Extension of Deadline Again for Installation of HSRP : ಹಳೆಯ ವಾಹನಗಳಿಗೆ ಹೈ ಸೆಕ್ಯೂರಿಟಿ ನೋಂದಣಿ ಫಲಕ (High Security Registration Plates – HSRP) ಅಳವಡಿಕೆ ಗಡುವನ್ನು ನವೆಂಬರ್ 30ಕ್ಕೆ ನಿಗದಿ ಮಾಡಿ ಸಾರಿಗೆ ಇಲಾಖೆ (Karnataka Transport Department) ಆದೇಶ ಹೊರಡಿಸಿದೆ. ನಿಗದಿತ ದಿನಾಂಕದೊಳಗೆ ಹೊಸ ನಂಬರ್ ಪ್ಲೇಟ್ ಅಳವಡಿಸದ ವಾಹನಗಳಿಗೆ ದಂಡ (Penalty) ಖಚಿತ ಎನ್ನಲಾಗುತ್ತಿದೆ.
2019ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಅದರಂತೆ ರಾಜ್ಯದಲ್ಲಿ 2 ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕಿದೆ. ಈವರೆಗೆ 50 ಲಕ್ಷ ವಾಹನಗಳು ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿದ್ದು, ಇನ್ನೂ 1.50 ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕಿದೆ.
ವರ್ಷದಲ್ಲಿ ನಾಲ್ಕು ಬಾರಿ ವಿಸ್ತರಣೆ
ಸಾರಿಗೆ ಇಲಾಖೆ ಈಗಾಗಲೇ ಒಂದು ವರ್ಷದಲ್ಲಿ ನಾಲ್ಕು ಬಾರಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವನ್ನು ವಿಸ್ತರಿಸಿದೆ. 2023ರ ನವೆಂಬರ್ ತಿಂಗಳಲ್ಲಿಯೇ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ರಾಜ್ಯ ಸರ್ಕಾರ ವಾಹನ ಮಾಲೀಕರಿಗೆ ಡೆಡ್‌ಲೈನ್ ನೀಡಿತ್ತು. ಆದರೆ, ವಾಹನ ಮಾಲೀಕರು ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಆಸಕ್ತಿ ತೋರದ ಕಾರಣ 2024ರ ಫೆಬ್ರವರಿ ವರೆಗೆ ಗಡುವು ವಿಸ್ತರಿಸಲಾಗಿತ್ತು.
ಆನಂತರವೂ ಎಚ್‌ಎಸ್‌ಆರ್‌ಪಿ ಅಳವಡಿಕೆ ಪ್ರಮಾಣ ಹೆಚ್ಚಾಗಲಿಲ್ಲವಾದ್ದರಿಂದ ಮತ್ತೆ ಜುಲೈಗೆ ಗಡುವು ವಿಸ್ತರಿಸಲಾಗಿತ್ತು. ಬಳಿಕ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸೆಪ್ಟೆಂಬರ್ 15ಕ್ಕೆ ಮತ್ತೊಂದು ಬಾರಿ ಗಡುವು ವಿಸ್ತರಿಸಿ ಸಾರಿಗೆ ಇಲಾಖೆ ಆದೇಶಿಸಿತ್ತು.
ಇದೀಗ ಸೆಪ್ಟೆಂಬರ್ 15ರ ಗಡುವು ಕೂಡ ಮುಕ್ತಾಯವಾಗಿದ್ದು; ಪುನಃ ನವೆಂಬರ್ 30ರ ವರೆಗೂ ಅವಕಾಶ ನೀಡಲಾಗಿದೆ. ನವೆಂಬರ್ 30ರೊಳಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಹೊಸ ಗಡುವು ಮೀರಿದ ಮೇಲೆ ಸಾರಿಗೆ ಇಲಾಖೆ ದಂಡ ವಿಧಿಸುವ ಸಾಧ್ಯತೆ ಇದೆ.