ಕೃಷಿ

ನ್ಯಾನೋ ರಸಗೊಬ್ಬರ ಬಳಕೆಯಿಂದ ರೈತರಿಗಾಗುವ ಉಪಯೋಗಗಳೇನು? | What are the uses of nano fertilizer for farmers?

WhatsApp Group Join Now
Telegram Group Join Now

ನ್ಯಾನೋ ರಸಗೊಬ್ಬರ ಕೃಷಿ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ನ್ಯಾನೋ ರಸಗೊಬ್ಬರ ಬಳಕೆಯಿಂದ ರೈತರಿಗಾಗುವ ಪ್ರಯೋಜನಗಳ ವಿವರ ಇಲ್ಲಿದೆ…

ಅವೈಜ್ಞಾನಿಕ ರಸಗೊಬ್ಬರದ ಬಳಕೆ ಹಲವು ಅನಾಹುತಗಳಿಗೆ ಕಾರಣವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೆಳೆ ಪದ್ಧತಿ, ಮಣ್ಣಿನ ವಿಧ, ವಾತಾವರಣ ಇತ್ಯಾದಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ನೀಡಿದ ಶಿಫಾರಸ್ಸಿನ ಅನ್ವಯ ರಸಗೊಬ್ಬರ ಪೂರೈಕೆಯಾಗುತ್ತಿಲ್ಲ.

ಮುಖ್ಯವಾಗಿ ಸಾರಜನಕ, ರಂಜಕ, ಪೋಟ್ಯಾಷ್‌ಯುಕ್ತ ರಸಗೊಬ್ಬರಗಳ ಸಸ್ಯ ಉಪಯೋಗ ದಕ್ಷತೆಯು ಬಹಳ ಕಡಿಮೆಯಿರುತ್ತದೆ. ಉದಾಹರಣೆಗೆ ಮಣ್ಣಿಗೆ ಹಾಕಿದ ಸಾರಜನಕಯುಕ್ತ ರಸಗೊಬ್ಬರಗಳ ಶೇಕಡಾ 30-35ರಷ್ಟು ಮಾತ್ರ ಸಸ್ಯಗಳಿಂದ ಹೀರಲ್ಪಡುತ್ತದೆ. ಉಳಿದ ಅಂಶವು ವಿವಿಧ ಪ್ರಕ್ರಿಯೆಗಳಿಗೊಳಪಟ್ಟು ಬೇರೆ ಬೇರೆ ಮಾರ್ಗಗಳಿಂದ ನಷ್ಟಗೊಳ್ಳುವ ಸಂಭವವಿರುತ್ತದೆ.

ಇದನ್ನೂ ಓದಿ: ನವೆಂಬರ್ 5ರೊಳಗೆ ಅರ್ಜಿ ಸಲ್ಲಿಸಿ ₹4 ಲಕ್ಷ ಬೋರ್‌ವೆಲ್ ಸಹಾಯಧನ ಪಡೆಯಿರಿ

ಈ ಕಾರಣದಿಂದ ಹಲವು ಬಾರಿ ನಿರ್ದಿಷ್ಟ ಪ್ರಮಾಣದ ಪೋಷಕಾಂಶ ಒದಗಿಸಲು ದುಪ್ಪಟ್ಟು ಅಥವಾ ಅದಕ್ಕಿಂತ ಅಧಿಕವಾಗಿ ರಸಗೊಬ್ಬರಗಳನ್ನು ಒದಗಿಸಬೇಕಾಗುತ್ತದೆ. ನಷ್ಟಗೊಂಡ ರಸಗೊಬ್ಬರವು ಕಾಲಕ್ರಮೇಣ ಸುತ್ತಲಿನ ಮಣ್ಣು ಮತ್ತು ನೀರಿನ ಮೂಲಗಳನ್ನು ಮಾಲಿನ್ಯಗೊಳಿಸಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸೂಕ್ತವಲ್ಲದಂತೆ ಮಾಡುತ್ತದೆ.

