ಸರಕಾರಿ ಯೋಜನೆ

₹30,000 ಸಂಬಳ ಪಡೆಯುವ ಸರಕಾರಿ-ಖಾಸಗಿ ನೌಕರರಿಗೂ ಸಿಗಲಿದೆ ₹5 ಲಕ್ಷ ಯಶಸ್ವಿನಿ ಉಚಿತ ಚಿಕಿತ್ಸೆ | Yeshasvini Health Insurance Scheme

WhatsApp Group Join Now
Telegram Group Join Now

ಗಾರ್ಮೆಂಟ್ಸ್ ಉದ್ಯೋಗಿಗಳು, ಸಣ್ಣ ಕೈಗಾರಿಕೆ ಕಾರ್ಮಿಕರು, ಹಾಲು ಉತ್ಪಾದಕ ಸಂಘ ಹಾಗೂ ವಿವಿಧ ಸಹಕಾರ ಸಂಘಗಳಲ್ಲಿ ಕಡಿಮೆ ಸಂಬಳ ಅಥವಾ ಗೌರವಧನ ಪಡೆಯುತ್ತಿರುವ ಸಿಬ್ಬಂದಿಗಳು ಕೂಡ ಯಶಸ್ವಿನಿ ಯೋಜನೆಯ 5 ಲಕ್ಷ ರೂಪಾಯಿ ಉಚಿತ ಚಿಕಿತ್ಸೆ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ…

ಬಡವರ ಪಾಲಿಗೆ ಆರೋಗ್ಯ ಸಂಜೀವಿನಿ ಎಂದೇ ಜನಪ್ರಿಯವಾಗಿರುವ ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಸರಕಾರಿ ಮತ್ತು ಖಾಸಗಿ ನೌಕರರು ಅನ್ವಯವಾಗುವಂತೆ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ. ಈ ಮೊದಲಿನ ಮಾರ್ಗಸೂಚಿ ಅನ್ವಯ ಸರ್ಕಾರಿ ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರನ್ನು ಯಶಸ್ವಿನಿ ಯೋಜನೆಯಿಂದ ಹೊರಗಿಡಲಾಗಿತ್ತು. ಈಗ ಸರ್ಕಾರಿ ಹಾಗೂ ಖಾಸಗಿ ನೌಕರರ ಮಾಸಿಕ ಸಂಬಳದ ಮಿತಿಯ ಆಧಾರದ ಮೇಲೆ ಅವರಿಗೂ ಯೋಜನೆಯ ಲಾಭ ಲಭಿಸುವಂತೆ ಹೊಸ ಮಾರ್ಗಸೂಚಿ ರೂಪಿಸಲಾಗಿದೆ.

ಇದನ್ನೂ ಓದಿ: PUC ಅಭ್ಯರ್ಥಿಗಳಿಂದ ಕೇಂದ್ರ ರೈಲ್ವೆಯಲ್ಲಿ 2,422 ಹುದ್ದೆಗಳಿಗೆ ಅರ್ಜಿ ಆಹ್ವಾನ

ನೌಕರರ ಸಂಬಳ ಮಿತಿ ಎಷ್ಟು?

ಮಾಸಿಕ 30 ಸಾವಿರ ರೂಪಾಯಿ ಅಥವಾ ವಾರ್ಷಿಕ 3.60 ಲಕ್ಷ ರೂಪಾಯಿ ವೇತನ ಪಡೆಯುವ ಖಾಸಗಿ ಕಂಪನಿಗಳ ನೌಕರರು ಸಹಕಾರಿ ಸದಸ್ಯರಾಗಿದ್ದರೆ ಯೋಜನೆಗೆ ಸೇರಬಹುದಾಗಿದೆ. ಇದರಿಂದಾಗಿ ಗಾರ್ಮೆಂಟ್ಸ್ ಉದ್ಯೋಗಿಗಳು, ಸಣ್ಣ ಕೈಗಾರಿಕೆ ಘಟಕಗಳ ಕಾರ್ಮಿಕರು ಸೇರಿ ಯಾವುದೇ ಕ್ಷೇತ್ರದಲ್ಲಿ ಕಡಿಮೆ ವೇತನ ಪಡೆಯುತ್ತಿರುವ ನೌಕರರು ಯಶಸ್ವಿನಿ ಯೋಜನೆಯಿಂದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಜತೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಹಾಲು ಉತ್ಪಾದಕ ಸಂಘ ಹಾಗೂ ವಿವಿಧ ಸಹಕಾರ ಸಂಘಗಳಲ್ಲಿ ಕಡಿಮೆ ಸಂಬಳ ಅಥವಾ ಗೌರವಧನ ಪಡೆಯುತ್ತಿರುವ ಸಿಬ್ಬಂದಿಗಳು ಕೂಡ ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಯಶಸ್ವಿನಿ ಯೋಜನೆಯಡಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಸದ್ಯದಲ್ಲೇ ಒಂದು ಲಕ್ಷ ರಾಜ್ಯ ಸರಕಾರಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಬದಲಾವಣೆಯೊಂದಿಗೆ ಮರುಜಾರಿ

ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ 2003ರಲ್ಲಿ ಜಾರಿಯಾಗಿದ್ದ ಯಶಸ್ವಿನಿ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ರಮೇಶ್‌ಕುಮಾರ್ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಗ್ರಾಮೀಣ ಜನರಿಗೆ ರಾಜ್ಯದ ಖಾಸಗಿ, ಬೃಹತ್ ಆಸ್ಪತ್ರೆಗಳಲ್ಲಿ ಸರಳ ಮತ್ತು ಪರಿಣಾಮಕಾರಿ ಆರೋಗ್ಯ ಸೇವೆಯನ್ನು ನಗದು ರಹಿತವಾಗಿ ಒದಗಿಸುವ ಮಹತ್ವದ ಯೋಜನೆಯನ್ನು 2018ರ ಜೂನ್‌ನಲ್ಲಿ ಆರೋಗ್ಯ ಕರ್ನಾಟಕ ಯೋಜನೆಗೆ ಒಳಪಡಿಸಿ, ಈ ಯೋಜನೆಗೆ ತಿಲಾಂಜಲಿ ಇಡಲಾಗಿತ್ತು. ಆನಂತರ ಖಾಸಗಿ ಆಸ್ಪತ್ರೆಯಲ್ಲಿನ ನಗದು ರಹಿತ ಚಿಕಿತ್ಸಾ ಸೌಲಭ್ಯದಿಂದ ಜನರು ವಂಚಿತರಾಗಿದ್ದರು. ಸರಕಾರಿ ಆಸ್ಪತ್ರೆಗಳ ಜಿಲ್ಲಾಶಸ್ತ್ರ ಚಿಕಿತ್ಸಕರಿಂದ ಅನುಮತಿ ಪತ್ರ ಪಡೆದು ಖಾಸಗಿ ಆಸ್ಪತ್ರೆಗೆ ದಾಖಲಾದರೆ ಮಾತ್ರ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಗಿತಗೊಂಡಿದ್ದ ಯಶಸ್ವಿ ಯೋಜನೆಗೆ ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರುಜಾರಿಗಿಳಿಸಿದ್ದು; ಆಮೂಲಾಗ್ರವಾಗಿ ಬದಲಾವಣೆ ಮಾಡಿ, ಹೆಚ್ಚು ಸೌಲಭ್ಯವನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಯೋಜನೆಯಡಿ 2022-23ನೇ ಸಾಲಿಗೆ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಕಳೆದ ನವೆಂಬರ್ 1, 2022ರಿಂದ ಆರಂಭವಾಗಿದೆ. ಯೋಜನೆಯು ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ಮೂಲಕ ಅನುಷ್ಠಾನಗೊಳ್ಳಲಿದ್ದು, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ಟ್ರಸ್ಟ್‌ನ ಅಧ್ಯಕ್ಷರಾಗಿರುತ್ತಾರೆ. ಈ ಯೋಜನೆಯಡಿ ಯಶಸ್ವಿನಿ ಜಾಲದ ಆಸ್ಪತ್ರೆಗಳಲ್ಲಿ ಒಂದು ಕುಟುಂಬ ೫ ಲಕ್ಷ ರೂಪಾಯಿ ವರೆಗಿನ ವೆಚ್ಚದಲ್ಲಿ ನಗದುರಹಿತ ಚಿಕಿತ್ಸೆ ಪಡೆಯಬಹುದು. ಯೋಜನೆಯ ಅನುಷ್ಠಾನಕ್ಕೆ ಬಜೆಟ್‌ನಲ್ಲಿ 330 ಕೋಟಿ ಮೀಸಲಿಡಲಾಗಿದೆ.

ಇದನ್ನೂ ಓದಿ: ಕೃಷಿ ಪಂಪ್‌ಸೆಟ್‌ಗೆ ಸೋಲಾರ್ ವಿದ್ಯುತ್: ರೈತರಿಂದ ಅರ್ಜಿ ಆಹ್ವಾನ

ಏನೆಲ್ಲ ಬದಲಾವಣೆ?

