Schemes

Housing Scheme Subsidy-ಇನ್ಮುಂದೆ ಬಡವರಿಗೆ ಮನೆ ಕಟ್ಟಿಕೊಳ್ಳಲು ರಾಜ್ಯ ಸರ್ಕಾರದಿಂದ 3.50 ಲಕ್ಷ ರೂ. ಸಹಾಯಧನ | ನಿರ್ಮಾಣ ವೆಚ್ಚ ಹೆಚ್ಚಳಕ್ಕೆ ಮುಂದಾದ ಸರ್ಕಾರ

Housing Scheme Subsidy-ಇನ್ಮುಂದೆ ಬಡವರಿಗೆ ಮನೆ ಕಟ್ಟಿಕೊಳ್ಳಲು ರಾಜ್ಯ ಸರ್ಕಾರದಿಂದ 3.50 ಲಕ್ಷ ರೂ. ಸಹಾಯಧನ | ನಿರ್ಮಾಣ ವೆಚ್ಚ ಹೆಚ್ಚಳಕ್ಕೆ ಮುಂದಾದ ಸರ್ಕಾರ

ರಾಜ್ಯ ಸರ್ಕಾರವು ವಸತಿ ಯೋಜನೆಗಳ (Housing Scheme Subsidy) ಅಡಿಯಲ್ಲಿ ಮನೆಗಳ ನಿರ್ಮಾಣಕ್ಕೆ ನೀಡಲಾಗುತ್ತಿರುವ ಸಹಾಯಧನವನ್ನು ಹೆಚ್ಚಿಸಲು ಮುಂದಾಗಿದೆ. ನಾಳೆ ಮಾರ್ಚ್ 7ರಂದು ಮಂಡನೆಯಾಗಲಿರುವ ‘ಕರ್ನಾಟಕ ಬಜೆಟ್​-2025’ರಲ್ಲಿ (Karnataka Budget-2025) ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ಸಚಿವ ಜಮೀರ್​ ಅಹ್ಮದ್​ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್​ನ ಅನಿಲ್​ಕುಮಾರ್​ ಕೇಳಿದ್ದ ಪ್ರಶ್ನೆಗೆ ಉತ್ತರಿಸುವ ಮೂಲಕ ಸಚಿವರು ಈ ಮಾಹಿತಿ ನೀಡಿದ್ದಾರೆ.


ಈಗೀರುವ ಸಹಾಯಧನವೆಷ್ಟು?: ಸದ್ಯಕ್ಕೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 1.20 ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ. ಇನ್ನು ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಫಲಾನುಭವಿಗೆ 1.60 ಲಕ್ಷ ರೂ. ಸಹಾಯಧನ ಒದಗಿಸಲಾಗುತ್ತಿದೆ. ಇವತ್ತಿನ ದುಬಾರಿ ಯುಗದಲ್ಲಿ ಈ ಮೊತ್ತದಲ್ಲಿ ಮನೆ ನಿರ್ಮಾಣ ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಆಶ್ರಯ ಮನೆ ಸಬ್ಸಿಡಿ ಹೆಚ್ಚಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿತ್ತು.


ಇದನ್ನೂ ಓದಿ: ಕೋಳಿ ಸಾಕಣೆಗೆ 25 ಲಕ್ಷ, ಕುರಿ-ಮೇಕೆ ತಳಿ ಸಂವರ್ಧನೆಗೆ 50 ಲಕ್ಷ ಆರ್ಥಿಕ ನೆರವು


ಸಹಾಯಧನ ಎಷ್ಟೆಷ್ಟು ಹೆಚ್ಚಳ?: ಈ ಹಿನ್ನಲೆಯಲ್ಲಿ ಹಿಂದಿನ ವಸತಿ ಸಚಿವರು ಪರಾಮರ್ಶಿಸುವ ಭರವಸೆ ನೀಡಿದ್ದರು. ಇದೀಗ ಹಿಂದೆ ಇದ್ದ ಸಹಾಯಧನವನ್ನು ಸರ್ಕಾರ ಹೆಚ್ಚಿಸಲು ಮುಂದಾಗಿದೆ. ಸಾಮಾನ್ಯ ವರ್ಗದವರಿಗೆ 1.20 ಲಕ್ಷ ರೂ.ದಿಂದ 3 ಲಕ್ಷ ರೂ., ಎಸ್ಸಿ ಮತ್ತು ಎಸ್ಟಿ ವರ್ಗದ ಫಲಾನುಭವಿಗೆ 1.60 ಲಕ್ಷ ರೂ.ನಿಂದ 3.5 ಲಕ್ಷ ರೂ.ಗೆ ಸಬ್ಸಿಡಿ ಮೊತ್ತವನ್ನು ಏರಿಸಲಾಗುವುದು ಎಂದು ವಸತಿ ಸಚಿವರು ತಿಳಿಸಿದ್ದಾರೆ.


