Minors allowed to ride two-wheeler : ಅಪ್ರಾಪ್ತ ವಯಸ್ಕ (minors) ಬಾಲಕರು ದ್ವಿಚಕ್ರ ವಾಹನ (Two Wheeler) ಚಲಾಯಿಸಿ, ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕು ಪೋಷಕರು ದಂಡ ಮತ್ತು ಶಿಕ್ಷೆ ಎದುರಿಸಿದ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಇನ್ಮುಂದೆ, ಇಂತಹ ಪೀಕಲಾಟಕ್ಕೆ ಇತಿಶ್ರೀ ಹಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು; ಅಪ್ರಾಪ್ತರಿಗೂ ದ್ವಿಚಕ್ರ ವಾಹನ ಚಲಾವಣೆಗೆ ಅವಕಾಶ ನೀಡಲು ತೀರ್ಮಾನಿಸಿದೆ.
ಹೌದು, 16 ವರ್ಷ ಪೂರ್ಣಗೊಂಡ ಬಾಲಕ, ಬಾಲಕಿಯರಿಗೆ ಸಾರ್ವಜನಿಕ ರಸ್ತೆಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheeler) ಚಲಾಯಿಸಲು ಅವಕಾಶ ಮಾಡಿಕೊಡಲು ಕೇಂದ್ರ ಸರಕಾರ ನಿರ್ಧರಿಸಿದೆ. ‘ಅಪ್ರಾಪ್ತರಿಗೂ ಅಲ್ಪ ಶಕ್ತಿಯ ಇ-ವಾಹನ (E-Vehicle) ಚಲಾಯಿಸುವ ಅವಕಾಶವಿದೆ’ ಎಂದಿದ್ದು, ಈ ಸಂಬಂಧ ರಸ್ತೆ ಸಾರಿಗೆ ನಿಯಮಗಳಿಗೆ ತಿದ್ದುಪಡಿ ತರಲು ನಿರ್ಧರಿಸಿದೆ.
ಇ-ವಾಹನ ಬಳಕೆಗೆ ಉತ್ತೇಜನ
ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಮಾರುಕಟ್ಟೆ ವಿಸ್ತರಿಸುತ್ತಿದ್ದು; ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರವು ಇ-ವಾಹನ ಬಳಕೆಗೆ ಉತ್ತೇಜನ ನೀಡಲು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. 2015ರಲ್ಲಿ ‘ಫೇಮ್’ (FAME) ಯೋಜನೆ ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ ಈಚೆಗೆ ಪಿಎಂ ಇ-ಡ್ರೆöÊ ಸ್ಕೀಮ್ (PM E-Drive Scheme) ಅನುಷ್ಠಾನಗೊಳಿಸಿದೆ.
ಇದರ ಜೊತೆಗೆ ಸರ್ಕಾರ ಇದೀಗ ಅಪ್ರಾಪ್ತ ವಯಸ್ಕರರಿಗೂ ಇ-ವಾಹನ ಚಾಲನೆಗೆ ಅವಕಾಶ ನೀಡಲಿ ಮುಂದಾಗಿದೆ. ಸದ್ಯ ಕಾನೂನಿಗೆ 67 ತಿದ್ದುಪಡಿ ಪ್ರಸ್ತಾಪಿಸಿದ್ದು, ಅಕ್ಟೋಬರ್ 15ರ ವರೆಗೆ ಜನರು ಸಲಹೆಗಳನ್ನು ನೀಡಬಹುದಾಗಿದೆ. ವಿಧೇಯಕ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿದೆ.
ತಪ್ಪಲಿದೆ ಪೋಷಕರ ಪೀಕಲಾಟ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮೋಟಾರು ವಾಹನ ಕಾನೂನಿನಲ್ಲಿ ಪ್ರಮುಖ ಬದಲಾವಣೆ ತರಲು ಯತ್ನಿಸುತ್ತಿದ್ದು; ಅಧಿವೇಶನದಲ್ಲಿ ವಿಧೇಯಕ ಮಂಡನೆಯಾಗಿ ಮಾನ್ಯತೆ ಸಿಕ್ಕರೆ ಮಕ್ಕಳಿಗಾಗಿಯೇ ವಿಶೇಷ ಇ-ವಾಹನಗಳು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ.
ಹಾಗೊಂದು ವೇಳೆ ಅಪ್ರಾಪ್ತರಿಗೂ ಇ-ವಾಹನ ಚಾಲನೆಗೆ ಅವಕಾಶ ಸಿಕ್ಕರೆ ಶಾಲೆ-ಕಾಲೇಜು, ಮನೆಪಾಠಕ್ಕೆ ತೆರಳಲು ಪರದಾಡುವ ಹರೆಯದ ಬಾಲಕ-ಬಾಲಕಿಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ಪೋಷಕರಿಗೂ ಸಾಕಷ್ಟು ಸಮಾಧಾನವಾಗಲಿದೆ.
ಎಂತಹ ದ್ವಿಚಕ್ರ ವಾಹನಗಳಿಗೆ ಅವಕಾಶ?
16 ವರ್ಷ ಪೂರ್ಣಗೊಂಡ ಬಾಲಕ, ಬಾಲಕಿಯರಿಗೆ ಸಾರ್ವಜನಿಕ ರಸ್ತೆಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಿರುವ ಸರಕಾರ ಅದಕ್ಕೆ ವಾಹನ ಶಕ್ತಿಗೆ ಮಿತಿ ಹೇರುವ ಸಂಭವವಿದೆ.
ಇ-ವಾಹನದ ಗರಿಷ್ಠ ವೇಗ ಮಿತಿ ಗಂಟೆಗೆ 25 ಕಿ.ಮೀ., ಸ್ಕೂಟರ್ ಸಾಮರ್ಥ್ಯ 50 ಸಿಸಿ, ಮೋಟಾರ್ ಶಕ್ತಿ ಗರಿಷ್ಠ 1,500 ವ್ಯಾಟ್’ಗೆ ಸೀಮಿತವಾಗಿರಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ನಿಗದಿಪಡಿಸುವ ಸಾಧ್ಯತೆ ಇದೆ.