ಆದ್ದರಿಂದ ಈ ಎಲ್ಲಾ ಅಂಶಗಳನ್ನು ಮತ್ತು ಸಮಸ್ಯೆಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಆಧುನಿಕ ಕೃಷಿಗೆ ಸೂಕ್ತವಾಗುವಂತೆ ಸಂಶೋಧನೆಯು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನ್ಯಾನೋ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಆವಿಷ್ಕಾರಗಳು ಪ್ರಪಂಚದಾದ್ಯಂತ ಬೆಳಕಿಗೆ ಬರುತ್ತಿದ್ದು; ರಸಗೊಬ್ಬರ ವಲಯದಲ್ಲಿ ಈ ತಂತ್ರಜ್ಞಾನವು ಆಶಾಭಾವನೆ ಮೂಡಿಸತೊಡಗಿದೆ.

ಇದನ್ನೂ ಓದಿ: ವಿದ್ಯಾರ್ಥಿ ವೇತನ, ಶುಲ್ಕ ವಿನಾಯತಿ ಹಾಗೂ ವಿದ್ಯಾಸಿರಿ ಊಟ-ವಸತಿ ಸಹಾಯಕ್ಕಾಗಿ ಅರ್ಜಿ ಆಹ್ವಾನ

ನ್ಯಾನೋ ರಸಗೊಬ್ಬರದ ಮಹತ್ವ

ಅತೀಸೂಕ್ಷ್ಮ ಗಾತ್ರ ಕಣಗಳ (ಶತಕೋಟಿಯ ಒಂದು ಭಾಗ) ಗುಣ ಧರ್ಮಗಳನ್ನು ವೈಜ್ಞಾನಿಕವಾಗಿ ಅನ್ವೇಷಿಸಿ ಮತ್ತು ಅಧ್ಯಯನ ಮಾಡಿ ವಿವಿಧ ವಲಯಗಳಲ್ಲಿ ಬಳಸಲಾಗುತ್ತದೆ. ಈ ತಂತ್ರಜ್ಞಾನದ ಅಭಿವೃಧ್ಧಿ ಮತ್ತು ಉಪಯೋಗ ಮುಖ್ಯವಾಗಿ ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮುಂತಾದ ವಲಯಗಳಲ್ಲಿ ಈಗಾಗಲೇ ಕಂಡು ಬಂದಿದೆ. ಅದೇ ರೀತಿಯಾಗಿ ಈ ತಂತ್ರಜ್ಞಾನದ ಮೂಲಕ ಕೃಷಿ ಮತ್ತು ಕೃಷಿ ಸಂಬಂಧಿತ ವಿವಿಧ ಭಾಗಗಳಲ್ಲಿ ಉಪಯೋಗಗಳನ್ನು ಕೂಡ ಅನ್ವೇಷಿಸಲಾಗಿದೆ. ಈ ಹಿನ್ನಲೆಯಲ್ಲಿ ನ್ಯಾನೋ ರಸಗೊಬ್ಬರಗಳ ಉಪಯೋಗಗಳನ್ನು ಈ ರೀತಿ ಪಟ್ಟಿ ಮಾಡಬಹುದು:

ಕಡಿಮೆ ಪ್ರಮಾಣದ ರಸಗೊಬ್ಬರ: ಈಗಿರುವ ಆಧುನಿಕ ಕೃಷಿ ಪದ್ದತಿಗಳಲ್ಲಿ ಹಾಕುವ ಪ್ರಚಲಿತ ರಸಗೊಬ್ಬರಗಳ ಪ್ರಮಾಣಕ್ಕೆ ಹೋಲಿಸಿದರೆ ತುಂಬಾ ಕಡಿಮೆ ಪ್ರಮಾಣದಲ್ಲಿ ನ್ಯಾನೋ ರಸಗೊಬ್ಬರ ಸಾಕು.

ಮಿತವ್ಯಯ: ಭಾರತದಾದ್ಯಂತ ರೈತರು ಬಹುತೇಕ ಯಾವುದೇ ಬೆಳೆ ಪದ್ದತಿಯನ್ನು ಅನುಸರಿಸಿದರೂ ರಸಗೊಬ್ಬರ ಪೂರೈಕೆ ಮಾತ್ರ ಬಹಳ ಮುಖ್ಯವಾದುದು. ಅದರಂತೆಯೇ ಅದಕ್ಕೆ ತಗುಲುವ ವೆಚ್ಚವು ಅಧಿಕ. ಈ ನಿಟ್ಟಿನಲ್ಲಿ ನ್ಯಾನೋ ರಸಗೊಬ್ಬರಗಳು ಬಳಕೆಗೆ ಬಂದರೆ ರೈತರಿಗೆ ರಸಗೊಬ್ಬರಕ್ಕೆ ತಗುಲುವ ವೆಚ್ಚವನ್ನು ಕಡಿಮೆಗೊಳಿಸಬಹುದು.

ಇದನ್ನೂ ಓದಿ: ಪಿಎಂ ಕಿಸಾನ್ 12ನೇ ಕಂತಿನ ₹2,000 ತಲುಪದ ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ..

ಅಧಿಕ ಪೋಷಕಾಂಶ ಉಪಯೋಗ ದಕ್ಷತೆ: ಪ್ರಸ್ತುತ ರೈತರು ಬಳಸುವ ರಸಗೊಬ್ಬರಗಳಲ್ಲಿ ಬಹುತೇಕ ಪ್ರಮಾಣವು ವಿವಿಧ ಕ್ರಿಯೆಗಳಿಂದ ನಷ್ಟಗೊಳ್ಳುವ ಸಂಭವನೀಯತೆ ಅಧಿಕವಾಗಿದ್ದು ಇದರಿಂದಾಗಿ ಪೂರೈಸಿದ ಪೋಷಕಾಂಶ ಉಪಯೋಗ ದಕ್ಷತೆ ಕ್ಷಿಣಿಸುತ್ತದೆ. ಇದನ್ನು ಸರಿಪಡಿಸಲು ಅಂದರೆ ಹಾಕಿದಂತಹ ಪೋಷಕಾಂಶಗಳಲ್ಲಿ ಅತ್ಯಧಿಕ (ಸುಮಾರು 90% ಕ್ಕಿಂತ ಅಧಿಕ) ಪ್ರಮಾಣವು ಸಸ್ಯಗಳಿಂದ ಹೀರಲ್ಪಡುವ ರಚನೆಯನ್ನು ನ್ಯಾನೋ ರಸಗೊಬ್ಬರಗಳು ಹೊಂದಿರುತ್ತವೆ.

ಕಡಿಮೆ ಮಣ್ಣು ಮತ್ತು ನೀರು ಮಾಲಿನ್ಯ: ನ್ಯಾನೋ ರಸಗೊಬ್ಬರಗಳ ಪೂರೈಕೆಯಿಂದ ಸಸ್ಯಗಳು ಸಮರ್ಥ ಪೋಷಕಾಂಶ ಉಪಯೋಗ ದಕ್ಷತೆ ಹೊಂದಿರುತ್ತವೆ. ಅಲ್ಲದೇ ಪೂರೈಕೆ ಮಾಡಿದಂತಹ ಪೋಷಕಾಂಶಗಳ ನಷ್ಟಗೊಳ್ಳುವಿಕೆ ತುಂಬಾ ಕಡಿಮೆಯಿರುವುದರಿಂದ ಕ್ರಮೇಣವಾಗಿ ಮಣ್ಣು ಮತ್ತು ನೀರಿನ ಸಂಪನ್ಮೂಲಗಳ ಮಾಲಿನ್ಯವು ತುಂಬಾ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಭೀಮಾ ಪಲ್ಸ್ ಬ್ರ್ಯಾಂಡ್ ತೊಗರಿ ರೈತರಿಗೆ ತರಲಿದೆ ಭಲೇ ಡಿಮ್ಯಾಂಡ್

