2025ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ದೇಶಾದ್ಯಂತ ಹಲವು ಬದಲಾವಣೆಗಳು ಆಗಲಿವೆ. ಹೊಸ ವರ್ಷಕ್ಕೆ ಕೆಲವು ಹೊಸ ನಿಯಮಗಳು ಜಾರಿಯಾಗಲಿದ್ದು; ಈ ಪೈಕಿ ಜನವರಿಯಿಂದ ದೇಶಾದ್ಯಂತ ಲಕ್ಷಾಂತರ ಬ್ಯಾಂಕ್ ಖಾತೆಗಳು ಬಂದ್ ಆಗಲಿವೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಆಧುನೀಕರಣ ಮತ್ತು ಡಿಜಿಟಲೀಕರಣಕ್ಕೆ ಉತ್ತೇಜನ ನೀಡಲು ಹಾಗೂ ಹಣಕಾಸು ಅಕ್ರಮಗಳನ್ನು ತಡೆಯಲು ಈ ಕ್ರಮ ಕೈಗೊಳ್ಳುತ್ತಿದ್ದು; ಮೂರು ರೀತಿಯ ಬ್ಯಾಂಕ್ ಖಾತೆಗಳನ್ನು ಮುಚ್ಚಲು ನಿರ್ಧರಿಸಿದೆ ಎನ್ನಲಾಗುತ್ತಿದೆ.
ಯಾವೆಲ್ಲ ಖಾತೆಗಳಿಗೆ ಕುತ್ತು?
ಸೈಬರ್ ಹ್ಯಾಕರ್‌ಗಳಿಗೆ ಸುಲಭವಾಗಿ ತುತ್ತಾಗಬಹುದಾದ ಮತ್ತು ಅಕ್ರಮ ಹಣ ರವಾನೆಗೆ ದುರ್ಬಳಕೆ ಆಗಬಹುದಾದ ಈ ಕೆಳಕಂಡ ಮೂರು ವಿಧದ ಬ್ಯಾಂಕ್ ಖಾತೆಗಳು ಜನವರಿಯಿಂದ ಬಂದ್ ಆಗಲಿವೆ:
* ಝೀರೋ ಬ್ಯಾಲನ್ಸ್ ಬ್ಯಾಂಕ್ ಖಾತೆಗಳು
* ಡಾರ್ಮಂಟ್ ಬ್ಯಾಂಕ್ ಖಾತೆಗಳು
* ಇನ್ಯಾಕ್ಟಿವ್ ಬ್ಯಾಂಕ್ ಖಾತೆಗಳು
ಝೀರೋ ಬ್ಯಾಲನ್ಸ್ ಬ್ಯಾಂಕ್ ಖಾತೆಗಳು
ನಿಗದಿತ ಅವಧಿಯಲ್ಲಿ ಝೀರೋ ಬ್ಯಾಲನ್ಸ್ ಹೊಂದಿರುವ ಬ್ಯಾಂಕ್ ಖಾತೆಗಳನ್ನು ಮುಚ್ಚಲು ಆರ್ಬಿಐ ನಿರ್ಧರಿಸಿದೆ. ಬ್ಯಾಂಕ್ ಖಾತೆದಾರರು ಹಣಕಾಸು ವಹಿವಾಟನ್ನು ನಿಯಮಮಿತವಾಗಿ ನಡೆಸುವ ಮೂಲಕ ಆರ್ಥಿಕ ಶಿಸ್ತು ರೂಢಿಸಿಕೊಳ್ಳಲು ಉತ್ತೇಜಿಸುವ ಹಿನ್ನಲೆಯಲ್ಲಿ ಆರ್ಬಿಐ ಈ ಕ್ರಮಕ್ಕೆ ಮುಂದಾಗಿದೆ.
ಡಾರ್ಮಂಟ್ ಬ್ಯಾಂಕ್ ಖಾತೆಗಳು
ಎರಡಕ್ಕೂ ಹೆಚ್ಚು ವರ್ಷಗಳ ಕಾಲ ಸತತವಾಗಿ ಯಾವುದೇ ವಹಿವಾಟು ನಡೆಸದೇ ಇರುವ ಬ್ಯಾಂಕ್ ಖಾತೆಗಳನ್ನು ಡಾರ್ಮಂಟ್ ಅಕೌಂಟ್ ಎಂದು ಕರೆಯಲಾಗುತ್ತಿದ್ದು; ಇಂತಹ ಖಾತೆಗಳು ಅಕ್ರಮ ಹಣ ರವಾನೆಗೆ ದುರ್ಬಳಕೆಯಾಗುವ ಸಂಭವ ಇರುವುದರಿಂದ ಈ ಖಾತೆಗಳು ಕೂಡ ಸ್ಥಗಿತಗೊಳ್ಳಲಿವೆ.
ಇನ್ಯಾಕ್ಟಿವ್ ಬ್ಯಾಂಕ್ ಖಾತೆಗಳು
ಒಂದು ವರ್ಷದ ವರೆಗೆ ಯಾವುದೇ ವಹಿವಾಟು ಕಾಣದ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯ ಅಥವಾ ಇನ್ಯಾಕ್ಟಿವ್ ಅಕೌಂಟ್ ಎಂದು ಕರೆಯಲಾಗುತ್ತಿದೆ. ಇವೂ ಕೂಡ ಅಕ್ರಮ ಹಣಕಾಸು ಚಟುವಟಿಕೆಗಳಿಗೆ ದುರ್ಬಳಕೆ ಆಗಬಹುದು. ಇಂತಹ ಬ್ಯಾಂಕ್ ಖಾತೆಗಳು ಸಹ ಜನವರಿ 1ರಿಂದ ಮುಚ್ಚಲ್ಪಡಬಹುದು.
ಈ ಮೂರು ವಿಧದ ಬ್ಯಾಂಕ್ ಖಾತೆಯನ್ನು ನೀವು ಹೊಂದಿದ್ದರೆ ಈ ಖಾತೆಗಳು ಬಂದ್ ಆಗಲಿವೆ. ಅಗತ್ಯವಿದ್ದರೆ ನೀವು ಬ್ಯಾಂಕ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ, ಕೆವೈಸಿ ಸೇರಿದಂತೆ ಇತರೆ ದಾಖಲೆ ಸಲ್ಲಿಸಿ ಸಂಬಂಧಿಸಿದ ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಬಹುದು.