Agriculture Department (KSDA) Schemes 2024 : 2024-25ನೇ ಸಾಲಿನ ಕೃಷಿ ಇಲಾಖೆಯ (Department of Agriculture – KSDA) ವಿವಿಧ ಯೋಜನೆಗಳ ಧನ ಸಹಾಯಕ್ಕಾಗಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ರೈತರು ಆಯಾ ವ್ಯಾಪ್ತಿಯ ಹೋಬಳಿ ಕೇಂದ್ರದಲ್ಲಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಈ ಕುರಿತು ರಾಜ್ಯದ ವಿವಿಧ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು (Assistant Director, Department of Agriculture) ಮಾಹಿತಿ ನೀಡಿದ್ದಾರೆ.
ಯಾವೆಲ್ಲ ಯೋಜನೆಗಳು
- ಕೃಷಿ ಯಾಂತ್ರೀಕರಣ ಯೋಜನೆ
- ಕೃಷಿ ಸಂಸ್ಕರಣೆ ಯೋಜನೆ
- ಅಟಲ್ ಭೂಜಲ ಯೋಜನೆ
- ಪ್ರಧಾನ ಮಂತಿ ಕೃಷಿ ಸಿಂಚಾಯಿ ಯೋಜನೆ
- ಕೃಷಿ ಭಾಗ್ಯ ಯೋಜನೆ
ಕೃಷಿ ಯಾಂತ್ರೀಕರಣ ಯೋಜನೆ
ಕೃಷಿ ಯಾಂತ್ರೀಕರಣ ಯೋಜನೆಯಡಿ (Agricultural Mechanization Scheme) ವಿವಿಧ ಕೃಷಿ ಯಂತ್ರೋಪರಣಗಳಿಗೆ ಸಹಾಯಧನ ಲಭ್ಯವಿದೆ. ಪ್ರಮುಖವಾಗಿ ಪವರ್ ಟಿಲ್ಲರ್, ರೋಟಿವೇಟರ್, ಎಂ.ಬಿ.ನೇಗಿಲು, ಕಲ್ಟಿವೇಟರ್, ಸಸ್ಯ ಸಂರಕ್ಷಣಾ ಔಷಧಿ ಸಿಂಪಡಿಸುವ ಯಂತ್ರ, ಚಾಪ್ ಕಟ್ಟರ್ ಇನ್ನಿತರೆ ಪರಿಕರಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ.
ಮೇಲ್ಕಾಣಿಸಿದ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ.50 ರಷ್ಟು ಮತ್ತು ಎಸ್‌ಸಿ/ ಎಸ್‌ಟಿ ವರ್ಗದ ರೈತರಿಗೆ ಶೇ.90 ರಷ್ಟು ಸಹಾಯಧನ ನೀಡಲಾಗುತ್ತದೆ. ಗರಿಷ್ಠ 1 ಲಕ್ಷ ರೂಪಾಯಿ ಮೀರದಂತೆ ಸಹಾಯಧನ ಸಿಗಲಿದೆ.
ಕೃಷಿ ಸಂಸ್ಕರಣೆ ಯೋಜನೆ
ಕೃಷಿ ಸಂಸ್ಕರಣೆ ಯೋಜನೆಯಡಿ (Agricultural Processing Scheme) ಕಿರು ಯಂತ್ರೋಪಕರಣಗಳನ್ನು ರಿಯಾಯ್ತಿ ದರದಲ್ಲಿ ಖರೀದಿಸಬಹುದಾಗಿದೆ. ಟಾರ್ಪಲಿನ್, ರಾಗಿ ಕ್ಲೀನಿಂಗ್ ಮಿಷನ್, ಹಿಟ್ಟಿನ ಗಿರಣಿ (ಪ್ಲೋರ್ ಮಿಲ್), ಎಣ್ಣೆಗಾಣ ಹಾಗೂ ಇತರೆ ಕಿರು ಯಂತ್ರಗಳನ್ನು ಈ ಯೋಜನೆಯಡಿ ಪಡೆಯಬಹುದಾಗಿದೆ.
ಸದರಿ ಸಂಸ್ಕರಣ ಯಂತ್ರೋಪಕರಣಗಳ ಖರೀದಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ.50ರಷ್ಟು ಮತ್ತು ಎಸ್‌ಸಿ/ ಎಸ್‌ಟಿ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನ ಸಿಗಲಿದೆ. ಗರಿಷ್ಠ 1 ಲಕ್ಷ ರೂಪಾಯಿ ಮೀರದಂತೆ ಸಹಾಯಧನ ನೀಡಲಾಗುತ್ತದೆ.
