ಸರಕಾರಿ ಯೋಜನೆ

ರಾಜ್ಯದಲ್ಲಿ 95, 830 ಅನರ್ಹರಿಂದ ಪಿಎಂ ಕಿಸಾನ್ ಯೋಜನೆ ಹಣ ವಸೂಲಿ | PM Kisan Scheme

WhatsApp Group Join Now
Telegram Group Join Now

ರಾಜ್ಯದಲ್ಲಿ ಬರೋಬ್ಬರಿ 95,830 ಅನರ್ಹ ರೈತರಿಂದ ಪಿಎಂ ಕಿಸಾನ್ ಯೋಜನೆಯ ಹಣ ವಸೂಲಿಗೆ ಸರಕಾರ ಮುಂದಾಗಿದೆ. ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಅನರ್ಹರು? ಇವರನ್ನು ಪತ್ತೆ ಹಚ್ಚಿದ್ದು ಹೇಗೆ? ಹಣ ವಸೂಲಿಯ ಜೊತೆಗೆ ಏನೆಲ್ಲ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ? ಇತ್ಯಾದಿ ಸಮಗ್ರ ಮಾಹಿತಿ ಇಲ್ಲಿದೆ…

ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯ (PM-Kisan) ಅನರ್ಹ ರೈತರ ಪಟ್ಟಿ ಬಿಡುಗಡೆಯಾಗಿದ್ದು; ರಾಜ್ಯದಲ್ಲಿ ಬರೋಬ್ಬರಿ 95,830 ಅನರ್ಹ ರೈತರಿಂದ ಹಣ ವಸೂಲಿಗೆ ಸರಕಾರ ಮುಂದಾಗಿದೆ. ಮಾತ್ರವಲ್ಲ ಸುಳ್ಳು ದಾಖಲೆ ನೀಡಿ ಯೋಜನೆಯ ಹಣಕಾಸು ನೆರವು ಪಡೆದ ಅನರ್ಹರ ವಿರುದ್ಧ ಕ್ರಮಕ್ಕೂ ಕೃಷಿ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸಬ್ಸಿಡಿ ಸೌಲಭ್ಯಗಳು

ಆರ್ಥಿಕ ಬೆಂಬಲದ ಅಗತ್ಯವಿರುವ ರೈತ ಕುಟುಂಬಗಳಿಗೆ ಪಿಂಚಣಿ ನೀಡುವ ಈ ಯೋಜನೆಗೆ 2019ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಸದರಿ ಯೋಜನೆಯಡಿ, ಸಣ್ಣ ಮತ್ತು ಅತಿಸಣ್ಣ ರೈತರ ಬ್ಯಾಂಕ್ ಖಾತೆಗೆ ಪ್ರತಿವರ್ಷ ಕೇಂದ್ರ ಸರ್ಕಾರ 6,000 ಹಾಗೂ ರಾಜ್ಯ ಸರ್ಕಾರ 4,000 ಸೇರಿ ಒಟ್ಟು 10 ಸಾವಿರ ರೂಪಾಯಿ ನೇರವಾಗಿ ಜಮೆ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಸುಮಾರು 54 ಲಕ್ಷ ಫಲಾನುಭವಿಗಳಿದ್ದು ಇಲ್ಲಿಯವರೆಗೂ 15 ಸಾವಿರ ಕೋಟಿ ರೂಪಾಯಿ ನೆರವು ನೀಡಲಾಗಿದೆ. ಆದರೆ ನೂರಾರು ಕೋಟಿ ರೂಪಾಯಿ ಸಹಾಯಧನ ಅನರ್ಹರ ಪಾಲಾಗಿದೆ. ಇದೀಗ ಸೂಕ್ತ ಪರಿಶೀಲನೆಯ ನಂತರ ಆದಾಯ ತೆರಿಗೆ (ಐಟಿ) ಪಾವತಿಸುವ ರಾಜ್ಯದ 95,830 ಮಂದಿ ಪಿಎಂ ಕಿಸಾನ್ ಯೋಜನೆ ಅಡಿ ನಿಯಮಬಾಹಿರವಾಗಿ ಆರ್ಥಿಕ ನೆರವು ಪಡೆದಿರುವುದು ಖಚಿತವಾಗಿದೆ.

ಇದನ್ನೂ ಓದಿ: ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ಹೇಗೆಲ್ಲ ಅಕ್ರಮ?

