ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16ನೇ ಬಜೆಟ್ (Karnataka Budget 2025) ಮಂಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 4,09,549 ಕೋಟಿ ರೂ. ಮೊತ್ತದ ಸದರಿ ಬಜೆಟ್‌ನಲ್ಲಿ ವಿವಿಧ ವಲಯಗಳಿಗೆ ಅನುದಾನ ನೀಡಲಾಗಿದೆ. ವಿಶೇಷವಾಗಿ ಕೃಷಿ-ತೋಟಗಾರಿಕೆ ಇಲಾಖೆಗೆ ಒಟ್ಟು 7,145 ಕೋಟಿ ರೂ. ಕಾಯ್ದಿರಿಸಲಾಗಿದೆ.
ಇತ್ತ ಕೋ-ಅಪರೇಟಿವ್ ಸೊಸೈಟಿಗಳ (Co-Operative Society Loans) ಮೂಲಕ ರೈತರಿಗೆ ನೀಡುವ ಕೃಷಿ ಸಾಲ ಸೌಲಭ್ಯ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಮುಂದುವರಿಸಿರುವ ಸರಕಾರವು ಈ ಸಾಲಿನಲ್ಲಿ 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲ ವಿತರಿಸುವ ಗುರಿ ಹಾಕಿಕೊಂಡಿದೆ.
ಕಳೆದ 2024-25ನೇ ಸಾಲಿನಲ್ಲಿ 36 ಲಕ್ಷ ರೈತರಿಗೆ 27,000 ಕೋಟಿ ರೂ. ಸಾಲ ವಿತರಿಸುವುದಾಗಿ ಘೋಷಿಸಲಾಗಿತ್ತು. ಆದರೆ ವಾಸ್ತವದಲ್ಲಿ 21.78 ಲಕ್ಷ ರೈತರಿಗೆ 18,960 ಕೋಟಿ ರೂ. ಮಾತ್ರ ಕೃಷಿ ಸಾಲ ವಿತರಣೆಯಾಗಿದೆ. ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಪುನರ್ಧನದ ಮಿತಿಯನ್ನು ನಬಾರ್ಡ್ ಶೇ.58ರಷ್ಟು ಕಡಿತಗೊಳಿಸಿದ್ದರಿಂದ ಸಾಲ ವಿತರಣೆ ಇಳಿಕೆಯಾಗಿದೆ.
ರಾಜ್ಯ ಉಗ್ರಾಣ ನಿಗಮದ ಅಪೂರ್ಣಗೊಂಡಿರುವ ಉಗ್ರಾಣಗಳ ನಿರ್ಮಾಣ ಹಾಗೂ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳಿಸಲು ಬಾಕಿ 47 ಕೋಟಿ ರೂ. ಬಿಡುಗಡೆಗೆ ಒತ್ತು ನೀಡಲಾಗಿದೆ. ರಾಜ್ಯದ ಎಲ್ಲಾ ಎಪಿಎಂಸಿಗಳಲ್ಲಿ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿರುವ ಹಮಾಲರು ಸಾವಿಗೀಡಾದಾಗ ಅವರ ವಾರಸುದಾರರಿಗೆ ನೀಡುವ ವಿಮಾ ಮೊತ್ತವನ್ನು 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.
ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ?
ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆ ಉತ್ತೇಜಿಸಲು ಪ್ರಥಮ ಹಂತದಲ್ಲಿ 10 ಕೋಟಿ ರೂ. ಅನುದಾನ ಮೀಸಲಿರಿಸಿದ್ದು; ಕಲಬುರಗಿಯಲ್ಲಿ ನೂತನ ಮೆಗಾ ಡೈರಿಯನ್ನು ಪ್ರಾರಂಭಿಸಲು ಕೆಕೆಆರ್‌ಡಿಬಿಯಿಂದ 50 ಕೋಟಿ ರೂ. ಅನುದಾನ ಒದಗಿಸಲಾಗುವುದು.
ಬೆಂಗಳೂರಿನಲ್ಲಿ ಸುಸಜ್ಜಿತ ಕುರಿ ಮತ್ತು ಮೇಕೆ ಮಾರುಕಟ್ಟೆ, ಚಿಕ್ಕಬಳ್ಳಾಪುರದಲ್ಲಿ ಅಂತಾರಾಷ್ಟ್ರೀಯ ಹೈಟೆಕ್ ಹೂವಿನ ಮಾರುಕಟ್ಟೆ ಹಾಗೂ ಕೆಜಿಎಫ್‌ನಲ್ಲಿ ರೈತರ ಆಧುನಿಕ ಮಾರುಕಟ್ಟೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸುವ ಗುರಿ ಹೊಂದಲಾಗಿದೆ.
ಇದನ್ನೂ ಓದಿ: ಸೋಲಾರ್ ಕರೆಂಟ್ ಕೃಷಿ | ಬೆಸ್ಕಾಂ ಸೋಲಾರ್ ಸ್ಕೀಮ್ | ನಿಮ್ಮ ಮನೆ ಮೇಲೆಯೇ ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡಿ...