ಸರಕಾರಿ ಯೋಜನೆ

ಕೃಷಿ ಪಂಪ್‌ಸೆಟ್‌ಗೆ ಸೋಲಾರ್ ವಿದ್ಯುತ್: ರೈತರಿಂದ ಅರ್ಜಿ ಆಹ್ವಾನ | PM-KUSUM Solar Pumpset Scheme

WhatsApp Group Join Now
Telegram Group Join Now

ಕೇಂದ್ರ ಸರಕಾರದ ಪಿಎಂ-ಕುಸುಮ್ ಯೋಜನೆಯಡಿ ಪಂಪ್‌ಸೆಟ್‌ಗಳಿಗೆ ನಿರಂತರ ಸೋಲಾರ್ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಗೆ ಯಾರೆಲ್ಲ ಅರ್ಹರು? ಯಾರಿಗೆ ಎಷ್ಟೆಷ್ಟು ಸಹಾಯಧನ? ಅರ್ಜಿ ಸಲ್ಲಿಕೆ ಹೇಗೆ? ಇದರಿಂದ ರೈತರಿಗಾಗುವ ಅನುಕೂಲಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ ಪ್ರತಿವರ್ಷ ಕೃಷಿ ಪಂಪ್‌ಸೆಟ್‌ಗಾಗಿಯೇ ಸರ್ಕಾರವು ಸರಿಸುಮಾರು 12 ಸಾವಿರ ಕೋಟಿ ರೂಪಾಯಿ ಸಬ್ಸಿಡಿ ನೀಡುತ್ತಿದೆ. ಇಷ್ಟು ಸಹಾಯಧನ ಒದಗಿಸಿಯೂ ಕೂಡ ರೈತರ ಪಂಪ್‌ಸೆಟ್ ಸಮಸ್ಯೆಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಜಾಲಯುಕ್ತ ವಿದ್ಯುತ್ ಬದಲಿಗೆ ಜಾಲಮುಕ್ತ ಸೋಲಾರ್ ವ್ಯವಸ್ಥೆ ಕಲ್ಪಿಸುವ ಮೂಲಕ ಪರಿಹಾರ ಕಂಡುಕೊಳ್ಳಲು ಚಿಂತನೆ ನಡೆಸಿದೆ. ರಾಜ್ಯದಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ 70 ಲಕ್ಷ ರೈತರಿದ್ದಾರೆ. ಇವರಿಗಾಗಿ ಹೊಸ ಆವಿಷ್ಕಾರ, ತಂತ್ರಜ್ಞಾನ ಬಳಸಿಕೊಂಡು ಕಡಿಮೆ ದರದಲ್ಲಿ ಸೋಲಾರ್ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗಲಿದೆ.

ಇದನ್ನೂ ಓದಿ: ಜಮೀನು ಕಾಲುದಾರಿ, ಬಂಡಿದಾರಿ ಸಮಸ್ಯೆಗೆ ಇಲ್ಲಿದೆ ಸುಲಭ ಕಾನೂನು ಪರಿಹಾರ… 

ಪಾವಗಡದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದೇ ರೀತಿ ರಾಜ್ಯದಲ್ಲಿ ಕೃಷಿಗೆ ಯೋಗ್ಯವಲ್ಲದ 70 ಲಕ್ಷ ಎಕರೆ ಪ್ರದೇಶವಿದ್ದು, ಅಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ದೃಢಸಂಕಲ್ಪ ಕೈಗೊಂಡಿರುವ ರಾಜ್ಯ ಸರಕಾರ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (KREDL) ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಇದೀಗ ಕೃಷಿ ಪಂಪ್‌ಸೆಟ್‌ಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರದ ಪಿಎಂ ಕುಸುಮ್ ಯೋಜನೆಯಡಿ ರೈತರಿಂದ ಅರ್ಜಿ ಆಹ್ವಾನಿಸಿದೆ.

ಏನಿದು ಪಿಎಂ-ಕುಸುಮ್ ಯೋಜನೆ?

ಪಿಎಂ-ಕುಸುಮ್ (ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್) ಯೋಜನೆಯು ಭಾರತದಲ್ಲಿನ ರೈತರಿಗೆ ಇಂಧನ ಭದ್ರತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ ರೈತರು ಸೋಲಾರ್ ಪಂಪ್ ಅಳವಡಿಸಿಕೊಂಡು ವಿದ್ಯುತ್ ಮತ್ತು ಕಾರ್ಮಿಕರಿಗೆ ತಗುಲುವ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು. ಜತೆಗೆ ಕಡಿಮೆ ಖರ್ಚಿನಲ್ಲಿ ನೀರಾವರಿ ಕೃಷಿ ಮಾಡಬಹುದಾಗಿದೆ. ಸೋಲಾರ್ ಪಂಪ್ ಅಳವಡಿಕೆಗೆ ಸರ್ಕಾರ ಆರ್ಥಿಕ ನೆರವು ನೀಡುತ್ತದೆ.

