Gold price continues to Rise : ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಚಿನ್ನದ ಬೆಲೆ (Gold price) ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿತ್ತು. ನಂತರ ಎರಡು ವಾರ ಸತತವಾಗಿ ಇಳಿಕೆಯ ಹಾದಿಯಲ್ಲಿತ್ತು. ಕಳೆದ ಐದು ದಿನಗಳಿಂದ ಮತ್ತೆ ಏರುಗತಿಯಲ್ಲಿದ್ದು ಚಿನ್ನದ ಬೆಲೆ ಈ ವಾರ ಅನಾಮತ್ತು ಗಗನಮುಖಿಯಾಗಿದೆ. ಕೆಲವು ದಿನಗಳ ಹಿಂದೆ 10 ಗ್ರಾಂ ಬಂಗಾರದ ಬೆಲೆ ಸುಮಾರು 4,000 ರೂಪಾಯಿ ವರೆಗೂ ಇಳಿಕೆ ಕಂಡಿತ್ತು. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ (American dollar) ಬಲಿಷ್ಠವಾಗುತ್ತಿದ್ದಂತೆಯೇ ಚಿನ್ನದ ರೇಟು ಏಕಾಏಕಿ ಏರಿಕೆಯಾಗಿದೆ.
ಇಡೀ ವಾರ ಸತತ ಏರಿಕೆ
ನವೆಂಬರ್ 18ರಿಂದ ಇವತ್ತಿನ ತನಕ ಚಿನ್ನದ ಬೆಲೆ ಸತತ ಏರಿಕೆ ಕಾಣುತ್ತ ಬಂದಿದೆ. ನವೆಂಬರ್ 18ರಂದು ಅಪರಂಜಿ ಚಿನ್ನದ ದರ (10 ಗ್ರಾಂ) 76,460 ರೂ. ಇದ್ದರೆ, ಆಭರಣ ಚಿನ್ನ 70,100 ರೂ. ಇತ್ತು. ಮರುದಿನ ನವೆಂಬರ್ 19ಕ್ಕೆ ಅಪರಂಜಿ ಚಿನ್ನ ತಲಾ 10 ಗ್ರಾಂ ಬೆಲೆ 77,220 ರೂ. ಆಭರಣ ಚಿನ್ನ 70,800 ರೂ. ಏರಿಕೆ ಕಂಡಿತ್ತು.
ಇನ್ನು ನವೆಂಬರ್ 20ರಂದು 77,770 ರೂ. (ಅಪರಂಜಿ ಚಿನ್ನ) 71,300 ರೂ. (ಆಭರಣ ಚಿನ್ನ) ಏರಿಕೆ ಕಂಡಿದೆ. ಹಾಗೇನೆ ನವೆಂಬರ್ 21ಕ್ಕೆ 78,100 ರೂ. (ಅಪರಂಜಿ ಚಿನ್ನ) 71,600 ರೂ. (ಆಭರಣ ಚಿನ್ನ) ಬೆಲೆಗೆ ಮಾರಾಟವಾಗಿದೆ. ಅದೇ ರೀತಿ ನವೆಂಬರ್ 22ರಂದು 79,300 ರೂ. (ಅಪರಂಜಿ ಚಿನ್ನ) 72,400 ರೂ. (ಆಭರಣ ಚಿನ್ನ) ಏರಿಕೆಯಾಗಿದೆ.
ಇನ್ನು ನವೆಂಬರ್ 22ರ ಶುಕ್ರವಾರ ಕರ್ನಾಟಕದ ಚಿನ್ನದ ಧಾರಣೆ ನೋಡುವುದಾದರೆ 24 ಕ್ಯಾರಟ್ ಚಿನ್ನ (10 ಗ್ರಾಂ) 78,820 ರೂ., 22 ಕ್ಯಾರಟ್ ಚಿನ್ನ (10 ಗ್ರಾಂ) 72,250 ರೂ. ಇತ್ತು. ಶುಕ್ರವಾರದ ವಹಿವಾಟಿನಲ್ಲಿ ಚಿನ್ನದ ದರ ಏರಿಕೆಯಾಗಿರುವುದರಿಂದ ಮಳಿಗೆಗಳಿಗೆ ಶನಿವಾರ ದರ ಏರಿಕೆಯಾಗಿದೆ.
ಬಂಗಾರದ ಬೆಲೆ ಏರಿಕೆಗೆ ಕಾರಣ
ಮದುವೆ ಸಿಜನ್ ನಡೆಯುತ್ತಿರುವುದರಿಂದ ಸಹಜವಾಗಿಯೇ ಆಭರಣ ತಯಾರಕರು ಮತ್ತು ಗ್ರಾಹಕರಿಂದ ಬಂಗಾರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇನ್ನೊಂದು ಕಡೆಗೆ ಹೂಡಿಕೆದಾರರೂ ಚಿನ್ನದತ್ತ ಆಕರ್ಷಿತರಾಗಿದ್ದು; ಚಿನ್ನದ ಬೆಲೆ ಗಗನಮುಖಿಯಾಗಲು ಕಾರಣವಾಗಿದೆ.
ಜಾಗತಿಕವಾಗಿ ಚಿನ್ನದ ಬೆಲೆ ಏರಿಗೆ ಹಲವು ಕಾರಣಗಳಿದ್ದು; ಪ್ರಮುಖವಾಗಿ ಆರ್ಬಿಐ ಸೇರಿದಂತೆ ಜಗತ್ತಿನ ಹಲವು ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿಯ ಭರಾಟೆಯಲ್ಲಿವೆ. ಇಷ್ಟರಲ್ಲಿಯೇ ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರಗಳನ್ನು ಕಡಿಮೆ ಮಾಡುವ ಸಂಭವವಿದೆ. ಇದು ಬಂಗಾರದ ಬೇಡಿಕೆ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ.
ಹೊಸ ವರ್ಷಕ್ಕೆ ಮತ್ತಷ್ಟು ಹೆಚ್ಚಳ
ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವಾ ಸಂಸ್ಥೆಯಾದ ಗೋಲ್ಡ್ಮನ್ ಸ್ಯಾಟ್ಸ್ ಗ್ರೂಪ್ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಮುಂದಿನ ವರ್ಷ ಸಿಕ್ಕಾಪಟ್ಟೆ ಏರಲಿದೆ. ಹೊಸ ದಾಖಲೆ ಬೆಲೆಯನ್ನು ಚಿನ್ನ ಗಳಿಸುವ ಸಾಧ್ಯತೆ ಇದೆ. ಚಿನ್ನದ ಬೆಲೆ ಮುಂದಿನ ವರ್ಷಾಂತ್ಯದಲ್ಲಿ ಭಾರತದಲ್ಲಿ ಪ್ರತೀ ಗ್ರಾಂಗೆ 9,500 ರೂ. ಗಡಿ ದಾಟಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಗೋಲ್ಡ್ಮನ್ ವಿಶ್ಲೇಷಕರು.