Gold price down, Silver price up : ನಿರಂತರ ಏರುಮುಖಿಯಾಗಿದ್ದ ಚಿನ್ನದ ಬೆಲೆ (Gold price) ಕ್ರಮೇಣ ಇಳಿಮುಖವಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ ಬರೋಬ್ಬರಿ 1,350 ರೂಪಾಯಿ ಇಳಿಕೆ ಕಂಡಿದ್ದು; ಆಭರಣ ಪ್ರಿಯರಲ್ಲಿ ಖುಷಿ ಮೂಡಿಸಿದೆ.
ನಿನ್ನೆ ಅಕ್ಟೋಬರ್ 10ರಂದು ನವದೆಹಲಿಯ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆಯು 350 ರೂಪಾಯಿ ಇಳಿಕೆಯಾಗಿದ್ದು, 77,350 ರೂಪಾಯಿಗೆ 10 ಗಾಂ ಚಿನ್ನ ಮಾರಾಟವಾಗಿದೆ. ನಿರಂತರ ಮೂರು ದಿನದ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಭರ್ತಿ 1,350 ರೂಪಾಯಿ ಇಳಿಕೆಯಾಗಿದೆ.
ಏರಿದ ಬೆಳ್ಳಿ ಧಾರಣೆ
ಇನ್ನು ಬೆಳ್ಳಿ ಬೆಲೆಯಲ್ಲಿ (Silver price) ನಿರಂತರ ಏರಿಕೆ ಮುಂದುವರೆದಿದೆ. ಪ್ರತಿ ಕೆ.ಜಿಗೆ ಬೆಳ್ಳಿ ಧಾರಣೆಯು 300 ರೂಪಾಯಿ (ಅಕ್ಟೋಬರ್ 10) ಏರಿಕೆಯಾಗಿದ್ದು, ಕೆ.ಜಿ ಬೆಳ್ಳಿಗೆ 91,500 ಬೆಲೆ ಇದೆ. ಈ ಹಣಕಾಸು ವರ್ಷದ ಆರಂಭದಲ್ಲಿ ಒಂದು ಕೆ.ಜಿ ಬೆಳ್ಳಿ ಬೆಲೆ 75,000 ರೂಪಾಯಿ ಇತ್ತು. ಇದೀಗ ಈ ಬೆಲೆ ಅಕ್ಟೋಬರ್ 10ಕ್ಕೆ 91,500 ರೂಪಾಯಿಗೆ ಜಿಗಿದಿದೆ. ಅಂದರೆ, 17,934 ರೂಪಾಯಿ ಏರಿಕೆ ಕಂಡಿದೆ.
ಚಿನ್ನದ ಬೆಲೆ ಇಳಿಕೆಗೆ ಕಾರಣವೇನು?
ಮಾರುಕಟ್ಟೆ ತಜ್ಞರ ಪ್ರಕಾರ ಆಭರಣ ತಯಾರಕರು ಹಾಗೂ ದಾಸ್ತಾನುಗಾರರಿಂದ ಬೇಡಿಕೆ ಕಡಿಮೆ ಆಗಿರುವುದರಿಂದ ಚಿನ್ನದ ಬೆಲೆ ಕುಸಿತ ಕಂಡಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮಾಡುವ ಸಂಭವವಿದೆ. ಇನ್ನೊಂದು ಕಡೆಗೆ ಡಾಲರ್ ಮೌಲ್ಯದಲ್ಲಿ ಏರಿಕೆಯಾಗುತ್ತಿದೆ. ಇದರಿಂದಾಗಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಹಣಕಾಸು ವರ್ಷದ ಆರಂಭದಲ್ಲಿ ಇದ್ದ ಚಿನ್ನದ ಬೆಲೆಗೂ ಈಗಿನ ಬೆಲೆಗೂ ಹೋಲಿಸಿದರೆ ಇದು ದೊಡ್ಡ ಇಳಿಕೆ ಏನಲ್ಲ. ಹಣಕಾಸು ವರ್ಷದ ಆರಂಭದಲ್ಲಿ 68,700 ರೂಪಾಯಿ ಇದ್ದ 10 ಗ್ರಾಂ ಚಿನ್ನದ ದರ ಇದೀಗ 77,350 ರೂಪಾಯಿಗೆ ಏರಿಕೆ ಕಂಡಿದೆ. ಇದೇ ರೀತಿಯ ಬೆಲೆ ಏರಿಕೆ ಮುಂದುವರೆದರೆ ಚಿನ್ನ ಹತ್ತು ಗ್ರಾಂ ಚಿನ್ನದ ಬೆಲೆ ಹಾಗೂ ಕೆ.ಜಿಗೆ ಬೆಳ್ಳಿಯ ಬೆಲೆ ಒಂದು ಲಕ್ಷ ರೂಪಾಯಿ ದಾಟುವ ಲಕ್ಷಣಗಳಿವೆ ಎನ್ನಲಾಗುತ್ತಿದೆ.