ಕೃಷಿ

ಹಸಿರೆಲೆ ಗೊಬ್ಬರ ಬಳಸಿ ಬಂಪರ್ ಬೆಳೆ ತೆಗೆಯುವ ವಿಧಾನ | Use of green leaf manure

WhatsApp Group Join Now
Telegram Group Join Now

ರಸಗೊಬ್ಬರಗಳ ಬೆಲೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಅಗ್ಗವಾಗಿ, ಸುಲಭವಾಗಿ ಮತ್ತು ಸ್ಥಳೀಯವಾಗಿ ದೊರೆಯುವ ಹಸಿರೆಲೆ ಗೊಬ್ಬರ ಬಳಸಿ ಬಂಪರ್ ಬೆಳೆ ತೆಗೆಯುವ ಸರಳ ವಿಧಾನ ಇಲ್ಲಿದೆ…

ಹಸಿರೆಲೆ ಗೊಬ್ಬರದ ಬಳಕೆ ಪುರಾತನ ಬೇಸಾಯ ಕ್ರಮವಾಗಿದ್ದು, ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ರಸಾಯನಿಕ ಗೊಬ್ಬರಗಳ ಬಳಕೆಯಿಂದ ದೊರೆಯುವ ತ್ವರಿತ ಫಲಿತಾಂಶದಿಂದ ರೈತರ ಗಮನ ಹಸಿರೆಲೆ ಗೊಬ್ಬರಗಳ ಕಡೆ ಕಡಿಮೆಯಾಗಿ ಅವುಗಳ ಬಳಕೆ ಕುಂಠಿತವಾಗಿದೆ. ಆದರೆ ರಸಗೊಬ್ಬರಗಳ ಬೆಲೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಅಗ್ಗವಾಗಿ, ಸುಲಭವಾಗಿ ಮತ್ತು ಸ್ಥಳೀಯವಾಗಿ ದೊರೆಯುವ ಹಾಗೂ ಉಪಯೋಗಿಸಬಹುದಾದ ಹಸಿರೆಲೆ ಗೊಬ್ಬರಗಳ ಕಡೆ ಚಿಂತಿಸುವುದು ಉತ್ತಮ. ಗೊಬ್ಬರವಾಗಿ ಬಳಸುವ ಹಸಿರು ಸಸಿಗಳು / ಗಿಡಗಳು ಅಥವಾ ಅವುಗಳ ಎಲೆ, ಎಳೆಯ ಕಾಂಡ ಮತ್ತು ಬೇರುಗಳನ್ನು ಹಸಿರೆಲೆ ಗೊಬ್ಬರವೆಂದು ಕರೆಯಲಾಗುತ್ತದೆ.

ವಿಧಗಳು ಮತ್ತು ಬಳಸುವ ವಿಧಾನ

ವಾರ್ಷಿಕ ಸಸ್ಯಗಳು: ಚಂಬೆ (ಡಯಾಂಚ), ಅಪ್‌ಸೆಣಬು, ಹುರಳಿ, ಅಲಸಂದೆ, ಅವರೆ, ಹೆಸರು, ಉದ್ದು, ಸೋಯಾ ಅವರೆ ಇತ್ಯಾದಿ. ಈ ಬೆಳೆಗಳನ್ನು ಮುಖ್ಯ ಭೂಮಿಯಲ್ಲೇ ಬೆಳೆದು ೪೫ ರಿಂದ 50 ದಿನಗಳಲ್ಲಿ ಅಥವಾ ಹೂ ಬಿಡಲು ಪ್ರಾರಂಭವಾದಗ ಉಳುಮೆ ಮಾಡಿ ಭೂಮಿಗೆ ಸೇರಿಸುವುದು.