ಮೊದಲಿಗೆ ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿರುವವರು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಕಡಿಮೆ ಸಂಬಳ ಪಡೆಯುವ ಸರಕಾರಿ ಮತ್ತು ಖಾಸಗಿ ನೌಕರರು ಕೂಡ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ಈ ಮೊದಲಿದ್ದ ಯಶಸ್ವಿನಿ ಕಾರ್ಡ್‌ನಲ್ಲಿ ಕೆಲವೇ ರೋಗಗಳಿಗೆ ಚಿಕಿತ್ಸೆ ಸೀಮಿತವಾಗಿತ್ತು. ಪ್ರಸ್ತುತ 1,650 ಕಾಯಿಲೆಗಳನ್ನು ಯೋಜನೆ ವ್ಯಾಪ್ತಿಗೆ ತರಲಾಗಿದೆ. ಈ ಮೊದಲು ಸದಸ್ಯರಷ್ಟೇ ಈ ಸೌಲಭ್ಯ ಪಡೆಯಲು ಅರ್ಹರಿದ್ದರು. ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಈ ಪರಿವ್ಯಾಪ್ತಿಗೆ ತರಲಾಗಿದೆ. ಕುಟುಂಬದ ನಾಲ್ಕು ಜನರಿಗೆ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಸದಸ್ಯರಿಗೆ 500 ರೂ ಹಾಗೂ ನಗರ ಪ್ರದೇಶದವರಿಗೆ 1,000 ರೂ ಶುಲ್ಕ ನಿಗದಿ ಮಾಡಲಾಗಿದೆ. ಹೆಚ್ಚುವರಿ ಕುಟುಂಬ ಸದಸ್ಯರಿದ್ದಲ್ಲಿ ಶೇ.20ರಷ್ಟು ಹೆಚ್ಚಳ ಅಂದರೆ, ಗ್ರಾಮೀಣರಿಗೆ ತಲಾ 100 ರೂ, ನಗರದವರಿಗೆ 200 ರೂ. ಪಾವತಿಸಬೇಕಿದೆ. ಎಸ್‌ಸಿ ಮತ್ತು ಎಸ್‌ಟಿ ವರ್ಗದ ಶುಲ್ಕಕ್ಕೆ ರಿಯಾಯಿತಿ ನೀಡಿದ್ದು, ಅದನ್ನು ಸರ್ಕಾರವೇ ಭರಿಸಲಿದೆ.

ಇದನ್ನೂ ಓದಿ: ಜಮೀನು ಕಾಲುದಾರಿ, ಬಂಡಿದಾರಿ ಸಮಸ್ಯೆಗೆ ಇಲ್ಲಿದೆ ಸುಲಭ ಕಾನೂನು ಪರಿಹಾರ… 

5 ಲಕ್ಷ ರೂಪಾಯಿ ಉಚಿತ ಚಿಕಿತ್ಸೆ

ಯಶಸ್ವಿನಿ ಯೋಜನೆಯಲ್ಲಿ ಈ ಹಿಂದೆ ಇದ್ದ ಗರಿಷ್ಠ 2 ಲಕ್ಷ ರೂಪಾಯಿ ಮಿತಿಯನ್ನು 5 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ಆದರೆ, ಒಂದು ಕುಟುಂಬದಲ್ಲಿ ನಾಲ್ಕು ಜನರು ಸೇರಿದಂತೆ 5 ಲಕ್ಷಕ್ಕೆ ಮೀರದಂತೆ ಮಾತ್ರ ಆಸ್ಪತ್ರೆ ಸೌಲಭ್ಯ ಪಡೆದುಕೊಳ್ಳಬಹುದು ಎನ್ನುವ ನಿರ್ಬಂಧ ವಿಧಿಸಲಾಗಿದೆ. ಕುಟುಂಬದಲ್ಲಿ ಒಬ್ಬರೇ 5 ಲಕ್ಷ ರೂಪಾಯಿ ತನಕ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಒಂದು ವರ್ಷದೊಳಗೆ ಒಮ್ಮೆ ಈ ಸೌಲಭ್ಯ ಪಡೆಯಬಹುದು.

2022-23ನೇ ಸಾಲಿಗೆ ಒಟ್ಟು 30 ಲಕ್ಷ ಸದಸ್ಯರನ್ನು ನೋಂದಾಯಿಸಲು ಗುರಿ ಹೊಂದಲಾಗಿದೆ. ಡಿಸೆಂಬರ್ 23ರ ವರೆಗೆ ರಾಜ್ಯಾದ್ಯಂತ 20 ಲಕ್ಷ ಸದಸ್ಯರು ಯೋಜನೆ ಫಲಾನುಭವಿಗಳಾಗಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೆಸರು ನೋಂದಣಿಗೆ ಡಿಸೆಂಬರ್ 31 ಅಂತಿಮ ದಿನವಾಗಿದ್ದು, ಈ ಗಡುವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಯಶಸ್ವಿನಿ ಟ್ರಸ್ಟ್ ಪ್ರಮುಖರು ತಿಳಿಸಿದ್ದಾರೆ. ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಜನವರಿ 1ರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಾಗಲಿದೆ. ಆದರೆ, ಈ ದಿನಕ್ಕಿಂತ ಎರಡು ವಾರದ ಮೊದಲು ಯೋಜನೆಯಡಿ ಹೆಸರು ನೋಂದಣಿ ಆಗಿರಬೇಕು. ಹೀಗಾಗಿ ಈಗಲೂ ನೋಂದಣಿಯಾಗಿರದಿದ್ದರೇ ಈ ಕೂಡಲೇ ನೋಂದಣಿ ಮಾಡಿ.

ಇದನ್ನೂ ಓದಿ: ರೈತ ಮಕ್ಕಳೇ ಡಿಸೆಂಬರ್ 31ರೊಳಗೆ ಅರ್ಜಿ ಸಲ್ಲಿಸಿ ₹2,500ದಿಂದ ₹11,000 ವಿದ್ಯಾರ್ಥಿವೇತನ ಪಡೆಯಿರಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!