Canceled BPL Ration Card Return : ರಾಜ್ಯಾದ್ಯಂತ ವ್ಯಾಪಕ ಟೀಕೆಗಳು ಕೇಳಿ ಬಂದ ಪ್ರಯುಕ್ತ ಅನರ್ಹ ಬಿಪಿಎಲ್ ರೇಷನ್ ಕಾರ್ಡ್ (Ineligible BPL Ration Card) ರದ್ದು ಕಾರ್ಯಾಚರಣೆಯನ್ನು ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಮಾತ್ರವಲ್ಲ ಈಗಾಗಲೇ ರದ್ದಾಗಿರುವ ಅರ್ಹರ ರೇಷನ್ ಕಾರ್ಡುಗಳನ್ನು ವಾಪಾಸು ಯಥಾಸ್ಥಿತಿಯಲ್ಲಿ ಒದಗಿಸಲು ಮುಂದಾಗಿದೆ.
ನಿನ್ನೆ ನವೆಂಬರ್ 21ರಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಆಹಾರ ಸಚಿವ ಕೆ. ಹೆಚ್ ಮುನಿಯಪ್ಪ (K H Muniyappa) ಅವರು ಸದ್ಯಕ್ಕೆ ಕಾರ್ಡುಗಳ ಪರಿಷ್ಕರಣೆಯನ್ನು ಕೈಬಿಡಲಾಗಿದೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿದರೆ, ಉಳಿದೆಲ್ಲ ಕಾರ್ಡುಗಳೂ ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ. ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವ ವರೆಗೂ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಾರದೊಳಗೇ ರದ್ದಾದ ಕಾರ್ಡುಗಳಿಗೆ ರೇಷನ್
ಅನರ್ಹ ಬಿಪಿಎಲ್ ಕಾರ್ಡ್ ರದ್ದತಿ ಕಾರ್ಯಾಚರಣೆಯಲ್ಲಿ ಕೆಲವು ಅರ್ಹರ ಕಾರ್ಡುಗಳೂ ಕೂಡ ರದ್ದಾಗಿವೆ. ಹೀಗೆ ಪರಿಷ್ಕರಣೆಗೆ ಒಳಪಟ್ಟು, ತಾತ್ಕಾಲಿಕವಾಗಿ ಅಮಾನತುಗೊಂಡಿರುವ ಕಾರ್ಡುಗಳನ್ನು ಒಂದು ವಾರದೊಳಗಾಗಿ ಲಾಗಿನ್ಗೆ ಒಳಪಡಿಸಿ ಮುಂದಿನ ವಾರದಿಂದ ಅಕ್ಕಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಮಾನದಂಡಗಳ ಅನುಸಾರವೇ ಕಳೆದ ಎರಡು ತಿಂಗಳಿನಿ೦ದ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡುಗಳ ಪರಿಶೀಲನೆ ಆರಂಭಿಸಿತ್ತು. ಸಚಿವರು ನೀಡಿದ ಮಾಹಿತಿ ಪ್ರಕಾರ ಈ ಪ್ರಕ್ರಿಯೆಯಲ್ಲಿ ಪರಿಷ್ಕರಣೆಯಾದ ಕಾರ್ಡುಗಳೆಷ್ಟು? ಇದರಲ್ಲಿ ಸರ್ಕಾರಿ ನೌಕರರೆಷ್ಟು? ಆದಾಯ ತೆರಿಗೆ ಪಾವತಿದಾರರೆಷ್ಟು? ಎಂಬ ವಿವರ ಈ ಕೆಳಗಿನಂತಿದೆ:
- ಪರಿಷ್ಕರಣೆಯಾದ ಒಟ್ಟು ಕಾರ್ಡುಗಳು : 3.81 ಲಕ್ಷ
- ಆದಾಯ ತೆರಿಗೆ ಪಾವತಿದಾರರು : 98,483
- ಸರ್ಕಾರಿ ನೌಕರರು : 4,036
ರಾಜ್ಯದಲ್ಲಿರುವ ಪಡಿತರ ಕಾರ್ಡುಗಳ ವಿವರ
ರಾಜ್ಯದಲ್ಲಿ ಒಟ್ಟಾರೆ 1,50,59,431 ರೇಷನ್ ಕಾರ್ಡುಗಳಿದ್ದು, ಇದರಲ್ಲಿ 1,02,509 ಕಾರ್ಡುಗಳನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ. ಉಳಿದಂತೆ ಎಲ್ಲಾ ಕಾರ್ಡುಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ. ಈಚೆಗೆ 59,379 ಕಾರ್ಡುಗಳನ್ನು ಬಿಪಿಎಲ್ನಿಂದ ಎಪಿಎಲ್ ಆಗಿ ಪರಿವರ್ತಿಸಲಾಗಿದೆ. ಇದರಲ್ಲೂ 16,806 ಕಾರ್ಡುಗಳನ್ನು ಬಿಪಿಎಲ್ ಆಗಿಯೇ ಮತ್ತೆ ಮುಂದುವರೆಸಲಾಗಿದೆ.