ರಸಗೊಬ್ಬರ ಕೊರತೆಯನ್ನು ನೀಗಿಸಬಹುದು: ಪ್ರಸ್ತುತ ವಿದ್ಯಮಾನಗಳಲ್ಲಿ ಕೆಲವೊಂದು ಪ್ರದೇಶಗಳಲ್ಲಿರುವ ರೈತರಿಗೆ ರಸಗೊಬ್ಬರಗಳ ಕೊರತೆ ಕಂಡು ಬರುವುದು ಸರ್ವೇಸಾಮಾನ್ಯ. ನ್ಯಾನೋ ರಸಗೊಬ್ಬರ ಇದನ್ನು ನೀಗಿಸಲು ಸಶಕ್ತವಾಗಿದೆ. ಯಾಕೆಂದರೆ ಈಗಿರುವ ರಸಗೊಬ್ಬರಗಳ ಪ್ರಮಾಣಕ್ಕೆ ಹೋಲಿಸಿದರೆ ನ್ಯಾನೋ ರಸಗೊಬ್ಬರ ತುಂಬಾ ಕಡಿಮೆ ಪ್ರಮಾಣದಲ್ಲಿ ಬಳಕೆಗೆ ಬೇಕಾಗಿರುತ್ತದೆ.

ಸಸ್ಯಗಳಿಗೆ ಸಹಿಷ್ಣು ಗುಣ: ಕೆಲವೊಂದು ಸಂದರ್ಭಗಳಲ್ಲಿ ನ್ಯಾನೋ ರಸಗೊಬ್ಬರಗಳು ವಿವಿಧ ಬೆಳೆಗಳಿಗೆ ಅಥವಾ ಸಸ್ಯಗಳಿಗೆ ಅಜೀವ ಒತ್ತಡ ಪರಿಸ್ಥಿತಿಗಳಲ್ಲಿ ಮುಖ್ಯವಾಗಿ ಮಣ್ಣಿನಲ್ಲಿ ನೀರಿನ ಕೊರತೆ (ಬರ), ಅಧಿಕ ಲವಣಗಳ ಪ್ರಮಾಣ, ಸಸ್ಯರೋಗ ಮತ್ತು ಕೀಟ ಬಾಧೆ ಇತ್ಯಾದಿಗಳನ್ನು ತಡೆದುಕೊಂಡು ಬೆಳೆಯುವ ಸಹಿಷ್ಣು ಗುಣಧರ್ಮವನ್ನು ನೀಡುತ್ತವೆ. ಇವಲ್ಲದೆ ಇನ್ನಿತರೆ ಪರೋಕ್ಷ ಅನುಕೂಲಗಳನ್ನು ನ್ಯಾನೋ ರಸಗೊಬ್ಬರಗಳ ಬಳಕೆಯಲ್ಲಿ ಕಾಣಬಹುದು. ಈ ಗೊಬ್ಬರಗಳನ್ನು ನೇರವಾಗಿ ಮಣ್ಣಿಗೆ, ನೀರಾವರಿ ಮತ್ತು ಸಿಂಪರಣೆ ಮೂಲಕ ಸಸ್ಯಗಳಿಗೆ ಪೂರೈಕೆ ಮಾಡಬಹುದಾಗಿದೆ.