5 ಲಕ್ಷ ರೂ. ಹೆಚ್ಚಳಕ್ಕೆ ಆಗ್ರಹ : ಮರಳು, ಕಬ್ಬಿಣ, ಸಿಮೆಂಟ್ ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಜಾಸ್ತಿಯಾಗಿದೆ. ನಿರ್ಮಾಣ ಕಾರ್ಮಿಕರ ವೆಚ್ಚ ಕೂಡ ದುಬಾರಿಯಾಗಿದೆ. ಈಗ ಮನೆ ಕಟ್ಟಲು ಸರ್ಕಾರ ನೀಡುತ್ತಿರುವ ಸಬ್ಸಿಡಿ ಹಣ ಯಾವುದಕ್ಕೂ ಸಾಕಾಗುತ್ತಿಲ್ಲ. ಹಾಗಾಗಿ, ಸಬ್ಸಿಡಿ ಮೊತ್ತವನ್ನು 5 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ವಸತಿ ಸಚಿವರಿಗೆ ಕಾಂಗ್ರೆಸ್​ನ ಅನಿಲ್​ಕುಮಾರ್​ ಮನವಿ ಮಾಡಿದ್ದರು.


ಸದ್ಯಕ್ಕೆ ಮನೆ ನಿರ್ಮಾಣ ಸಹಾಯಧನವನ್ನು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 3 ಲಕ್ಷ ರೂ. ಹಾಗೂ ಎಸ್ಸಿ-ಎಸ್ಟಿ ಸಮುದಾಯದ ಫಲಾನುಭವಿಗಳಿಗೆ 3.5 ಲಕ್ಷ ರೂ. ಹೆಚ್ಚಿಸಲು ನಿರ್ಧರಿಸಲಾಗಿದೆ. ನಾಳೆ ಮಂಡನೆಯಾಗುವ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ಅವರು ತಿಳಿಸಿದ್ದಾರೆ. 


ಇದನ್ನೂ ಓದಿ: ಮನೆಗೆ ಉಚಿತ ಸೋಲಾರ್ ಕರೆಂಟ್ ಪಡೆಯಲು ಈಗಲೇ ಅರ್ಜಿ ಹಾಕಿ | ಕರ್ನಾಟಕದಲ್ಲಿ 5,14 ಲಕ್ಷ ಕುಟುಂಬಗಳು ನೋಂದಣಿ


ಪಿಎಂ ಆವಾಸ್​ (ನಗರ) ಯೋಜನೆ: ಇನ್ನು ರಾಜ್ಯಾದ್ಯಂತ ಪ್ರಧಾನ ಮಂತ್ರಿ ಆವಾಸ್​ (ನಗರ) ಯೋಜನೆ ಅಡಿಯಲ್ಲಿ ಒಟ್ಟು 4,54,692 ಮನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು; ಈ ಪೈಕಿ 2,55,711 ಮನೆಗಳು ಈಗಾಗಲೇ ಪೂರ್ಣವಾಗಿದೆ. 1,17,441 ಮನೆಗಳು ಪ್ರಗತಿಯಲ್ಲಿದ್ದು, 81,540 ಮನೆಗಳು ಪ್ರಾರಂಭವಾಗಬೇಕಿದೆ.


ಪಿಎಂ ಆವಾಸ್​ ಯೋಜನೆ (ಗ್ರಾಮೀಣ): ಅದೇ ರೀತಿ ಪ್ರಧಾನ ಮಂತ್ರಿ ಆವಾಸ್​ (ಗ್ರಾಮೀಣ) ಯೋಜನೆ ಅಡಿಯಲ್ಲಿ ಗ್ರಾಮೀಣ ಭಾಗದಲ್ಲಿ 9,32,864 ಮನೆ ನಿರ್ಮಾಣದ ಗುರಿ ಹೊಂದಿದ್ದು; 3,46,878 ಮನೆಗಳಿಗೆ ಅನಮೋದನೆ ನೀಡಲಾಗಿದೆ. ಈ ಪೈಕಿ 1,55,567 ಮನೆಗಳು ಪೂರ್ಣವಾಗಿದ್ದು; 52,097 ಪ್ರಗತಿಯಲ್ಲಿವೆ. 7,25,200 ಮನೆಗಳು ಪ್ರಾರಂಭವಾಗಬೇಕಿದೆ ಎಂದು ವಸತಿ ಸಚಿವರು ಮಾಹಿತಿ ನೀಡಿದರು.


ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ?