ಜಾನುವಾರುಗಳು ಆಕಸ್ಮಿಕವಾಗಿ ಸಾವನ್ನಪ್ಪಿದಾಗ ಸಂಕಷ್ಟಕ್ಕೆ ಸಿಲುಕುವ ರೈತರಿಗೆ ನೆರವಾಗುವ ‘ಅನುಗ್ರಹ’ ಯೋಜನೆಯಡಿ (Anugraha Scheme) ನೀಡುವ ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ರೈತರು, ಪಶುಪಾಲಕರ ಹಿತದೃಷ್ಟಿಯಿಂದ ಹಸು, ಎಮ್ಮೆ, ಎತ್ತು ಹಾಗೂ ಕುರಿ-ಮೇಕೆಗಳ ಆಕಸ್ಮಿಕ ಸಾವಿಗೆ ನೀಡುತ್ತಿದ್ದ ಪರಿಹಾರ ಮೊತ್ತ ಹೆಚ್ಚಳ ಮಾಡಲಾಗಿದ್ದು; ಕರ್ನಾಟಕ ಬಜೆಟ್ 2025ರಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಎಷ್ಟೆಷ್ಟು ಪರಿಹಾರ ಹೆಚ್ಚಳ?: ಈ ಮೊದಲು ಹಸು, ಎಮ್ಮೆ, ಎತ್ತುಗಳು ಆಕಸ್ಮಿಕವಾಇ ಸಾವನ್ನಪ್ಪಿದರೆ ತಲಾ 10,000 ರೂ. ಪರಿಹಾರ ನೀಡಲಾಗುತ್ತಿತ್ತು. ಇದೀಗ ಈ ಮೊತ್ತವನ್ನು 15,000 ರೂ.ಗೆ ಹೆಚ್ಚಿಸಲಾಗಿದೆ. ಇನ್ನು ಕುರಿ-ಮೇಕೆಗಳಿಗೆ 5,000 ರೂ.ನಿಂದ 7,500 ರೂ.ಗೆ ಹಾಗೂ 3-6 ತಿಂಗಳ ಕುರಿ/ಮೇಕೆ ಮರಿಗಳಿಗೆ 3,500 ರೂ.ನಿಂದ 5,000 ರೂ.ಗೆ ಏರಿಕೆ ಮಾಡಲಾಗಿದೆ.
ದೇಶಿ ತಳಿ ಸಂರಕ್ಷಣೆಗೆ ಅನುದಾನ: ಇನ್ನು ರಾಜ್ಯದ ಹೆಮ್ಮೆಯ ದೇಶಿ ದನದ ತಳಿಗಳಾದ ಹಳ್ಳಿಕಾರ್, ಕಿಲಾರಿ, ಅಮೃತ್ ಮಹಲ್, ಬಂಡೂರು ಕುರಿ ತಳಿಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ 2 ಕೋಟಿ ರೂ. ಕಾಯ್ದಿರಿಸಲಾಗಿದೆ. ಅಮೃತ್ ಮಹಲ್ ಕಾವಲುಗಳಲ್ಲಿನ ಭೂ ಒತ್ತುವರಿ ತಡೆಯಲು ಹಾಗೂ ಅಮೃತ್ ಮಹಲ್ ರಾಸುಗಳಿಗೆ ಮೇವು ಲಭ್ಯವಾಗುವಂತೆ ಮಾಡಲು, ಅರಣ್ಯ ಇಲಾಖೆ ಹಾಗೂ ನರೇಗಾ ಸಹಯೋಗದೊಂದಿಗೆ ಮೇವಿನ ಮರಗಳ ನೆಡುತೋಪು ಅಭಿವೃದ್ಧಿ ಭರವಸೆ ನೀಡಲಾಗಿದೆ.
ಸಂಚಾರಿ ಕುರಿಗಾರರಿಗೆ ತರಬೇತಿ: ಸಂಚಾರಿ ಕುರಿಗಾರರಿಗೆ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮ ಹಾಗೂ ಆಧುನಿಕ ಕುರಿ ಸಾಕಾಣಿಕೆ ಪದ್ಧತಿಗಳ ಕುರಿತು ತರಬೇತಿ ನೀಡಲಾಗುವುದು.
ಇನ್ನು ಪಶುಪಾಲನೆಗೆ ಒತ್ತು ನೀಡುವ ಹಿನ್ನಲೆಯಲ್ಲಿ 2025-26ನೇ ಸಾಲಿನಲ್ಲಿ ರಾಜ್ಯಾದ್ಯಂತ 50 ನೂತನ ಪಶು ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗುವುದು. ಜೊತೆಗೆ ನಬಾರ್ಡ್ ಸಹಯೋಗದೊಂದಿಗೆ 100 ಪಶು ವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಇದನ್ನೂ ಓದಿ: ಹೈನುಗಾರಿಕೆಗೆ ₹10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