Karnataka ST Subsidy Schemes 2024 : ಕರ್ನಾಟಕ ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ (Department of Tribal Welfare, Karnataka) ಹಲವು ಕಲ್ಯಾಣ ಯೋಜನೆಗಳನ್ನು ಹಾಕಿಕೊಂಡಿದೆ. 2024-25ನೇ ಸಾಲಿನಲ್ಲಿ ವಿವಿಧ ಸಬ್ಸಿಡಿ ಯೋಜನೆಗಳಡಿ (ST Subsidy Schemes) ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಉದ್ಯಮಶೀಲತೆ ಅಭಿವೃದ್ಧಿ ಯೋಜನೆ, ಸ್ವಯಂ ಉದ್ಯೋಗ ನೇರಸಾಲ ಯೋಜನೆ (Self Employment Direct Loan Scheme), ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ (Micro Credit (prerana) Scheme), ಗಂಗಾ ಕಲ್ಯಾಣ ಯೋಜನೆಗಳಿಗೆ (Ganga Kalyana Scheme) ಅರ್ಹ ಫಲಾನುಭವಿಗಳು ಇದೇ ಅಕ್ಟೋಬರ್ 23 ರಿಂದ ನವೆಂಬರ್ 23ರ ಒಳಗಾಗಿ ಅರ್ಜಿ ಸಲ್ಲಿಸಿ ಇವುಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
ಈ ಯೋಜನೆಯಡಿ ಫಲಾನುಭವಿಗಳಿಗೆ ಸಣ್ಣಪುಟ್ಟ ವ್ಯಾಪಾರದ ಚಟುವಟಿಕೆಗಳಾದ ಪೆಟ್ಟಿ ಅಂಗಡಿ, ಸಿದ್ಧ ಉಡುಪುಗಳ ಅಂಗಡಿ, ಕುರಿ ಮತ್ತು ಮೇಕೆ ಸಾಕಣೆ, ಮೀನುಗಾರಿಕೆ, ಹಣ್ಣು ಮತ್ತು ತರಕಾರಿ ಅಂಗಡಿ, ಟೈಲರಿಂಗ್ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಧನ ಸಹಾಯ ನೀಡಲಾಗುತ್ತದೆ.
ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಹ ಪ್ರತಿ ಫಲಾನುಭವಿಗೆ 1 ಲಕ್ಷ ರೂಪಾಯಿ ಧನ ಸಹಾಯವನ್ನು ನೀಡಲಾಗುತ್ತದೆ. ಇದರಲ್ಲಿ ಅರ್ಧ ಮೊತ್ತವು (50,000) ಸಹಾಯಧನವಾಗಿದ್ದು; ಉಳಿದ ಅರ್ಧ (50,000) ಮೊತ್ತವು ಶೇ.4ರ ಬಡ್ಡಿ ದರದ ಸಾಲವಾಗಿರುತ್ತದೆ.
ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ
ಈ ಯೋಜನೆಯಡಿ ಫಲಾನುಭವಿಗಳಿಗೆ ಸಣ್ಣ ಪ್ರಮಾಣದ ಕೈಗಾರಿಕೆ, ಹಂದಿ, ಕೋಳಿ, ಮೇಕೆ ಸಾಕಣೆ, ವಕೀಲರ ಕಚೇರಿ ಸ್ಥಾಪನೆ, ಬ್ಯೂಟಿ ಪಾರ್ಲರ್, ಸಿದ್ಧ ಉಡುಪುಗಳು, ಡಿಟಿಪಿ ಕೇಂದ್ರ ಇತ್ಯಾದಿ ವಿವಿಧ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕವಾಗಿ ಸಹಾಯ ಮಾಡಲಾಗುತ್ತದೆ.
ಈ ಯೋಜನೆಯನ್ನು ಬ್ಯಾಂಕ್‌ಗಳ ಸಮನ್ವಯದೊಂದಿಗೆ ಜಾರಿಗೊಳಿಸಲಾಗಿದೆ. ಸಹಾಯದ ಗರಿಷ್ಠ ಮೊತ್ತವು ಘಟಕ ವೆಚ್ಚದ 70% ಆಗಿರುತ್ತದೆ. ಗರಿಷ್ಠ 2 ಲಕ್ಷ ರೂಪಾಯಿಗಳು ಮತ್ತು ಘಟಕ ವೆಚ್ಚದ ಉಳಿದ ಭಾಗವನ್ನು ಸಾಲವಾಗಿ ಬ್ಯಾಂಕ್‌ಗಳು ಮಂಜೂರು ಮಾಡುತ್ತವೆ.