ಇದನ್ನೂ ಓದಿ: ಮೊಬೈಲ್‌ನಲ್ಲೇ ಪಡೆಯಿರಿ ನಿಮ್ಮೂರಿನ ಮಳೆ, ಬೆಳೆ, ಜಾನುವಾರು ಮಾಹಿತಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಯಡಿ ಸೋಲಾರ್ ಪಂಪ್ ಸ್ಥಾಪಿಸಲು ರೈತರಿಗೆ ಸಹಾಯಧನ ನೀಡುತ್ತವೆ. ಈ ಯೋಜನೆಯಿಂದ ನೀರಾವರಿಗಾಗಿ ಖರ್ಚಾಗುತ್ತಿದ್ದ ವಿದ್ಯುತ್ ಉಳಿತಾಯವಾಗಲಿದೆ. ಒಮ್ಮೆ ಸೋಲಾರ್ ಪವರ್ ಪಂಪ್ ಅಳವಡಿಸಿಕೊಂಡರೆ ಸುಮಾರು 25 ವರ್ಷಗಳ ಕಾಲ ನಿಶ್ಚಿಂತೆಯಿಂದ ರೈತರು ಕೃಷಿಯಲ್ಲಿ ತೊಡಗಿಕೊಳ್ಳಬಹುದು. ಸದರಿ ಯೋಜನೆಯನ್ನು 2019ರಲ್ಲಿ ಮೂರು ಘಟಕಗಳೊಂದಿಗೆ ಪ್ರಾರಂಭಿಸಲಾಯಿತು.

ಈ ಪೈಕಿ ಘಟಕ-2 (ಕಾಂಪೊನೆಂಟ್ ಬಿ) ಅಡಿಯಲ್ಲಿ ಗ್ರಿಡ್ ಪೂರೈಕೆ ಲಭ್ಯವಿಲ್ಲದಿರುವ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಡೀಸೆಲ್ ಕೃಷಿ ಪಂಪ್‌ಗಳು, ನೀರಾವರಿ ವ್ಯವಸ್ಥೆಗಳನ್ನು ಬದಲಿಸಲು 7.5 HP ವರೆಗಿನ ಸಾಮರ್ಥ್ಯದ ಸ್ವತಂತ್ರ ಸೋಲಾರ್ ಕೃಷಿ ಪಂಪ್‌ಗಳನ್ನು ಸ್ಥಾಪಿಸಲು ವೈಯಕ್ತಿಕ ರೈತರಿಗೆ ಬೆಂಬಲ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಸುಮಾರು 4,400 ಜಾಲಮುಕ್ತ ಸೌರಶಕ್ತಿ ಚಾಲಿತ ಪಂಪಸೆಟ್‌ಗಳನ್ನು ಅಳವಡಿಸುವ ಯೋಜನೆಯನ್ನು KREDL ಮೂಲಕ ರಾಜ್ಯ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ ಕೈಗೊಳ್ಳಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಆಸಕ್ತ ರೈತರು ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶ ಸದ್ಭಳಕೆ ಮಾಡಿಕೊಳ್ಳಬಹುದು.

ಕರ್ನಾಟಕ ನವೀಕರಿಸಬಹುದಾದ ಅಭಿವೃದ್ಧಿ ನಿಗಮ ನಿಯಮಿತದ (ಕೆ.ಆರ್.ಇ.ಡಿಎಲ್) ಅಧಿಕೃತ ಜಾಲತಾಣದಲ್ಲಿ ಲಭ್ಯವಾಗುವ ಲಿಂಕ್ ಮೂಲಕ ಮಾತ್ರ PM KUSUM, Component B ಯೋಜನೆಯಡಿ ಆನ್‌ಲೈನ್ ಮೂಲಕ ಅರ್ಜಿ ನೋಂದಾಯಿಸಿಕೊಳ್ಳಲು ಸೂಚಿಸಿದೆ. ಎಂಎನ್‌ಆರ್‌ಇ ಮಾನದಂಡಗಳ ಪ್ರಕಾರ ಪಂಪುಗಳ ನೀರೆತ್ತುವ ಆಳ ಮೀಟರಗಳಲ್ಲಿ 3 ಹೆಚ್.ಪಿಗೆ 20 ಮೀಟರ್, 5 ಹೆಚ್.ಪಿಗೆ 70 ಮೀಟರ್, 7.5 ಹೆಚ್ ಪಿಗೆ 100 ಮೀಟರ್ ಇರಬೇಕು.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸಬ್ಸಿಡಿ ಸೌಲಭ್ಯಗಳು