ಹಸಿರೆಲೆ ಕೊಡುವ ಮರಗಳು / ಗಿಡಗಳು: ಹೊಂಗೆ, ಬೇವು, ಸುಬಾಬುಲ್, ಗ್ಲಿರಿಸಿಡಿಯಾ, ಸಸ್ಬೇನಿಯಾ, ಎಕ್ಕ ಇತ್ಯಾದಿ. ಈ ಮರಗಳನ್ನು ಅಥವಾ ಗಿಡಗಳನ್ನು ಜಮೀನಿನ ಸುತ್ತ ಹಾಗೂ ಬದುಗಳ ಮೇಲೆ, ಬರಡು ಅಥವಾ ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಬೆಳೆದು ಸೊಪ್ಪನ್ನು ಕಟಾವು ಮಾಡಿ ಹಸಿರೆಲೆ ಗೊಬ್ಬರವಾಗಿ ಜಮೀನುಗಳಿಗೆ ಉಪಯೋಗಿಸುವುದು.

ಇದನ್ನೂ ಓದಿ: ಕೋರ್ಟ್ ಮೆಟ್ಟಿಲೇರದೇ ಜಮೀನು ಕಾಲುದಾರಿ ವ್ಯಾಜ್ಯವನ್ನು ಹೀಗೆ ಸರಿಪಡಿಸಿಕೊಳ್ಳಿ…

ಇದಲ್ಲದೆ, ಕಳೆಗಳಾದ ಪಾರ್ಥೇನಿಯಂ, ಕ್ರೊಮೊಲೇನ (ಕಮ್ಯೂನಿಸ್ಟ್‌ಗಿಡ), ನೀರಿನ ಕಣಗಲೆ, ಐಪೋಮಿಯಾ, ಚೊಗಚೆ ಇತ್ಯಾದಿ ಕಳೆಗಳನ್ನು ಹೂ ಬಿಟ್ಟಾಗ ಅಥವಾ ಕಾಯಿಯಾಗುವುದಕ್ಕಿಂತ ಮುಂಚೆ ಮಣ್ಣಿಗೆ ಸೇರಿಸಬಹುದು.

ಈ ಸಸ್ಯಗಳು ದ್ವಿದಳ ಧಾನ್ಯದ ಗುಂಪಿಗೆ ಸೇರಿದ್ದು ಆಳವಾದ ಬೇರು ಬಿಡುತ್ತವೆ.ಕಡಿಮೆ ಸಮಯದಲ್ಲಿ ಹುಲುಸಾಗಿ ಬೆಳೆದು ಅಧಿಕ ಸೊಪ್ಪಿನ ಇಳುವರಿ ನೀಡುತ್ತವೆ. ನಾರಿನಾಂಶ ಕಡಿಮೆಯಿದ್ದು ಮಣ್ಣಿಗೆ ಸೇರಿಸಿದಾಗ ಬೇಗ ಕಳಿಯುತ್ತವೆ. ಕಡಿಮೆ ನೀರನ್ನು ಉಪಯೋಗಿಸಿಕೊಂಡು ಫಲವತ್ತತೆ ಕಡಿಮೆಯಿರುವ ಅಥವಾ ಬರಡು ಭೂಮಿಯಲ್ಲಿ ಹಾಗೂ ಶುಷ್ಕ ವಾತಾವರಣದಲ್ಲಿ ಬೆಳೆಯುತ್ತವೆ.

ಇದನ್ನೂ ಓದಿ: ಕೆಎಂಎಫ್ 487 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಸಿರೆಲೆ ಗೊಬ್ಬರಗಳ ಉಪಯೋಗಗಳು

ವಾತಾವರಣದಲ್ಲಿರುವ ಸಾಡಿಜನಕವನ್ನು ಸ್ಥೀರಿಕರಿಸಿ ಮಣ್ಣಿಗೆ ಸೇರಿಸುತ್ತವೆ.ಮಣ್ಣಿನ ಭೌತಿಕ, ರಸಾಯನಿಕ ಹಾಗೂ ಜೈವಿಕ ಗುಣಧರ್ಮಗಳನ್ನು ವೃದ್ಧಿಸುವಲ್ಲಿ ಸಹಾಯವಾಗುತ್ತದೆ. ಮಣ್ಣಿನ ಸಾವಯವ ಅಂಶವನ್ನು ಕಾಪಾಡಿ ಸೂಕ್ಷ್ಮಜೀವಿಗಳ ಸಂಖ್ಯೆ ಅಭಿವೃದ್ಧಿ ಹೊಂದಿ ಅವುಗಳ ಚಟುವಟಿಕೆಗಳಿಂದ ಸಾವಯವ ವಸ್ತುಗಳು ಕಳೆತು ಪೋಷಕಾಂಶಗಳು ಲಭ್ಯವಾಗುತ್ತವೆ.

ಹಸಿರೆಲೆ ಗೊಬ್ಬರದ ಗಿಡಗಳು ಮಣ್ಣಿನ ಮೇಲೆ ಹೊದಿಕೆಯಾಗುವುದರಿಂದ ಹೆಚ್ಚಾಗಿ ಮಳೆಯ ನೀರನ್ನು ಭೂಮಿಗೆ ಇಂಗಿಸಿ ಮಣ್ಣಿನ ಕೊಚ್ಚಣೆ ಕಡಿಮೆ ಮಾಡಿ ಮಣ್ಣಿನ ಉಷ್ಣಾಂಶವನ್ನು ನಿಯಂತ್ರಿಸುತ್ತವೆ. ಗೊಬ್ಬರದ ಗಿಡಗಳು ಆಳವಾದ ಬೇರು ಬಿಡುವುದರಿಂದ ಕೆಳ ಪದರದ ಪೋಷಕಾಂಶವನ್ನು ಹೀರಿ ಬೆಳೆಯುತ್ತವೆ ಹಾಗೂ ನಂತರ ಅವುಗಳನ್ನು ಪುನಃ ಮಣ್ಣಿಗೆ ಸೇರಿಸುವುದರಿಂದ ಪೋಷಕಾಂಶಗಳನ್ನು ಮೇಲ್ಪದರಕ್ಕೆ ಸೇರಿಸುತ್ತವೆ.

ಹಸಿರೆಲೆ ಗೊಬ್ಬರಗಳು ಮಣ್ಣಿಗೆ ಸೇರಿಸಿದಾಗ ಅವುಗಳು ಕಳಿಯುವಾಗ ಸಾವಯವ ಆಮ್ಲಗಳನ್ನು ಉತ್ಪಾದಿಸುವುದರಿಂದ ಸ್ಥಿರ ಪೋಷಕಾಂಶಗಳ ಲಭ್ಯತೆ ಹೆಚ್ಚಿಸುವುದಲ್ಲದೆ ಮಣ್ಣಿನಲ್ಲಿರುವ ಜಂತು ಹುಳುಗಳನ್ನು ನಿಯಂತ್ರಿಸುತ್ತವೆ.

ಇದನ್ನೂ ಓದಿ: SSLC, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ₹18,000- ₹81,000 ಸಾವಿರ ಸಂಬಳದ ಹುದ್ದೆಗಳಿಗೆ ಅರ್ಜಿ ಆಹ್ವಾನ… 

ಬೆಳೆಯುವ ವಿಧಾನ

ಹಸಿರೆಲೆ ಗೊಬ್ಬರದ ಬೆಳೆಯನ್ನು ಮುಖ್ಯ ಬೆಳೆ ಬೆಳೆಯುವ ಮುಂಚೆ ಅಂದರೆ ಮೇ ಅಥವಾ ಜೂನ್ ತಿಂಗಳ ಮೊದಲ ಎರಡು ವಾರಗಳೊಳಗೆ ಮಳೆಯಾದ ನಂತರ ಹಸಿರೆಲೆ ಗೊಬ್ಬರದ ಬೀಜಗಳನ್ನು ಬಿತ್ತುವುದು. ಎಕರೆಗೆ 20-25 ಕಿ.ಗ್ರಾಂ ಬೀಜವನ್ನು ಉಪಯೋಗಿಸುವುದು ಸೂಕ್ತ. ಶೇಕಡಾ 50ರಷ್ಟು ಗಿಡಗಳಲ್ಲಿ ಹೂ ಬಂದ ಅಂದರೆ 45-50 ದಿನಗಳ ನಂತರ ಉಳುಮೆ ಮಾಡಿ ಮಣ್ಣಿಗೆ ಸೇರಿಸಿ ನಂತರ ಬಿತ್ತನೆಗೆ ಭೂಮಿಯನ್ನು ಹದ ಮಾಡುವುದು.

ಮಳೆಯು ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಆದಾಗ ಬೆಳೆಗಳನ್ನು ಬೆಳೆಯಲು ಸಾದ್ಯವಾಗದಿದ್ದಲ್ಲಿ ಹಸಿರೆಲೆ ಗೊಬ್ಬರದ ಬೆಳೆಗಳನ್ನು ಬೆಳೆದು ಜಾನುವಾರುಗಳಿಗೆ ಮೇವಾಗಿ ಉಪಯೋಗಿಸಿ ಉಳಿದ ಭಾಗವನ್ನು ಮಣ್ಣಿಗೆ ಸೇರಿಸಬಹುದು. ಹಸಿರೆಲೆ ಕೊಡುವ ಮರಗಲಾದ ಹೊಂಗೆ, ಬೇವು, ಸುಬಾಬುಲ್ ಮತ್ತು ಗಿಡಗಳಾದ ಗ್ಲಿರಿಸಿಡಿಯಾ, ಎಕ್ಕ, ಸಸ್ಬೇನಿಯಾಗಳನ್ನು ಬದುಗಳ ಮೇಲೆ ಮರಗಳಾದರೆ 10-15 ಅಡಿ, ಗಿಡಗಳಾದರೆ 4-5 ಅಡಿ ಅಂತರದಲ್ಲಿ ಬೆಳೆದು ಸೊಪ್ಪನ್ನು ಕಟಾವು ಮಾಡಿ ಮಣ್ಣಿಗೆ ಸೇರಿಸಬಹುದು.

ದೀರ್ಘಾವಧಿ ಮತ್ತು ಹೆಚ್ಚು ಸಾಲುಗಳ ಅಂತರ ಇರುವ ಬೆಳೆಗಳಲ್ಲಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಸಾಲುಗಳ ನಡುವೆ ಹಸಿರೆಲೆ ಗೊಬ್ಬರದ ಬೀಜಗಳನ್ನು ಬಿತ್ತಿ, 45-50 ದಿನಗಳ ನಂತರ ಹುಲುಸಾಗಿ ಬೆಳೆದ ಹಸಿರೆಲೆಗೊಬ್ಬರವನ್ನು ಮಣ್ಣಿಗೆ ಸೇರಿಸಬಹುದು. ಒಟ್ಟಾರೆ ಹೇಳುವುದಾದರೆ ಹಸಿರೆಲೆ ಗೊಬ್ಬರವನ್ನು ಭೂಮಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ, ಆರೋಗ್ಯವನ್ನು ಕಾಪಾಡಿಕೊಳ್ಳುಬಹುದಲ್ಲದೇ ರಸಾಯನಿಕ ಗೊಬ್ಬರಗಳ ಖರ್ಚನ್ನು ಕಡಿಮೆ ಮಾಡಿ ಉತ್ಪಾದಕತೆಯನ್ನು ಹೆಚ್ಚಿಸಿ ಅಧಿಕ ಇಳುವರಿ ಮತ್ತು ಲಾಭವನ್ನು ಪಡೆಯಬಹುದು.

ಎಸ್ ಎಸ್ ಶ್ರೀಹರ್ಷಕುಮಾರ್, ಡಾ. ಎಂ ಮೂರ್ತಿ, ಡಾ. ಕೆ ಶಿವರಾಮು

ಇದನ್ನೂ ಓದಿ: ಕೀಟಬಾಧೆಗೆ ರೈತನೇ ಕಂಡುಹಿಡಿದ ಪವರ್‌ಫುಲ್ ನಾಟಿ ಕೀಟನಾಶಕ

WhatsApp Group Join Now
Telegram Group Join Now

Related Posts

error: Content is protected !!