ಇನ್ನು ಇದೇ ಯೋಜನೆಯಡಿ ‘ಸ್ವಾವಲಂಬಿ ಸಾರಥಿ’ ಉಪ ಯೋಜನೆಯಡಿ ಸರಕು ವಾಹನ / ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಸುವ ಉದ್ದೇಶಕ್ಕೆ ಸಾಲದ ಮೊತ್ತದ ಶೇ.75ರಷ್ಟು, ಅಂದರೆ ಗರಿಷ್ಟ 4 ಲಕ್ಷ ರೂಪಾಯಿ ವರೆಗೂ ಸಹಾಯಧನ ಒದಗಿಸಲಾಗುತ್ತದೆ.
ಪ್ರೇರಣಾ (ಮೈಕ್ರೋ ಕ್ರೆಡಿಟ್ ಫೈನಾನ್ಸ್) ಯೋಜನೆ
ಸ್ವ-ಸಹಾಯ ಸಂಘಗಳಲ್ಲಿನ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಮತ್ತು ಸಬಲೀಕರಣ ಉದ್ದೇಶಕ್ಕಾಗಿ `ಪ್ರೇರಣಾ ಯೋಜನೆ’ ಅನುಷ್ಠಾನಗೊಳಿಸಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಪರಿಶಿಷ್ಟ ಪಂಗಡದ ನಿರುದ್ಯೋಗಿ ಮಹಿಳೆಯರು ಸಣ್ಣ ಪ್ರಮಾಣದ ಸ್ವ-ಉದ್ಯೋಗ ಚಟುವಟಿಕೆಗಳನ್ನು ಪ್ರಾರಂಭಿಸಲು ಈ ಯೋಜನೆಯಡಿ ಆರ್ಥಿಕ ನೆರವನ್ನು ನೀಡಲಾಗುತ್ತದೆ.
ಕನಿಷ್ಠ 10 ಪರಿಶಿಷ್ಟ ಪಂಗಡದ ಮಹಿಳಾ ಸದಸ್ಯರನ್ನು ಹೊಂದಿರುವ ಆಯ್ಕೆಗೊಂಡ ಸ್ವಸಹಾಯ ಸಂಘಕ್ಕೆ ಪ್ರತಿ ಸದಸ್ಯರಿಗೂ 15,000 ರೂಪಾಯಿ ಸಹಾಯಧನ ಮತ್ತು 10,000 ರೂಪಾಯಿ ಸಾಲ ಹೀಗೆ ಪ್ರತಿ ಸದಸ್ಯರಿಗೆ 25,000 ರೂಪಾಯಿಯಂತೆ ಅವರುಗಳು ಸದಸ್ಯತ್ವ ಹೊಂದಿರುವ ಸ್ವ-ಸಹಾಯ ಸಂಘಕ್ಕೆ ಘಟಕ ವೆಚ್ಚ 2.5 ಲಕ್ಷ ರೂಪಾಯಿ ಆರ್ಥಿಕ ನೆರವನ್ನು ಒದಗಿಸಲಾಗುವುದು.
ಇದರಲ್ಲಿ 1.5 ಲಕ್ಷ ರೂಪಾಯಿ ಸಹಾಯಧನವಾಗಿದ್ದು; ಉಳಿದ 1 ಲಕ್ಷ ರೂಪಾಯಿ ಸಾಲದ ಹಣಕ್ಕೆ ವಾರ್ಷಿಕ ಶೇ.4ರ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ. ಸಾಲದ ಹಣವನ್ನು ಬಡ್ಡಿ ಸಮೇತವಾಗಿ ಮೂರು ವರ್ಷಗಳ ಅವಧಿಯಲ್ಲಿ ಮಾಸಿಕ/ತ್ರೆöÊಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.
ಗಂಗಾ ಕಲ್ಯಾಣ ಯೋಜನೆ
ಈ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಕೃಷಿ ಜಮೀನುಗಳಿಗೆ ಬೋರ್‌ವೆಲ್ ಕೊರೆಯುವ ಮೂಲಕ ನೀರಾವರಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಅಂತರ್ಜಲ ಕುಸಿದಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಿಗೆ ಘಟಕ ವೆಚ್ಚ 4.75 ಲಕ್ಷ ರೂಪಾಯಿ ಹಾಗೂ ಇತರೆ ಜಿಲ್ಲೆಗಳಿಗೆ 3.75 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ಇದರಲ್ಲಿ 50,000 ಸಾಲ ಮತ್ತು ಉಳಿದ ಮೊತ್ತವು ಸಹಾಯಧನವಾಗಿರುತ್ತದೆ.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಅರ್ಹ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಈ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಆನ್‌ಲೈನ್ https://suvidha.karnataka.gov.in ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಸಮೀಪದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ :
23-10-2024 - ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
23-11-2024