ಈ ಯೋಜನೆಗೆ ಇವರು ಅರ್ಹರಲ್ಲ

ಗಮನಾರ್ಹವೆಂದರೆ ಹಾಲಿ ವಿದ್ಯುತ್ ಸಂಪರ್ಕವನ್ನು ಹೊಂದಿರುವ ಪಂಪ್‌ಸೆಟ್ ಹೊಂದಿರುವ ರೈತರು ಈ ಯೋಜನೆಗೆ ಅರ್ಹರಲ್ಲ. ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಸಲು ಸಿದ್ದವಿದ್ದು; ಹೊಸ ಕೃಷಿ ಪಂಪ್‌ಸೆಟ್‌ಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.

ಈಗಾಗಲೇ ಗಂಗಾಕಲ್ಯಾಣ ಯೋಜನೆಯಡಿ ಲಾಭ ಪಡೆದಿರುವ ಹಾಗೂ ಪಡೆಯಲು ಅರ್ಜಿ ಸಲ್ಲಿಸಿರುವ ರೈತರಿಗೆ ಸದರಿ ಯೋಜನೆಯ ಲಾಭ ಪಡೆಯಲು ಅರ್ಹರಿರುವುದಿಲ್ಲ.

ಯಾರಿಗೆ ಎಷ್ಟು ಸಬ್ಸಿಡಿ?

ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಲಾ ಶೇ.30ರಷ್ಟು ಸಹಾಯಧನ ನೀಡುತ್ತಿದ್ದು; ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಾಯಧನ ಸೇರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.80ರಷ್ಟು ಸಹಾಯಧನ ಹಾಗೂ ಇತರೆ ವರ್ಗಗಳ ರೈತರಿಗೆ ಶೇ.60ರಷ್ಟು ಸಹಾಯಧನ ನೀಡಲಾಗುವುದು. ಎಲ್ಲಾ ವರ್ಗದ ಅರ್ಜಿಗಳಲ್ಲಿ ವಿಶೇಷ ಚೇತನರಿಗೆ ಶೇ. 5ರಷ್ಟು ಮೀಸಲಾತಿ ಇರುತ್ತದೆ.

ಸಬ್ಸಿಡಿ ಹೊರತುಪಡಿಸಿ ಉಳಿಕೆ ಹಣವನ್ನು ಅರ್ಜಿದಾರರು ಅವರ ವಂತಿಗೆಯನ್ನು ಡಿಡಿ ಮೂಲಕವೇ ಸಲ್ಲಿಸಬೇಕು. ಚೆಕ್ ಅಥವಾ ಇತರೆ ಆನ್‌ಲೈನ್ ಪೇಮೆಂಟ್ ಮೂಲಕ ಅರ್ಜಿದಾರರ ವಂತಿಗೆ ಹಣ ಸ್ವೀಕರಿಸಲಾಗುವುದಿಲ್ಲ.

ಇದನ್ನೂ ಓದಿ: ನಿಮ್ಮ ಹಸುವಿನ ಹಾಲಿನ ಗುಣಮಟ್ಟ ಹೆಚ್ಚಿಸಲು ಹೀಗೆ ಮಾಡಿ | ಹಾಲಿನ ಡಿಗ್ರಿ ಹೆಚ್ಚಿಸುವ ಸರಳ ವಿಧಾನ

ಅರ್ಜಿ ಸಲ್ಲಿಕೆ ಹೇಗೆ?

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧಿಕೃತ ವೆಬ್‌ಸೈಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Click here to Register online for off Grid Solar pumps PM KUSUM Component B ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.