ಲಾಗಿನ್ ಐಡಿ ದುರ್ಬಳಕೆ ಮಾಡಿಕೊಂಡು ಅರ್ಹರಲ್ಲದವರನ್ನೂ ಸಹಾಯಧನಕ್ಕೆ ಸ್ವಯಂ ನೋಂದಣಿ ಮಾಡಿರುವುದು ಬಹುತೇಕ ಕಡೆ ದೃಢಪಟ್ಟಿದೆ. ಈ ಅಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಗುತ್ತಿಗೆ ನೌಕರರು ಶಾಮೀಲಾಗಿದ್ದು, ಅಂಥವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ಗಳು ಕೂಡ ದಾಖಲಾಗಿವೆ. ಸಾಲ ಕೊಡಿಸುವ ನೆಪದಲ್ಲಿ ರೈತರ ಆಸ್ತಿ ದಾಖಲೆ ಮತ್ತು ಆಧಾರ್ ಕಾರ್ಡ್ ಪಡೆದು ನೋಂದಣಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಯಾರದ್ದೋ ಜಮೀನಿಗೆ ಇನ್ಯಾರದ್ದೋ ಬ್ಯಾಂಕ್ ಖಾತೆಗೆ ಸಹಾಯಧನ ವರ್ಗಾವಣೆಯಾಗಿದೆ.

ದುರಂತವೆಂದರೆ ಅನೇಕ ರೈತರಿಗೆ ತಮ್ಮ ಜಮೀನಿಗೆ ಬೇರೆ ಯಾರೋ ಸಹಾಯಧನ ಪಡೆಯುತ್ತಿರುವ ವಿಚಾರವೇ ಗೊತ್ತಿಲ್ಲ. ಈ ಎಲ್ಲ ಕಾರಣದಿಂದಾಗಿ ಈ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯಲು ಮತ್ತು ನಿಜವಾದ ರೈತರಿಗೆ ಮಾತ್ರ ಯೋಜನೆಯ ಹಣ ದೊರೆಯುವಂತೆ ಮಾಡಲು ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗಿದೆ. ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಇಕೆವೈಸಿ (eKYC) ಮಾಡುವುದನ್ನು ಈಗ ಕಡ್ಡಾಯ ಮಾಡಲಾಗಿದೆ.

ಇದನ್ನೂ ಓದಿ: ಜಮೀನು ಕಾಲುದಾರಿ, ಬಂಡಿದಾರಿ ಸಮಸ್ಯೆಗೆ ಇಲ್ಲಿದೆ ಸುಲಭ ಕಾನೂನು ಪರಿಹಾರ… 

ಹಣ ವಸೂಲಿಗೆ ಮುಂದಾದ ಇಲಾಖೆ

ಆದಾಯ ತೆರಿಗೆ ಪಾವತಿದಾರರು ಸದರಿ ಯೋಜನೆಯ ಆರ್ಥಿಕ ನೆರವು ಪಡೆಯಲು ಅನರ್ಹರು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೂ ಇದನ್ನು ಮುಚ್ಚಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿಯಮ ಬಾಹಿರವಾಗಿ ಕೋಟ್ಯಂತರ ರುಪಾಯಿ ನೆರವು ಪಡೆಯಲಾಗಿದೆ. ಹೀಗೆ ಪಾವತಿಯಾಗಿರುವ ಹಣ ವಸೂಲಿ ಮಾಡಲು ಕೃಷಿ ಇಲಾಖೆಯು ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಗೆ (SLBC) ಐಟಿ ಪಾವತಿದಾರರ ವಿವರ ನೀಡಿದ್ದು, ಇದನ್ನು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ರವಾನಿಸಿ ಕ್ರಮ ಕೈಗೊಳ್ಳಲು ಕೋರಿದೆ.

