಗ್ರಾಮ ಪಂಚಾಯಿತಿಯು ದೂರದೃಷ್ಟಿ ಅಭಿವೃದ್ಧಿ ಯೋಜನೆಯನ್ನು ತನ್ನ ಅವಧಿಯ ಐದು ವರ್ಷಗಳಿಗಾಗಿ ಪ್ರತಿ ವರ್ಷಕ್ಕೆ ಅಗತ್ಯ ಆಧಾರಿತ ವಾರ್ಷಿಕ ಯೋಜನೆಗಳನ್ನು ಸಿದ್ಧಪಡಿಸಲು ಅನುಕೂಲವಾಗುವಂತೆ ರೂಪಿಸಬೇಕಾಗಿರುತ್ತದೆ.

ಎಲ್ಲ ವಲಯಗಳ ಅಭಿವೃದ್ಧಿ ದೂರದೃಷ್ಟಿ 

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಅಭಿವೃದ್ಧಿ ಮೈಲುಗಲ್ಲುಗಳನ್ನು ಸಾಧಿಸಲು ಸಹಕಾರಿಯಾಗುವಂತೆ, ಮಾನವ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಗ್ರಾಮ ಪಂಚಾಯಿತಿಗಳು ಪರಿಣಾಮಕಾರಿಯಾಗಿ ದೂರದೃಷ್ಟಿ ಯೋಜನೆಯನ್ನು ಸಿದ್ಧಪಡಿಸುವುದು. ಇದರಿಂದ ಸಾಧನೆಯ ಪ್ರಗತಿಯನ್ನು ಗುರುತಿಸಲು ಸುಲಭವಾಗಲಿದೆ.

ಈ ದೂರದೃಷ್ಟಿ ಯೋಜನೆಯನ್ನು ರೂಪಿಸುವ ಸಂದರ್ಭದಲ್ಲಿ ರಾಜ್ಯ ವ್ಯಾಪಿ ಗ್ರಾಮ ಪಂಚಾಯಿತಿಗಳು ಒಂದೇ ರೀತಿಯ ಯೋಜನೆಯನ್ನು ಸಿದ್ಧಪಡಿಸಲಾಗುವುದಿಲ್ಲ. ಹಾಗಾಗಿ ಸದರಿ ಗ್ರಾಮ ಪಂಚಾಯಿತಿಯ ವಸ್ತುಸ್ಥಿತಿ, ಅಲ್ಲಿಯ ಪ್ರಾದೇಶಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಪರಿಸರ ಸಂಬಂಧಿ ಅಂಶಗಳನ್ನು ಗಮನದಲ್ಲಿರಿಸಿಕೊಂಡು ದೂರದೃಷ್ಟಿ ಯೋಜನೆಯನ್ನು ಸಿದ್ಧಪಡಿಸಲಾಗುವುದು.

ದೂರದೃಷ್ಟಿ ಯೋಜನೆಯನ್ನು ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳು, ಸಾಮಾಜಿಕ ಭದ್ರತೆ, ಸ್ಥಳೀಯ ಆರ್ಥಿಕ ಚಟುವಟಿಕೆಗಳು ಹಾಗೂ ಇತರೆ ಚಟುವಟಿಕೆಗಳನ್ನು ಆಧರಿಸಿ ಸಿದ್ಧಪಡಿಸುವುದು. ಪ್ರತಿ ವಲಯವಾರು ಸಾಮಾಜಿಕ ಹಾಗೂ ಮೂಲಸೌಕರ್ಯ ಅಗತ್ಯತೆಗಳನ್ನು ಗುರುತಿಸುವುದು. ಹಾಗೆಯೇ ನಿಗದಿಪಡಿಸಲಾದ ಗುರಿಗಳನ್ನು ಹಂತಹಂತವಾಗಿ ಸಾಧಿಸಲು ಅನುದಾನಗಳ ಲಭ್ಯತೆಯನ್ವಯ ಕ್ರಮ ಕೈಗೊಳ್ಳುವುದು.

ಇದನ್ನೂ ಓದಿ: ನಿರಂತರ ವಿದ್ಯುತ್ ಪಡೆಯಲು ಈ ಯೋಜನೆಯಿಂದ ರೈತರಿಗೆ ಸಿಗಲಿದೆ ಬಂಪರ್ ಸಹಾಯಧನ

ದೂರದೃಷ್ಟಿ ಯೋಜನೆ ಪ್ರಕ್ರಿಯೆ ಹೇಗೆ?

ಮೇಲಿನ ಈಡೇರಿಕೆಗಾಗಿ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ತಯಾರಿಸಲು ಈ ಕೆಳಕಂಡಂತೆ ಪ್ರಕ್ರಿಯೆಗಳನ್ನು ಕೈಗೊಳ್ಳುವುದು.

