Bank Minimum Balance Penalty : ನಿಮ್ಮ ಬ್ಯಾಂಕ್ ಖಾತೆ (Bank Account) ಚಾಲ್ತಿಯಲ್ಲಿರಬೇಕೆಂದರೆ ಅದರಲ್ಲಿ ಇಂತಿಷ್ಟು ಹಣ ಇಟ್ಟಿರಲೇ ಬೇಕು ಎಂಬುವುದು ಬಹುತೇಕ ಬಾಂಕುಗಳು ನಿಯಮವಾಗಿದೆ. ಈ ಕನಿಷ್ಟ ಮೊತ್ತವನ್ನು ಖಾತೆಯಲ್ಲಿ ನಿರ್ವಹಿಸದಿದ್ದರೆ ದಂಡ (Penalty) ವಿಧಿಸಲಾಗುತ್ತದೆ. ಬ್ಯಾಂಕುಗಳು ನೀಡುವ ಸೇವೆ ಮತ್ತು ಬ್ಯಾಂಕ್ ಖಾತೆಗೆ ಅನುಗುಣವಾಗಿ ಈ ದಂಡವನ್ನು ನಿಗದಿಪಡಿಸಲಾಗುತ್ತದೆ.
ನಗರ/ಮೆಟ್ರೋ ಪ್ರದೇಶ ಹಾಗೂ ಗ್ರಾಮಾಂತರ ಪ್ರದೇಶಕ್ಕೆ ಒಂದೊಂದು ರೀತಿಯ ಕನಿಷ್ಠ ಬ್ಯಾನಲ್ಸ್ ನಿಗದಿಪಡಿಸಲಾಗಿದೆ. ಹಾಗೇನೆ ಒಂದೊಂದು ಬ್ಯಾಂಕ್ ಒಂದೊಂದು ರೀತಿಯ ಕನಿಷ್ಠ ಬ್ಯಾಲೆನ್ಸ್ ಮೊತ್ತದ ಮಿತಿ ವಿಧಿಸಿರುತ್ತವೆ. ಈ ಮಿತಿಗಿಂತ ಕಡಿಮೆ ಬ್ಯಾಲೆನ್ಸ್ ಇದ್ದರೆ ದಂಡ ಪಾವತಿಸಬೇಕಾಗುತ್ತದೆ.
ನಿಮಗೆ ಆಶ್ಚರ್ಯವಾಗಬಹುದು, ಕಳೆದ ಐದು ವರ್ಷಗಳಲ್ಲಿ ಭಾರತದ ಸಾರ್ವಜನಿಕ ವಲಯದ (PSU) ಬ್ಯಾಂಕುಗಳು ತಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದೇ ಇದ್ದ ಗ್ರಾಹಕರಿಂದ ಬರೋಬ್ಬರಿ 8,495 ಕೋಟಿ ರೂ. ದಂಡ ಸಂಗ್ರಹಿಸಿವೆ.
ಖಾತೆ ತೆರೆಯುವಾಗಲೇ ಬಹುತೇಕ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ಎಷ್ಟಿರಬೇಕು? ಡಿಪಾಜಿಟ್ ಎಷ್ಟು? ಇತ್ಯಾದಿ ಮಾಹಿತಿಯನ್ನು ನೀಡಿರುತ್ತವೆ. ಇಲ್ಲಿ ಕೆಲವು ಬ್ಯಾಂಕುಗಳು ನಿಗದಿಪಡಿಸಿರುವ ಕನಿಷ್ಠ ಬ್ಯಾಲೆನ್ಸ್ ಮೊತ್ತವೆಷ್ಟು? ಆ ಮೊತ್ತವನ್ನು ನಿರ್ವಹಿಸದಿದ್ದರೆ ವಿಧಿಸುವ ದಂಡವೆಷ್ಟು? ಎಂಬುವುದನ್ನು ನೋಡೋಣ…
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಭಾರತದ ಬಹುದೊಡ್ಡ ಬ್ಯಾಂಕುಗಳಲ್ಲೊ ಒಂದಾಗಿರುವ State Bank of India ಕನಿಷ್ಟ ಬ್ಯಾಲೆನ್ಸ್ ನಿರ್ವಹಿಸದೇ ಇದ್ದರೆ ಯಾವುದೇ ದಂಡ ವಿಧಿಸುವುದಿಲ್ಲ. ಈ ಬ್ಯಾಂಕ್ 2020ರಿಂದ ಈ ನಿಯಮ ಜಾರಿಗೊಳಿಸಿದೆ. ಕನಿಷ್ಠ ಬ್ಯಾಲೆನ್ಸ್ ಕುರಿತ ಆತಂಕವಿರುವವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತ್ಯುತ್ತಮ ಆಯ್ಕೆಯಾಗಿದೆ
ಯೆಸ್ ಬ್ಯಾಂಕ್
ಇನ್ನು ಯೆಸ್ ಬ್ಯಾಂಕ್ (Yes Bank) ಕೂಡ ಕೆಲವು ಷರತ್ತುಗಳನ್ನು ಪೂರೈಸಿದರೆ ಕನಿಷ್ಠ ಬ್ಯಾಲೆನ್ಸ್ ದಂಡವನ್ನು ವಿಧಿಸುವುದಿಲ್ಲ. ನಿಗದಿಪಡಿಸಿದ ಕನಿಷ್ಠ ಬ್ಯಾಲೆನ್ಸ್ಗಿಂತ ಶೇ.50ರಷ್ಟು ಹೆಚ್ಚಿದ್ದರೆ, ಶೇ.5ರಷ್ಟು ದಂಡವನ್ನು ವಿಧಿಸಲಾಗುತ್ತದೆ. ಒಂದು ವೇಳೆ ಕನಿಷ್ಠ ಬ್ಯಾಲೆನ್ಸ್ನ ಶೇ.50 ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ಉಳಿತಾಯ ಖಾತೆಯಲ್ಲಿನ ಕೊರತೆಯ ಮೇಲೆ ಶೇ.5 ಅಥವಾ ಶೇ.10ಷ್ಟು ದಂಡ ವಿಧಿಸಲಾಗುತ್ತದೆ.