ಈಗಾಗಲೇ ಎಷ್ಟು ಹಣ ಪಡೆದಿದ್ದಾರೋ ಅಷ್ಟು ಮೊತ್ತವನ್ನು ಫಲಾನುಭವಿಗಳಾಗಿದ್ದವರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಿ ವಾಪಸ್ ಸರ್ಕಾರಕ್ಕೆ ಜಮಾ ಮಾಡುವಂತೆ ಪತ್ರ ಬರೆಯಲಾಗಿದೆ. ಜಂಟಿ ಕೃಷಿ ನಿರ್ದೇಶಕರು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೂ ಹಣ ವಸೂಲಿ ಬಗ್ಗೆ ಸೂಚನೆ ನೀಡಿದ್ದು ಅವರೂ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಇದನ್ನೂ ಓದಿ: SSLC, PUC, ITI ಅಭ್ಯರ್ಥಿಗಳಿಂದ ಭಾರತೀಯ ತೈಲ ನಿಗಮದಲ್ಲಿ 1,760 ಹುದ್ದೆಗಳಿಗೆ ಅರ್ಜಿ ಆಹ್ವಾನ

ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಅನರ್ಹರು?

ರಾಜ್ಯವಾರು ನೋಡುವುದಾದರೆ ಸದ್ಯ ಕರ್ನಾಟಕ, ತಮಿಳುನಾಡು, ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಪಿಎಂ ಕಿಸಾನ್ ಯೋಜನೆಯ ವಂಚನೆ ಪ್ರಕರಣಗಳು ಹೆಚ್ಚು ಬೆಳಕಿಗೆ ಬಂದಿವೆ. ತಮಿಳುನಾಡಲ್ಲಿ ಎಂಟೂವರೆ ಲಕ್ಷ ಅನರ್ಹರ ಖಾತೆಗಳಿಗೆ ಸಹಾಯಧನ ಜಮೆಯಾಗಿದ್ದು, ಅತಿಹೆಚ್ಚು ವಂಚನೆ ಪ್ರಕರಣಗಳು ದಾಖಲಾದ ರಾಜ್ಯವಾಗಿದೆ. ಈ ಹಿಂದೆ ಕರ್ನಾಟಕದಲ್ಲಿ 2.40 ಲಕ್ಷ ನಕಲಿ ರೈತರ ಖಾತೆಗಳಿಗೆ ಸಹಾಯಧನ ವರ್ಗಾವಣೆಯಾಗಿದೆ ಎನ್ನಲಾಗುತ್ತಿತ್ತು. ಇದೀಗ ಪರಿಶೀಲನೆಯ ನಂತರ 95,830 ಅನರ್ಹರು ಸಿಕ್ಕಿ ಬಿದ್ದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು, ಚಾಮರಾಜನಗರ ಜಿಲ್ಲೆಯಲ್ಲಿ ಅತಿ ಕಡಿಮೆ ಅನರ್ಹರು ಪತ್ತೆಯಾಗಿದ್ದಾರೆ. ಜಿಲ್ಲಾವಾರು ಅನರ್ಹರ ಪಟ್ಟಿ ಈ ಕೆಳಗಿನಂತಿದೆ:

  • ಬೆಳಗಾವಿ 7,748
  • ಕಲಬುರಗಿ 5,109
  • ವಿಜಯಪುರ 5,033
  • ಬೀದರ್ 4,951
  • ತುಮಕೂರು 4,648
  • ಮಂಡ್ಯ 4,537
  • ಹಾಸನ 4,260
  • ಉಡುಪಿ 3,882
  • ಬಾಗಲಕೋಟೆ 3,694
  • ರಾಮನಗರ 3,452

ಮೇಲ್ಕಾಣಿಸಿದ ಈ ಜಿಲ್ಲೆಗಳ ಹೊರತಾಗಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಅನರ್ಹರೇ ಇಲ್ಲವೆಂದಲ್ಲ. ಅಲ್ಲಿಯೂ ಅಕ್ರಮವಾಗಿ ಯೋಜನೆ ದುರ್ಬಳಕೆ ಮಾಡಿಕೊಂಡವರಿದ್ದು; ಅವರ ಪತ್ತೆ ಕಾರ್ಯವೂ ನಡೆದಿದೆ. ಸಿಕ್ಕಿ ಬಿದ್ದವರಿಂದ ಹಣ ವಸೂಲಿಯ ಜೊತೆಗೆ ಸೂಕ್ತ ಕ್ರಮ ಖಚಿತ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

PM-Kisan Helpline No. 155261 / 011-24300606

ಇದನ್ನೂ ಓದಿ: ಮೊಬೈಲ್‌ನಲ್ಲೇ ಪಡೆಯಿರಿ ನಿಮ್ಮೂರಿನ ಮಳೆ, ಬೆಳೆ, ಜಾನುವಾರು ಮಾಹಿತಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!