ಕೇ೦ದ್ರ ಸರ್ಕಾರ ಕೂಡ ಬಿಪಿಎಲ್ ಕಾರ್ಡುಗಳ ಪರಿಷ್ಕರಣೆ ಮಾಡಿದ್ದು, 5.08 ಕೋಟಿ ಕಾರ್ಡುಗಳನ್ನು ರದ್ದು ಮಾಡಿದೆ. ಈ ಪೈಕಿ ರಾಜ್ಯದಲ್ಲಿ 8,647 ಕಾರ್ಡುಗಳನ್ನು ಅಮಾನತುಗೊಳಿಸಲಾಗಿದೆ ಎಂದು ಆಹಾರ ಸಚಿವರು ಮಾಹಿತಿ ನೀಡಿದ್ದಾರೆ.
ಹೊಸ ರೇಷನ್ ಕಾರ್ಡುಗಳಿಗೆ ಅವಕಾಶ
ದೇಶದ ಯಾವ ರಾಜ್ಯಗಳಲ್ಲೂ ಬಿಪಿಎಲ್ ಕಾರ್ಡ್ ಪ್ರಮಾಣ ಶೇ.50 ದಾಟಿಲ್ಲ. ಆದರೆ, ನಮಲ್ಲಿ ಶೇ.80ಕ್ಕೆ ತಲುಪಿವೆ. ಇದೇ ಕಾರಣಕ್ಕೆ ಕಳೆದ ಎರಡು ತಿಂಗಳುಗಳಿ೦ದ ಪರಿಷ್ಕರಣೆ ನಡೆಸಲಾಗಿದೆ.
ಕಳೆದ ಎರಡು ವರ್ಷಗಳಿಂದ ಹೊಸ ಬಿಪಿಎಲ್ ಕಾರ್ಡ್ ಅರ್ಜಿಗಳು ಬಾಕಿ ಉಳಿದಿವೆ. ಇಷ್ಟರಲ್ಲೇ ಲಾಗಿನ್ ಪ್ರಕ್ರಿಯೆ ಸರಿಪಡಿಸಿ ಅರ್ಹರಿಗೆ ಹೊಸದಾಗಿ ಬಿಪಿಎಲ್ ಕಾರ್ಡ್ ಹಂಚಿಕೆ ಮಾಡಲಾಗುವುದು. ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಪರಿಷ್ಕರಣೆ ಕಾರ್ಯವನ್ನು ಮುಂದುವರೆಸಿ ಎಲ್ಲವನ್ನೂ ಸರಿಪಡಿಸಿದ ಬಳಿಕ ಹೊಸ ಕಾರ್ಡುಗಳ ಪರಿಶೀಲನೆಯನ್ನು ಕೈಗೆತ್ತಿಕೊಳ್ಳುವುದಾಗಿ ಮುನಿಯಪ್ಪ ಅವರು ತಿಳಿಸಿದ್ದಾರೆ.