ಆಭರಣ ಮಾರುಕಟ್ಟೆಯಲ್ಲಿ (Jewellery Market) ಕಂಪನವೆದ್ದಿದೆ. ನಿರಂತರವಾಗಿ ಏರಿಕೆಯಾಗುತ್ತಿರುವ ಚಿನ್ನದ ಬೆಲೆ (Gold Price) ಇದೀಗ 10 ಗ್ರಾಮ್’ಗೆ ಬರೋಬ್ಬರಿ 89,600 ರೂ.ಗೆ ತಲುಪಿದೆ. ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ 10 ಗ್ರಾಂ ಶುದ್ಧ ಚಿನ್ನದ ದರ (24 ಕ್ಯಾರೆಟ್) ಫೆಬ್ರವರಿ 11ರ ಮಂಗಳವಾರ 89,600 ರೂ. ಇತ್ತು. ಗ್ರಾಹಕರು ಚಿನ್ನದ ಬಿಸ್ಕತ್ ಕೊಳ್ಳುವುದಾದರೆ ಶೇ.3ರ ಜಿಎಸ್‌ಟಿ ಸೇರಿಸಿ 92,360 ರೂ. ನೀಡಬೇಕಾಗಿದೆ!
ಆಭರಣ ಚಿನ್ನದ ದರ ಇದಕ್ಕಿಂತ ಕೊಂಚ ಕಡಿಮೆಯಿದೆ. ಆದರೆ ಅದೂ ಸಾಮಾನ್ಯ ಗ್ರಾಹಕರ ಕೈಗೆಟುಕದಂತಾಗಿದೆ. ಬೆಳ್ಳಿ ಬೆಲೆ ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಒಂದು ಕೆ.ಜಿ. ಶುದ್ಧ ಬೆಳ್ಳಿ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿಗೆ ತಲುಪಿದೆ. ಸತತ ಏಳು ದಿನಗಳ ಏರಿಕೆಯ ನಂತರ ಚಿನ್ನದ ದರ ಫೆಬ್ರವರಿ 11ರಂದು 200 ರೂ. ಮತ್ತು ಬೆಳ್ಳಿ ದರ 900 ರೂ. ಇಳಿಕೆಯಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿಯ ನೈಋತ್ಯ ರೈಲ್ವೆಯಲ್ಲಿ 503 ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್ಸೆಸ್ಸೆಲ್ಸಿ ಪಾಸಾಗಿದ್ರೆ ಅರ್ಜಿ ಹಾಕಿ...
ಇನ್ನೊಂದು ತಿಂಗಳಲ್ಲಿ ಭರ್ತಿ ಲಕ್ಷ ರೂ. : ಇನ್ನೊಂದು ತಿಂಗಳಲ್ಲಿ ಪ್ರತಿ ಗ್ರಾಂ ಚಿನ್ನ 10 ಸಾವಿರ ರೂ. ಮುಟ್ಟುವ ಸಾಧ್ಯತೆ ಇದೆ. ಅಂದರೆ 10 ಗ್ರಾಂ ಚಿನ್ನದ ಬೆಲೆ ಭರ್ತಿ ಒಂದು ಲಕ್ಷ ರೂಪಾಯಿ ಆಗಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಈಗಿನ ಬೆಲೆ ಏರಿಕೆ ಪರ್ವ ಗಮನಿಸಿದರೆ ಇದು ಖಂಡಿತ ಸಾಧ್ಯವಿದೆ. ಫೆಬ್ರವರಿ 1ರಿಂದ 11ರ ವರೆಗೆ 22 ಕ್ಯಾರೆಟ್ ಚಿನ್ನದ ಬೆಲೆ ನಿರಂತರವಾಗಿ ಏರುತ್ತಲೇ ಬಂದಿದೆ.
ಟ್ರಂಪ್ ಎಫೆಕ್ಟ್ : ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೊಸ ಹೊಸ ತೆರಿಗೆಗಳನ್ನು ಹೇರುತ್ತಿರುವುದು ಜಗತ್ತಿನಾದ್ಯಂತ ಮಾರುಕಟ್ಟೆಗಳಲ್ಲಿ ಆಲ್ಲೋಲ ಕಲ್ಲೋಲ ಉಂಟುಮಾಡುತ್ತಿದೆ. ಚಿನ್ನದ ಬೆಲೆಯ ಶರವೇಗದ ಏರಿಕೆ ಕೂಡ ಇದು ಟ್ರಂಪ್ ಎಫೆಕ್ಟ್ ಎನ್ನಲಾಗುತ್ತಿದೆ.
ಉಕ್ಕು ಮತ್ತು ಅಲ್ಯುಮಿನಿಯಂ ಆಮದಿನ ಮೇಲೆ ಹೊಸದಾಗಿ ಶೇ.25ರಷ್ಟು ತೆರಿಗೆ ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲೇ ದುರ್ಬಲ ರೂಪಾಯಿ ಮತ್ತು ಜಾಗತಿಕ ದೃಢ ಪ್ರವೃತ್ತಿ ಮುಂತಾದ ಕಾರಣಗಳಿಂದಾಗಿ ಚಿನ್ನದ ದರ ಗಗನಕ್ಕೇರಿದೆ.
ಇದನ್ನೂ ಓದಿ: ಕರ್ನಾಟಕ ಅಂಚೆ ವೃತ್ತ ನೇಮಕಾತಿ 2025: 10ನೇ ತರಗತಿ ಪಾಸಾದವರಿಗೆ ಪೋಸ್ಟಾಫೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