Heavy rainfall in August September : ಮಳೆ ಎಲ್ಲೆಲ್ಲೂ ಅಲ್ಲೋಲ ಕಲ್ಲೋಲ ಸೃಷ್ಟಿಸತೊಡಗಿದೆ. ಭೂ ಕುಸಿತ, ಬೆಳೆನಷ್ಟ, ಆಸ್ತಿಪಾಸ್ತಿ ಹಾನಿ ಮಿತಿ ಮೀರುತ್ತಿದೆ. ಜುಲೈ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಈವರೆಗೆ ಸಾವಿರಾರು ಹೆಕ್ಟೇರ್ ಬೆಳೆ ನಷ್ಟವಾಗಿದ್ದು; ಹಲವು ಜನ ಸಾವನ್ನಪ್ಪಿವೆ. ಹೀಗಿರುವಾಗಲೇ ಮುಂದಿನ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಮನ್ನಷ್ಟು ಅಬ್ಬರಿಸಲಿದೆ ಎಂಬ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ (Indian Meteorological Department) ನೀಡಿದೆ.
ಈಚೆಗೆ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಈವರೆಗೆ 44,000 ಹೆಕ್ಟರ್ ಕೃಷಿ ಭೂಮಿಯಲ್ಲಿ ಬೆಳೆ ಹಾನಿಯಾಗಿದ್ದು, ಈವರೆಗೆ 43ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 800ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಹಾನಿಯಾದರೆ, 4,000 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಹೇಳಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (IMD) ಮುಖ್ಯಸ್ಥ ಮೃತ್ಯುಂಜಯ ಮಹಾಪಾತ್ರಾ ಅವರು ಆಗಸ್ಟ್ 1ರಂದು ನಡೆಸಿದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಈ ಆಗಸ್ಟ್ ಮತ್ತು ಬರಲಿರುವ ಸೆಪ್ಟೆಂಬರ್ ತಿಂಗಳಲ್ಲಿ ದೇಶದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗಲಿದೆ. ಆಗಸ್ಟ್ ಅಂತ್ಯದ ವೇಳೆಗೆ ಲಾ ನಿನಾ ಪರಿಸ್ಥಿತಿಗಳು ಏರ್ಪಡುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ಅಬ್ಬರಿಸಲಿದೆ ಮಳೆ
ಜೂನ್ ತಿಂಗಳಲ್ಲಿ ಸಾಮಾನ್ಯ ವಾಡಿಕೆಯಂತೆ ದೇಶಾದ್ಯಂತ 44.54 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ ಕಳೆದ ಜೂನ್ 1 ರಿಂದ 31ರ ವರೆಗೂ 45.38 ಸೆಂ..ಮೀ ಮಳೆಯಾಗಿದೆ. ಇದು ಈ ಅವಧಿಯ ವಾಡಿಕೆ ಮಳೆಗಿಂತ ಶೆ.2ರಷ್ಟು ಹೆಚ್ಚಳವಾದಂತಾಗಿದೆ.
ಇನ್ನು ಈ ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಭಾರತದಾದ್ಯಂತ ಮಳೆಯು ಶೇಕಡಾ 106ರಷ್ಟು ಸುರಿಯಲಿದೆ. ಅಂದರೆ, ದೀರ್ಘಾವಧಿಯ ಸರಾಸರಿ 42.28 ಸೆಂಟಿ ಮೀಟರ್’ನಷ್ಟು ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆಗಸ್ಟ್ ತಿಂಗಳ ಮಳೆ ನಕ್ಷತ್ರಗಳು
ಸಾಮಾನ್ಯವಾಗಿ ಭಾರತದಲ್ಲಿ ಜೂನ್ ಮೊದಲ ವಾರದಲ್ಲಿ ‘ಆರಿದ್ರಾ’ ಮಳೆಯಿಂದ ಮುಂಗಾರು ಮಳೆ ಶುರುವಾಗುತ್ತದೆ. ಆರಿದ್ರಾದಿಂದ ವಿಶಾಖದ ವರೆಗೂ ಮಳೆಗಾಲವಿರುತ್ತದೆ. ಈಗಾಗಲೇ ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರಾ, ಆರಿದ್ರಾ, ಪುನರ್ವಸು ಹಾಗೂ ಪುಷ್ಯ ಮಳೆ ನಕ್ಷತ್ರಗಳು ಮುಗಿದಿವೆ.
ಆಗಸ್ಟ್ ತಿಂಗಳಲ್ಲಿ ಆಶ್ಲೇಷ, ಮಘ ಹಾಗೂ ಹುಬ್ಬ ಮಳೆ ನಕ್ಷತ್ರಗಳ ಆಗಮನವಾಗಲಿದ್ದು; ಈ ಮೂರೂ ಮಳೆಗಳು ನೆಚ್ಚಿನ ಮಳೆಗಳು ಎಂದೇ ಹೇಳಲಾಗುತ್ತದೆ. ಇದೇ ಆಗಸ್ಟ್ 2ಕ್ಕೆ ಆಶ್ಲೇಷ ಮಳೆ ನಕ್ಷತ್ರ ಆರಂಭವಾಗಿದೆ. ಆಗಸ್ಟ್ 16ಕ್ಕೆ ಮಘ ಮಳೆ ಆರಂಭವಾದರೆ, ಆಗಸ್ಟ್ 30ಕ್ಕೆ ಹುಬ್ಬ ಮಳೆ ಆರಂಭವಾಗಲಿದೆ.