ಇದನ್ನೂ ಓದಿ: ಲಾಭದಾಯಕ ಎರೆಹುಳು ಕೃಷಿ: ಇಲ್ಲಿದೆ ಸಮಗ್ರ ಮಾಹಿತಿ…

ಇಷ್ಟೆಲ್ಲಾ ಅನುಕೂಲಗಳು ಮತ್ತು ಲಾಭಗಳು ನ್ಯಾನೋ ರಸಗೊಬ್ಬರಗಳ ಬಳಕೆಯಲ್ಲಿ ಇದ್ದರೂ ಕೆಲವೊಂದು ಅನಾನುಕೂಲತೆಗಳು ಅವುಗಳನ್ನು ಉಪಯೋಗಿಸುವಾಗ ಎಚ್ಚರಿಕೆಯಿಂದ ತಿಳಿದುಕೊಳ್ಳಬೇಕಾಗುತ್ತದೆ. ನ್ಯಾನೋ ರಸಗೊಬ್ಬರಗಳು ಅತೀ ಸೂಕ್ಷ್ಮವಾದ ಕಣಗಳಾಗಿದ್ದರಿಂದ ಅವುಗಳ ಪೂರೈಕೆ ಪದ್ದತಿಯಲ್ಲಿ ತುಂಬಾ ಜಾಗ್ರತೆ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಈ ಸೂಕ್ಷ್ಮ ಕಣಗಳು ರಸಗೊಬ್ಬರ ಸಿಂಪರಣೆ ಮಾಡುವ ವ್ಯಕ್ತಿಯ ದೇಹದೊಳಕ್ಕೆ ಹೋಗುವ ಸಾಧ್ಯತೆಯಿರುತ್ತದೆ.

ಇದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ನ್ಯಾನೋ ರಸಗೊಬ್ಬರಗಳ ಕುರಿತ ಮಾಹಿತಿ ಮತ್ತು ಉಪಯೋಗಿಸುವ ಕೌಶಲ್ಯತೆ ಬಹಳ ಮುಖ್ಯವಾದದ್ದು. ಮುಖ್ಯವಾಗಿ ಈ ಗೊಬ್ಬರಗಳ ಉಪಯೋಗಕ್ಕಾಗಿ ರೈತರಿಗೆ ತರಬೇತಿ ನೀಡಿ ಅವುಗಳ ಬಳಕೆಯನ್ನು ವೃದ್ಧಿಸುವುದಲ್ಲದೇ ಅದರಿಂದಾಗುವ ತೊಂದರೆಗಳನ್ನು ಕಡಿಮೆಯಾಗಿಸಬಹುದು.

ನ್ಯಾನೋ ಪದಾರ್ಥಗಳು ಭೌತಿಕವಾಗಿ, ಜೈವಿಕವಾಗಿ ಮತ್ತು ರಾಸಾಯನಿಕವಾಗಿ ತುಂಬಾ ಕ್ರಿಯಾತ್ಮಕ ಕಣಗಳಾಗಿರುವುದರಿಂದ ಅವುಗಳ ದುರುಪಯೋಗವು ವಾತಾವರಣ ಮತ್ತು ಅದರ ಜೀವರಾಶಿಗಳ ಮೇಲೆ ಪ್ರಭಾವ ಬೀರಬಹುದು. ಈ ಕೆಲ ಅಂಶಗಳನ್ನು ಎಚ್ಚರವಹಿಸಿ ನಿರ್ವಹಿಸಿದಲ್ಲಿ ನ್ಯಾನೋ ರಸಗೊಬ್ಬರಗಳ ಅನುಕೂಲತೆಗಳು ಅಧಿಕ!

| ಡಾ. ಶರಣ ಭೂಪಾಲ ರೆಡ್ಡಿ, ಡಾ.ಉಮೇಶ ಬಾರಿಕಾರ, ಡಾ. ಪ್ರದೀಪ ದೊಡ್ಡಮನಿ, ಸಹಾಯಕ ಪ್ರಾಧ್ಯಾಪಕರು, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ

ಇದನ್ನೂ ಓದಿ: ಮಳೆಗೆ ಕೊಚ್ಚಿ ಹೋದ ಮಣ್ಣಿಗೂ ಸಿಗಲಿದೆ ಸರಕಾರಿ ಪರಿಹಾರ

WhatsApp Group Join Now
Telegram Group Join Now

Related Posts

error: Content is protected !!