ICICI ಬ್ಯಾಂಕ್
ಐಸಿಐಸಿಐ ಬ್ಯಾಂಕ್ 5,000 ರೂಪಾಯಿ ಅನ್ನು ಕನಿಷ್ಠ ಮಾಸಿಕ ಸರಾಸರಿ ಬ್ಯಾಲೆನ್ಸ್ (MAB) ಆಗ ನಿಗದಿಪಡಿಸಿದೆ. ನಿಮ್ಮ ಖಾತೆಯಲ್ಲಿ ಇಷ್ಟು ಮೊತ್ತವನ್ನು ನಿರ್ವಹಿಸದಿದ್ದರೆ, ಕೊರತೆಯ ಮೊತ್ತದ ಶೇ.5ರಷ್ಟು ಮತ್ತು 100 ರೂಪಾಯಿ ದಂಡವನ್ನು ವಿಧಿಸುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)
ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಗ್ರಾಮೀಣ, ಅರೆನಗರ ಹಾಗೂ ನಗರ/ಮೆಟ್ರೋ ಪ್ರದೇಶಗಳಿಗೆ ಒಂದೊಂದು ರೀತಿಯ ಕನಿಷ್ಠ ಬ್ಯಾಲೆನ್ಸ್ ನಿಗಧಿಪಡಿಸಿದೆ. ಈ ಪೈಕಿ ಗ್ರಾಮೀಣ ಪ್ರದೇಶಗಳಲ್ಲಿ 400 ರೂಪಾಯಿ, ಅರೆನಗರ ಪ್ರದೇಶಗಳಲ್ಲಿ 500 ರೂಪಾಯಿ ಹಾಗೂ ನಗರ/ಮೆಟ್ರೋ ಪ್ರದೇಶಗಳಲ್ಲಿ 600 ರೂಪಾಯಿ ಕನಿಷ್ಠ ಬ್ಯಾಲೆನ್ಸ್ ಹೊಂದಿರಬೇಕು. ಇಷ್ಟು ಮೊತ್ತ ನಿರ್ವಹಣೆ ಮಾಡದಿದ್ದರೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ದಂಡ ವಿಧಿಸುತ್ತದೆ.
HDFC ಬ್ಯಾಂಕ್
ಎಚ್ಡಿಎಫ್ಸಿ ಬ್ಯಾಂಕ್ ಕೂಡ ನಗರ/ಮೆಟ್ರೋ ಮತ್ತು ಅರೆನಗರ ಪ್ರದೇಶಗಳಿಗೆ ಒಂದೊಂದು ರೀತಿಯ ಕನಿಷ್ಠ ಬ್ಯಾಲೆನ್ಸ್ ಮೊತ್ತವನ್ನು ನಿಗದಿಪಡಿಸಿದೆ. ಈ ಪೈಕಿ ನಗರ/ಮೆಟ್ರೋ ಪ್ರದೇಶಗಳಲ್ಲಿ 10,000 ರೂಪಾಯಿ ಹಾಗೂ ಅರೆನಗರ ಪ್ರದೇಶಗಳಲ್ಲಿ 5,000 ರೂಪಾಯಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸಬೇಕು. ನಿಗದಿತ ಮೊತ್ತ ತಪ್ಪಿದರೆ ಬ್ಯಾಲೆನ್ಸ್ ಕೊರತೆಯ ಶೇ.6ರಷ್ಟು ದಂಡ ವಿಧಿಸಲಾಗುತ್ತದೆ.