CC TV is mandatory for all Gram Panchayats : ಈಚೆಗಷ್ಟೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು (Rural Development and Panchayat Raj Departmen) ಗ್ರಾಮ ಪಂಚಾಯತಿಯಲ್ಲಿ ನಡೆಯುವ ಹಣಕಾಸು ಅವ್ಯವಹಾರಕ್ಕೆ ಕೇವಲ ಪಿಡಿಒ, ಕಾರ್ಯದರ್ಶಿಗಳು ಮಾತ್ರವಲ್ಲದೇ ಗ್ರಾಪಂ ಅಧ್ಯಕ್ಷ, ಸದಸ್ಯರು ಕೂಡ ಹೊಣೆಗಾರರು ಎಂಬ ನಿಯಮ ಜಾರಿಗೆ ಸಿದ್ಧತೆ ನಡೆಸಿದೆ. ಇದೀಗ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಕಡಿವಾಣ ಹಾಕಲು ಮತ್ತೊಂದು ನಿಯಮ ಜಾರಿಗೊಳಿಸಲು ಮುಂದಾಗಿದೆ.
ಹೌದು, ಇನ್ಮುಂದೆ ರಾಜ್ಯದಲ್ಲಿರುವ ಅಷ್ಟೂ ಗ್ರಾಮ ಪಂಚಾಯತಿಗಳಲ್ಲಿ ಸಿಸಿ ಟಿವಿ ಕಡ್ಡಾಯವಾಗಿ ಅಳವಡಿಸಬೇಕು ಎಂಬ ಸುತ್ತೋಲೆಯನ್ನು (Circular) ಹೊರಡಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿಸಿ ಟಿವಿಯನ್ನು ಹೇಗೆ? ಎಲ್ಲೆಲ್ಲಿ ಅಳವಡಿಸಬೇಕು? ಹಾಗೂ ಎಂತಹ ಗುಣಮಟ್ಟದ ಸಿಸಿ ಟಿವಿ ಕ್ಯಾಮರಾ ಖರೀದಿಸಬೇಕು? ಎಂಬ ಬಗ್ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಗ್ರಾಪಂ ಗಳು ಸ್ಥಳೀಯ ಸ್ವಯಂ ಸರ್ಕಾರಗಳು
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಅನ್ವಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳನ್ನು ನೇರವಾಗಿ ಅನುಷ್ಟಾನಗೊಳಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯತಿಗಳಿಗೆ ವಹಿಸಲಾಗಿದೆ. ಅದರಂತೆ ಪ್ರತಿ ಯೋಜನೆಯ ಅನುದಾನವನ್ನು ನೇರವಾಗಿ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡಲಾಗುತ್ತಿದೆ.
ಹೀಗಾಗಿ ಗ್ರಾಮ ಪಂಚಾಯತಿಗಳು ಸ್ಥಳೀಯ ಸ್ವಯಂ ಸರ್ಕಾರದಂತೆ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಸೇವೆ, ಸೌಲಭ್ಯಗಳನ್ನು ತಲುಪಿಸುವ ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದ ಜನತೆಗೆ ತಲುಪಿಸುವ ಗುರುತರ ಜವಾಬ್ದಾರಿ ಗ್ರಾಮ ಪಂಚಾಯತಿಗಳ ಮೇಲಿದೆ.
ಭ್ರಷ್ಟಾಚಾರಕ್ಕೆ ಕಡಿವಾಣ
ಹೀಗೆ ನೇರ ಅನುದಾನ ಪಡೆದು ಸ್ಥಳೀಯ ಸ್ವಯಂ ಸರ್ಕಾರದಂತೆ ಕಾರ್ಯನುರ್ವಹಿಸುವ ಗ್ರಾಮ ಪಂಚಾಯತಿಗಳು ಈಚೆಗೆ ಭ್ರಷ್ಟಾಚಾರದ ಅಖಾಡವಾಗಿವೆ. ಇಲ್ಲಿನ ಅಧಿಕಾರಿಗಳು, ಸಿಬ್ಬಂದಿಗಳ ಮೇಲೆ ಹಲವು ಅವ್ಯವಹಾರದ ಆರೋಪಗಳು ಕೇಳಿ ಬರುತ್ತಿವೆ.
ಗ್ರಾಮ ಪಂಚಾಯತಿ ಕಛೇರಿಯಲ್ಲಿರುವ ದಾಖಲೆಗಳ ಸುರಕ್ಷತೆಯ ಜೊತೆಗೆ ನೌಕರರು ಶ್ರದ್ಧೆಯಿಂದ ಕೆಲಸ ಮಾಡುವಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಉದ್ದೇಶದಿಂದ ಗ್ರಾಮ ಪಂಚಾಯತಿ ಕಛೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999 ಮತ್ತು ನಿಯಮಗಳು 2000ರ ಅನ್ವಯ ಆಯಾ ಗ್ರಾಮ ಪಂಚಾಯತಿಗಳು ಸ್ವಂತ ನಿಧಿಯಿಂದ ವೆಚ್ಚ ಭರಿಸಿ ಸಿಸಿ ಟಿವಿ ಖರೀದಿಸಿ ಕಛೇರಿಗಳಲ್ಲಿ ಅಳವಡಿಸುವಂತೆ ಎಲ್ಲಾ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಎಲ್ಲಾ ಗ್ರಾಮ ಪಂಚಾಯತಿ ಪಿಡಿಒ ಗಳಿಗೆ ಸೂಚಿಸಲಾಗಿದೆ.
ಎಲ್ಲೆಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕು?
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸುತ್ತೋಲೆ ಮಾರ್ಗಸೂಚಿಗಳ ಅನ್ವಯ ಗ್ರಾಮ ಪಂಚಾಯತಿ ಕಚೇರಿಗಳ ಈ ಕೆಳಕಂಡ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಲು ಸೂಚಿಸಲಾಗಿದೆ:
- ಗ್ರಾ.ಪಂ ಕಛೇರಿ ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರ
- ಗ್ರಾ.ಪಂ ಕಛೇರಿ ಪಡಸಾಲೆಗಳು, ದಾಸ್ತಾನು ಕೊಠಡಿ
- ಸಾರ್ವಜನಿಕ ಸೇವೆ, ಸೌಲಭ್ಯಗಳನ್ನು ನೀಡುವ ಸ್ಥಳ
- ಸಾರ್ವಜನಿಕರೊಂದಿಗೆ ಹೆಚ್ಚಾಗಿ ಕಛೇರಿ ವ್ಯವಹಾರ ಮಾಡುವ ಸ್ಥಳ
- ಗ್ರಾ.ಪಂ ಸಭಾಂಗಣ
- ಗ್ರಾ.ಪಂ ಕಟ್ಟಡದಲ್ಲಿ ಕಂಡು ಬರುವ ಮುಖ್ಯ ಕೊಠಡಿಗಳು
ಸಿಸಿ ಟಿವಿ ಗುಣಮಟ್ಟ ಹೇಗಿರಬೇಕು?
ಮೂರು ವರ್ಷ ಮೇಲ್ಪಟ್ಟು ವಾರಂಟಿ ಹೊಂದಿರುವ, ಸುಲಭವಾಗಿ ಹಾಗೂ ಸ್ಥಳೀಯವಾಗಿ ರಿಪೇರಿ ಮಾಡಲು ಅನುಕೂಲ ಇರುವ ಸಂಸ್ಥೆಯ Static IP enabled ಸಿಸಿ ಟಿವಿ ಕ್ಯಾಮೆರಾಗಳನ್ನೇ ಖರೀದಿಸಬೇಕು.
ಅಂತರ್ ಜಾಲದ ಮುಖಾಂತರ ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗಳಿ೦ದ ವೀಕ್ಷಿಸಲು ಅನುಕೂಲವಾಗುವ ಅತ್ಯಾಧುನಿಕ ಮಾದರಿಯ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಮಳೆ ಹಾಗೂ ಗಾಳಿಗೆ ಹಾಳಾಗದಂತೆ ಸುರಕ್ಷತೆ ಕಲ್ಪಿಸಬೇಕು.
ಒಂದು ತಿಂಗಳ ವಿಡಿಯೋ ಸಂಗ್ರಹ ಮಾಡುವಂತಿರಬೇಕು. ವಿಡಿಯೋ ಅವಶ್ಯಕವೆನಿಸಿದಲ್ಲಿ ಡಿವಿಡಿ ಅಥವಾ ಹಾರ್ಡ್ ಡ್ರೈವ್‌ಗಳಲ್ಲಿ ಸಂಗ್ರಹ ಮಾಡುವಂತಿರಬೇಕು. ಕರೆಂಟ್ ಇಲ್ಲದಿದ್ದರೂ ಕಾರ್ಯನಿರ್ವಾಹಿಸುವಂತೆ ಸಿಸಿ ಟಿವಿ ಕ್ಯಾಮೆರಾಗಳಿಗೆ ವಿದ್ಯುತ್ ಬ್ಯಾಕ್ ಅಪ್ ಸೌಲಭ್ಯವನ್ನು ಕಲ್ಪಿಸಬೇಕು.