ಅಟಲ್ ಭೂಜಲ ಯೋಜನೆ
ಅಟಲ್ ಭೂಜಲ ಯೋಜನೆಯಡಿ (Atal Ground Water Scheme) ತುಂತುರು ನೀರಾವರಿ ಹಾಗೂ ಹನಿ ನೀರಾವರಿ ಘಟಕವನ್ನು ಸ್ಥಾಪಿಸಲು ವರ್ಗಗಳಿಗೆ ಅನುಗುಣವಾಗಿ ಸಹಾಯಧನ ನೀಡಲಾಗುತ್ತದೆ. ಸಾಮಾನ್ಯ ವರ್ಗದ ರೈತರು ಹಾಗೂ ಎಸ್‌ಸಿ/ ಎಸ್‌ಟಿ ವರ್ಗದ ರೈತರಿಗೆ ಬೇರೆ ಬೇರೆ ರೀತಿಯ ಸಬ್ಸಿಡಿ ಸಿಗಲಿದೆ.
ತುಂತುರು ನೀರಾವರಿ ಘಟಕವನ್ನು ಎಲ್ಲಾ ವರ್ಗದ ರೈತರಿಗೆ ಶೇ.90ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಇನ್ನು ಹನಿ ನೀರಾವರಿ ಘಟಕಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ.45ರಷ್ಟು ಹಾಗೂ ಎಸ್‌ಸಿ/ ಎಸ್‌ಟಿ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನದಲ್ಲಿ ವಿತರಿಸಲಾಗುತ್ತದೆ.
ಕೃಷಿ ಭಾಗ್ಯ ಯೋಜನೆ
ಅದೇ ರೀತಿ ಮಳೆಯಾಶ್ರಿತ ಪ್ರದೇಶದ ರೈತರು ಕೃಷಿ ಭಾಗ್ಯ (krushi Bhagya) ಯೋಜನೆಯಡಿ ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್ ಹೊದಿಕೆ, ಡೀಸೆಲ್ ಪಂಪ್‌ಸೆಟ್ ಹಾಗೂ ಲಘು ನೀರಾವರಿ ಘಟಕಗಳನ್ನು ಪ್ಯಾಕೇಜ್ ರೂಪದಲ್ಲಿ ಪಡೆಯಲು ಅವಕಾಶವಿದೆ.
ಈ ಘಟಕಗಳ ನಿರ್ಮಾಣಕ್ಕೆ ಸಾಮಾನ್ಯ ವರ್ಗದವರಿಗೆ ಶೇ.80ರಷ್ಟು ಮತ್ತು ಎಸ್‌ಸಿ/ ಎಸ್‌ಟಿ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. ಈ ಯೋಜನೆ ರಾಜ್ಯದ ಆಯ್ದ ತಾಲ್ಲೂಕುಗಳಲ್ಲಿ ಮಾತ್ರ ಲಭ್ಯವಿದೆ.
ಅರ್ಜಿ ಸಲ್ಲಿಕೆ ಹೇಗೆ? ಬೇಕಾಗುವ ದಾಖಲೆಗಳೇನು?
ಈ ಎಲ್ಲ ಯೋಜನೆಗಳಡಿ ಸಹಾಯಧನ ಪಡೆಯಲು ರೈತರು ಜಮೀನು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರು ಜಾತಿ ಪ್ರಮಾಣ ಪತ್ರ, ನಿರಪೇಕ್ಷಣಾ ಪ್ರಮಾಣ ಪತ್ರ ಸೇರಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಮೇಲ್ಕಾಣಿದ ಎಲ್ಲಾ ಯೋಜನೆಗಳು ಅನುದಾನ ಲಭ್ಯತೆಯ ಆಧಾರದ ಮೇಲೆ ರಾಜ್ಯದ ವಿವಿಧ ತಾಲ್ಲೂಕುಗಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗೆ ರೈತರು ತಮ್ಮ ವ್ಯಾಪ್ತಿಯ ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆದುಕೊಂಡು ಅನುದಾನ ಲಭ್ಯವಿದ್ದರೆ ಅರ್ಜಿ ಸಲ್ಲಿಸಬಹುದಾಗಿದೆ.