IDBI Bank Recruitment 2024 : ಭಾರತೀಯ ಕೈಗಾರಿಕಾಭಿವೃದ್ಧಿ ಬ್ಯಾಂಕ್ (Industrial Development Bank of India – IDBI) ಭರ್ಜರಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. 2024-25ನೇ ಸಾಲಿಗೆ ಸೇಲ್ಸ್ ಮತ್ತು ಆಪರೇಷನ್ಸ್ ವಿಭಾಗದಲ್ಲಿ ಬರೋಬ್ಬರಿ 1,000 ಎಕ್ಸಿಕ್ಯೂಟಿವ್ ಹುದ್ದೆಗಳ (Executive Posts) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ನವೆಂಬರ್ 7ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 16ರ ತನಕ ಸಮಯವಿದೆ. ಆನ್‌ಲೈನ್ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನಿಗದಿತ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಅರ್ಹತೆಗಳೇನು?
ಸದರಿ ಐಡಿಬಿಐ ಬ್ಯಾಂಕ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಕಲೆ, ವಾಣಿಜ್ಯ, ವಿಜ್ಞಾನ ಅಥವಾ ಎಂಜಿನಿಯರಿಂಗ್ ಸೇರಿದಂತೆ ಯಾವುದೇ ವಿಷಯದಲ್ಲಿ ಪದವಿ ಪಡೆದಿದ್ದರೂ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಹಾಗೂ ಗರಿಷ್ಠ 25 ವರ್ಷವಾಗಿದ್ದು; ಅಭ್ಯರ್ಥಿಗಳು ಅಕ್ಟೋಬರ್ 1, 1999 ಮತ್ತು ಅಕ್ಟೋಬರ್ 1, 2004ರ ನಡುವೆ ಜನಿಸಿರಬೇಕು. ಕಂಪ್ಯೂಟರ್/ಐಟಿ ಸಂಬಂಧಿತ ವಿಭಾಗದಲ್ಲಿ ಕಾರ್ಯನಿರ್ವಹಿಸುವ ನೈಪುಣ್ಯ ಹೊಂದಿರಬೇಕು.
ಮಾಸಿಕ ವೇತನ ಮತ್ತು ಸೌಲಭ್ಯಗಳು
ಭಾರತೀಯ ಕೈಗಾರಿಕಾಭಿವೃದ್ಧಿ ಬ್ಯಾಂಕ್ (ಐಡಿಬಿಐ) ಸೇಲ್ಸ್ ಮತ್ತು ಆಪರೇಷನ್ಸ್ ವಿಭಾಗದ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಆಯ್ಕೆಯಾದವರಿಗೆ ಮಾಸಿಕ 29,000 ದಿಂದ 31,000 ರೂಪಾಯಿ ವೇತನ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆರಂಭದಲ್ಲಿ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಂಡು, ನಂತರ ಪ್ರತಿ ವರ್ಷ ಗುತ್ತಿಗೆ ಒಪ್ಪಂದವನ್ನು ಪುನರ್ ಪರಿಶೀಲನೆ ಮಾಡಲಾಗುತ್ತದೆ. ಎರಡು ವರ್ಷಗಳ ನಂತರ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಭಡ್ತಿ ನೀಡಲಾಗುತ್ತದೆ.
ಅರ್ಜಿ ಶುಲ್ಕವೆಷ್ಟು?
ಎಸ್‌ಸಿ/ಎಸ್‌ಟಿ, ವಿಶೇಷಚೇತನ ಅಭ್ಯರ್ಥಿಗಳಿಗೆ 250 ರೂ. ಹಾಗೂ ಉಳಿದ ಎಲ್ಲ ವರ್ಗದವರಿಗೆ 1,050 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಒಬ್ಬ ಅಭ್ಯರ್ಥಿಯಿಂದ ಒಂದೇ ಅರ್ಜಿಯನ್ನು ನಿರೀಕ್ಷಿಸಲಾಗಿದ್ದು; ಆಯ್ಕೆಯಾಗುವ ಅಭ್ಯರ್ಥಿಗಳು ಅಗತ್ಯತೆಗೆ ಅನುಗುಣವಾಗಿ ದೇಶದ ಯಾವುದೇ ಶಾಖೆಯಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ಐಡಿಬಿಐ ಬ್ಯಾಂಕಿನ ವೆಬ್‌ಸೈಟ್ idhibank.inನಲ್ಲಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ನಂತರ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಕೇಂದ್ರಗಳು
ಆನ್‌ಲೈನ್ ಪರೀಕ್ಷೆ ದಾಖಲೆ ಪರಿಶೀಲನೆ, ವೈಯಕ್ತಿಕ ಸಂದರ್ಶನ ಪೂರ್ವ ನೇಮಕಾತಿ ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
ಆನ್‌ಲೈನ್ ಪರೀಕ್ಷೆಯು ಡಿಸೆಂಬರ್ 1, 2024ರಂದು ನಡೆಯಲಿದ್ದು; ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಧಾರವಾಡ/ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 16-11-2024
ಅಧಿಸೂಚನೆ : Download