Karnataka Free Bus Travel Shakti Scheme Smart Card : ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಮೊದಲಿಗೆ ಅನುಷ್ಠಾನಗೊಂಡಿರುವ ‘ಶಕ್ತಿ ಯೋಜನೆ’ಯಡಿ (Karnataka Shakti Scheme) ಉಚಿತವಾಗಿ ಬಸ್ ಪ್ರಯಾಣ ಮಾಡುವ ಫಲಾನುಭವಿಗಳಿಗೆ ಸ್ಮಾರ್ಟ್ ವಿತರಣೆಗೆ ಸರ್ಕಾರ ಮುಂದಾಗಿದೆ. ಆರಂಭದಲ್ಲಿಯೇ ಸ್ಮಾರ್ಟ್ ಕಾರ್ಡ್ (Shakti Scheme Smart Card) ವಿತರಿಸುವ ಆಲೋಚನೆ ಮಾಡಿದ್ದ ಸರ್ಕಾರ ವಿವಿಧ ಕಾರಣಗಳಿಂದ ಮುಂದೂಡತ್ತ ಬಂದಿದ್ದು; ಇದೀಗ ಕಾರ್ಡ್ ವಿರಣೆಗೆ ತಯಾರಿ ನಡೆಸಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Guarantee scheme) ಯಾವುದೇ ಅಡೆತಡೆ ಇಲ್ಲದೇ ಸುಸೂತ್ರವಾಗಿ ನಡೆದುಕೊಂಡು ಬರುತ್ತಿರುವ ‘ಶಕ್ತಿ ಯೋಜನೆ’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದರಿ ಯೋಜನೆ ಅಡಿಯಲ್ಲಿ ಪ್ರತಿದಿನ ಸರಾಸರಿ 45 ಲಕ್ಷ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ನಿಗಮಗಳ ಆದಾಯ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಸ್ಮಾರ್ಟ್ ಕಾರ್ಡ್ ಏಕೆ?
ಇಷ್ಟು ದಿನ ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಆದರೆ ಕಂಡಕ್ಟರ್‌ಗಳ ಅವ್ಯವಹಾರ, ಮಹಿಳೆಯರ ರಂಪ ರಗಳೆಗಳು ತೀವ್ರವಾಗುತ್ತಿದ್ದು; ಸಾರಿಗೆ ಸಂಸ್ಥೆಗೆ ಕೂಡ ಇದರಿಂದ ನಷ್ಟ ಉಂಟಾಗುತ್ತಿದೆ. ಹೀಗಾಗಿ ಸ್ಮಾಟ್ ಕಾರ್ಡ್ ನೀಡುವುದು ಅನಿವಾರ್ಯವಾಗಿದೆ.
ಇತ್ತೀಚೆಗೆ ಶಕ್ತಿ ಯೋಜನೆ ಹೆಸರಿನಲ್ಲಿ ಕೆಲವು ನಿರ್ವಾಹಕರು ಗೋಲ್‌ಮಾಲ್ ಮಾಡುತ್ತಿದ್ದಾರೆ ಎಂಬ ಗಂಭಿರ ದೂರುಗಳು ಕೇಳಿ ಬರುತ್ತಿವೆ. ಅದರ ಜತೆಗೆ ಕೆಲ ಮಹಿಳೆಯರು ಉಚಿತ ಟಿಕೆಟ್ ಪಡೆಯಲು ಸಂಬಂಧಪಟ್ಟ ದಾಖಲೆ ತೋರಿಸದೆ, ನಿರ್ವಾಹಕರೊಂದಿಗೆ ಜಗಳಕ್ಕಿಳಿಯುವ ಪ್ರಕರಣಗಳು ಕೂಡ ನಡೆಯುತ್ತಿವೆ.
ಶಕ್ತಿ ಯೋಜನೆಯಿಂದಾಗುವ ಆದಾಯ ಸೋರಿಕೆ ತಡೆ ಹಾಗೂ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವಿನ ವಾಗ್ವಾದ, ಗದ್ದಲಗಳಿಗೆ ಕಡಿವಾಣ ಹಾಕಲು ಖಾಸಗಿ ಸಂಸ್ಥೆ ಮೂಲಕ ಸ್ಮಾರ್ಟ್ ಕಾರ್ಡ್ ಖರೀದಿಸಿ, ಪ್ರಯಾಣಿಕರಿಗೆ ವಿತರಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ. ಅದಕ್ಕಾಗಿ ಕೆಲ ಸಂಸ್ಥೆಗಳಿಂದ ತಾಂತ್ರಿಕ ವರದಿ ಸಲ್ಲಿಕೆಗೂ ಸರ್ಕಾರ ಸೂಚಿಸಿದೆ.
ಒಂದು ಸ್ಮಾರ್ಟ್ ಕಾರ್ಡ್’ಗೆ 17 ರೂಪಾಯಿ
ಖಾಸಗಿ ಸಂಸ್ಥೆಗಳ ಮೂಲಕ ಸ್ಮಾರ್ಟ್ ಕಾರ್ಡ್ ಖರೀದಿಸುವ ಬಗ್ಗೆ ಚಿಂತನೆ ನಡೆಸಿರುವ ಸರ್ಕಾರ, ಕಾರ್ಡ್ ವೆಚ್ಚವನ್ನು ಸರ್ಕಾರ ಭರಿಸುವುದಾ? ಅಥವಾ ಪ್ರಯಾಣಿಕರಿಗೆ ವಹಿಸುವುದಾ? ಎಂಬ ಚರ್ಚೆ ನಡೆಯುತ್ತಿದೆ. ಒಂದು ಸ್ಮಾರ್ಟ್ ಕಾರ್ಡ್’ಗೆ 16ರಿಂದ 17 ರೂಪಾಯಿ ವೆಚ್ಚವಾಗಲಿದ್ದು, ‘ಶಕ್ತಿ ಯೋಜನೆ’ ಉಚಿತ, ಗ್ಯಾರಂಟಿ ಯೋಜನೆ ಆಗಿರುವುದರಿಂದ ಕಾರ್ಡ್ ಅನ್ನು ಕೂಡ ಉಚಿತವಾಗಿ ವಿತರಿಸುವ ಸಾಧ್ಯತೆ ಇದೆ.
ಒಟ್ಟಾರೆ ಸ್ಮಾರ್ಟ್ ಕಾರ್ಡ್ ವಿತರಿಸುವುದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಲಾಗಿದ್ದು; ಶೀಘ್ರದಲ್ಲಿಯೇ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ಸಿಗುವ ಮೂಲಕ ಆಧಾರ್ ಕಾರ್ಡ್ ಕೊಂಡೊಯ್ಯುವ ರಗಳೆ ತಪ್ಪಲಿದೆ ಎಂದು ಹೇಳಲಾಗುತ್ತಿದೆ.