 ಬೇಕಾಗುವ ಅಗತ್ಯ ದಾಖಲೆಗಳು

  • ಅರ್ಜಿದಾರರ ಸಂಪರ್ಕ ವಿವರಗಳಲ್ಲಿ ಅರ್ಜಿದಾರರ ಹೆಸರು, ವಯಸ್ಸು, ಲಿಂಗ, ಆಧಾರ್ ಕಾರ್ಡ್ ಮಾಹಿತಿ ದಾಖಲಿಸಬೇಕು.
  • ಅರ್ಜಿದಾರರ ವಾಸಸ್ಥಳದ ವಿವರಗಳಲ್ಲಿ ಅರ್ಜಿದಾರರ ಗ್ರಾಮ, ಪಿನ್‌ಕೋಡ್ ಸಹಿತ ಅಂಚೆ, ತಾಲ್ಲೂಕು, ಜಿಲ್ಲೆ ನಮೂದಿಸಬೇಕು.
  • ಭೂ ದಾಖಲೆ ವಿವರಗಳಲ್ಲಿ ಅರ್ಜಿದಾರರ ಆರ್.ಟಿ.ಸಿ, ಸರ್ವೆ ನಂಬರ್, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯತ್ ಹಾಗೂ ಗ್ರಾಮ ನಮೂದಿಸಬೇಕು.
  • ಅರ್ಜಿದಾರರ ಬ್ಯಾಂಕ್ ವಿವರದಲ್ಲಿ ಬ್ಯಾಂಕ್ ಹೆಸರು, ಶಾಖೆಯ ಹೆಸರು, ಬ್ಯಾಂಕ್ ಅಕೌಂಟ್ ನಂಬರ್, ಐಎಫ್‌ಎಸ್‌ಸಿ ಕೋಡ್ ನಮೂದಿಸಬೇಕು.
  • ಪೇಮೆಂಟ್ ವಿವರದಲ್ಲಿ ಡಿಡಿ ನಂಬರ್, ದಿನಾಂಕ ಹಾಗೂ ಡಿಡಿ ಪಡೆದ ಬ್ಯಾಂಕ್ ಹೆಸರು ನಮೂದಿಸಬೇಕು.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಆರ್.ಡಿ ಸಂಖ್ಯೆಯಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಪಡಿತರ ಚೀಟಿ ಸಲ್ಲಿಸಬೇಕು.

ಈ ಎಲ್ಲಾ ಕಡ್ಡಾಯ ವಿವರಗಳನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ನಮೂದಿಸಿ ಸಲ್ಲಿಸು ಬಟನ್ ಕ್ಲಿಕ್ ಮಾಡಬೇಕು. ಸಲ್ಲಿಸಿದ ನಂತರ, ಸ್ವೀಕೃತಿ ಪ್ರತಿಯನ್ನು ಡೌನ್‌ಲೋಡ್ ಮಾಡಿ ಮುದ್ರಿಸಿ, ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ಸ್ವೀಕೃತಿಯ ಮೇಲಿನ ಬಲ ಮೂಲೆಯಲ್ಲಿ ಅಂಟಿಸಿ ಮತ್ತು ಫೋಟೋ ಮೇಲೆ ಸ್ವಯಂ ದೃಢೀಕರಣ ಮಾಡಬೇಕು.

ಸ್ವೀಕೃತಿ ಪ್ರತಿಗೆ ಸಹಿ ಮಾಡಿ ಮತ್ತು ಆನ್‌ಲೈನ್ ನೋಂದಣಿ ದಿನಾಂಕದಿಂದ ಐದು ದಿನಗಳೊಳಗೆ ಮೂಲ ಡಿಡಿ ಮತ್ತು ಅಗತ್ಯ ಕಡ್ಡಾಯ ದಾಖಲೆಗಳ (ಆಧಾರ್, ಆರ್‌ಟಿಸಿ, 2 ಪಾಸ್‌ಪೋರ್ಟ್ ಗಾತ್ರದ ಫೋಟೋ) ಪ್ರತಿಯೊಂದಿಗೆ ಎಸ್ಕಾಮ್‌ಗಳ ಸಂಬಂಧಪಟ್ಟ ಉಪವಿಭಾಗದ ಕಚೇರಿಗೆ ಸಲ್ಲಿಸಬೇಕು. ಒಂದು ಮೊಬೈಲ್ ಸಂಖ್ಯೆಗೆ ಒಂದು ಅರ್ಜಿಯನ್ನು ಮಾತ್ರ ಸ್ವೀಕರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ವೇಳೆಯಲ್ಲಿ ಕೆಆರ್‌ಇಡಿಎಲ್ ಸಂಸ್ಥೆಯ ದೂರವಾಣಿ ಸಂಖ್ಯೆ 8095132100ಗೆ ಕರೆ ಮಾಡಿ ವಿಚಾರಿಸಬಹುದು.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!