ಗ್ರಾಮ ಪಂಚಾಯತಿ ಯೋಜನಾ ತಂಡದ ರಚನೆ- ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ನಿವೃತ್ತ ನೌಕರರು, ಸ್ಥಳೀಯ ವಿಷಯ ತಜ್ಞರು, ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು, ಜಿ.ಪಿ.ಎಲ್.ಎಫ್ ಪ್ರತಿನಿಧಿಗಳು, ಮಹಿಳಾ ಸ್ವಸಹಾಯ ಸಂಘಗಳ ಗುಂಪಿನ ಪ್ರತಿನಿಧಿ ಹಾಗೂ ಗ್ರಾಮ ಪಂಚಾಯಿತಿ ಅವಶ್ಯವೆಂದು ಪರಿಗಣಿಸುವ ಇತರೆ ಸದಸ್ಯರನ್ನೊಳಗೊಂಡಂತೆ ಗ್ರಾಮ ಪಂಚಾಯಿತಿ ಮಟ್ಟದ ತಂಡ ರಚಿಸುವುದು.

ಜಿಲ್ಲಾ ಪಂಚಾಯಿತಿ ಮಟ್ಟದಿಂದ ಗ್ರಾಮ ಪಂಚಾಯಿತಿ ಮಟ್ಟದ ವರೆಗೆ ಭಾಗೀದಾರರುಗಳಿಗೆ ತರಬೇತಿಯ ಆಯೋಜನೆ ಮಾಡುವುದು. ಗ್ರಾಮ ಪಂಚಾಯತಿ ಯೋಜನಾ ತಂಡದ ನೆರವಿನಿಂದ ವಾರ್ಡ್ ಸಭೆ ಹಾಗೂ ಗ್ರಾಮ ಸಭೆ ಆಯೋಜನೆ ಮಾಡುವುದು. ಗ್ರಾಮವಾರು ಸಾಮಾಜಿಕ ಮತ್ತು ಸಂಪನ್ಮೂಲ ನಕ್ಷೆ ತಯಾರಿಸುವುದು. ಗ್ರಾಮ ಪಂಚಾಯತಿ ಯೋಜನಾ ತಂಡ ಮತ್ತು ಸಂಬಂಧಿಸಿದ ವಲಯಗಳ ಅಧಿಕಾರಿ, ಸಿಬ್ಬಂದಿಗಳಿಂದ ವಾಸ್ತವ ಸ್ಥಿತಿಯ ವಿಶ್ಲೇಷಣೆ ಮಾಡಿಸುವುದು.

ಇದನ್ನೂ ಓದಿ: ನ್ಯಾನೋ ರಸಗೊಬ್ಬರ ಬಳಕೆಯಿಂದ ರೈತರಿಗಾಗುವ ಉಪಯೋಗಗಳೇನು?

ಗ್ರಾಮ ಪಂಚಾಯತಿ ಯೋಜನಾ ತಂಡ ಮತ್ತು ಸಂಬಂಧಿಸಿದ ವಲಯಗಳ ಅಧಿಕಾರಿ, ಸಿಬ್ಬಂದಿಗಳ ಸಮನ್ವಯತೆಯಿಂದ ಆದ್ಯತೆ ಮೇರೆ ಗುರಿಗಳನ್ನು ನಿರ್ಧರಿಸುವುದು.ದೂರದೃಷ್ಟಿ ಯೋಜನೆಯನ್ನು ಸಿದ್ಧಪಡಿಸಿ ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆಯುವುದು. ಪಂಚಾಯಿತಿಗಳು ಅನುಮೋದಿಸಿದ ದೂರದೃಷ್ಟಿ ಯೋಜನೆಯನ್ನು ಪಂಚತಂತ್ರದಲ್ಲಿ ಗ್ರಾಮ ಅಳವಡಿಸುವುದು.

ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ತರಬೇತಿ ನಡೆಯುತ್ತಿದ್ದು; ಇಷ್ಟರಲ್ಲಿಯೇ ಸ್ಥಳೀಯ ಸಮಿತಿ ರಚಿಸಿ ದೂರದೃಷ್ಟಿ ಯೋಜನೆ ತಯಾರಿಸುವ ತಯಾರಿ ನಡೆಯಲಿದೆ. ಸದರಿ ದೂರದೃಷ್ಟಿ ಯೋಜನೆಯಿಂದಲಾದರೂ ಭ್ರಷ್ಟಾಚಾರದ ಅಖಾಡವಾಗಿರುವ ಗ್ರಾಮ ಪಂಚಾಯತಿಗಳ ಕಾರ್ಯವೈಖರಿ ಅಭಿವೃದ್ಧಿಗೆ ಪೂರಕವಾಗಲಿದೆಯೋ ಕಾದು ನೋಡಬೇಕಿದೆ.

ಇದನ್ನೂ ಓದಿ: ನವೆಂಬರ್ 5ರೊಳಗೆ ಅರ್ಜಿ ಸಲ್ಲಿಸಿ ₹4 ಲಕ್ಷ ಬೋರ್‌ವೆಲ್ ಸಹಾಯಧನ ಪಡೆಯಿರಿ

WhatsApp Group Join Now
Telegram Group Join Now

Related Posts

error: Content is protected !!