kswdc karnataka Schemes 2024 : 2024-25ನೇ ಸಾಲಿನ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ (Karnataka State Women’s Development Corporation) ವಿವಿಧ ಯೋಜನೆಗಳಿಗೆ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಮಹಿಳೆಯರ ಸ್ವಯಂ ಉದ್ಯೋಗಕ್ಕೆ 3 ಲಕ್ಷ ರೂಪಾಯಿ ಸಾಲ, ಸಹಾಯಧನ ಸಿಗಲಿದ್ದು; ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು ‘ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ’ವು ಅನೇಕ ಸಾಲ, ಸಹಾಯಧನ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಪ್ರತಿ ವರ್ಷ ಈ ಯೋಜನೆಗಳ ಅಡಿಯಲ್ಲಿ ಸೌಲಭ್ಯ ನೀಡಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ಆಸಕ್ತ, ಅರ್ಹ ಮಹಿಳೆಯರು ಈ ಕೆಳಗಿನ ಯೋಜನೆಗಳಡಿಯಲ್ಲಿ ಸೌಲಭ್ಯ ಪಡೆಯಬಹುದಾಗಿದೆ.
ಸ್ವಯಂ ಉದ್ಯೋಗ ಕೈಗೊಳ್ಳಲು ಉದ್ಯೋಗಿನಿ ಯೋಜನೆಯಡಿ (Udyogini Scheme) 3 ಲಕ್ಷ ರೂಪಾಯಿ ವರೆಗೂ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈ ಸಾಲಕ್ಕೆ ಯಾವುದೇ ರೀತಿಯ ಬಡ್ಡಿ ಇಲ್ಲ, ಮಾತ್ರವಲ್ಲ 3 ಲಕ್ಷ ರೂಪಾಯಿ ಸಾಲದಲ್ಲಿ ಅರ್ಧಕ್ಕರ್ಧ ಸಾಲ ಮನ್ನಾ ಆಗಲಿದೆ. ಇನ್ನುಳಿದ ಯೋಜನೆಗಳಲ್ಲಿ 30,000 ರೂಪಾಯಿ ಉಚಿತ ಪ್ರೋತ್ಸಾಹಧನ ಕೂಡ ಸಿಗಲಿದೆ.
ಯಾವೆಲ್ಲ ಯೋಜನೆಗಳು?
- ಉದ್ಯೋಗಿನಿ ಯೋಜನೆ
- ಚೇತನ ಯೋಜನೆ
- ಧನಶ್ರೀ ಯೋಜನೆ
- ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ
- ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ
ಉದ್ಯೋಗಿನಿ ಯೋಜನೆ
18 ವರ್ಷ ಮೇಲ್ಪಟ್ಟ ವಯಸ್ಸಿನ, 1.5 ಲಕ್ಷ ರೂಪಾಯಿ ವಾರ್ಷಿಕ ಆದಾಯ ಮಿತಿ ಹೊಂದಿರುವ ಸಾಮಾನ್ಯ ವರ್ಗದ ಎಲ್ಲ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಅರ್ಹ ಮಹಿಳೆಯರಿಗೆ 3 ಲಕ್ಷ ರೂಪಾಯಿ ಸಾಲ ಸೌಲಭ್ಯ ಸಿಗಲಿದ್ದು; ಇದರಲ್ಲಿ ಶೇ.30ರಷ್ಟು ಸಹಾಯಧನ ಸಿಗಲಿದೆ. ಅಂದರೆ ಬರೋಬ್ಬರಿ 1.20 ಲಕ್ಷ ರೂಪಾಯಿ ಸಾಲ ಮನ್ನಾ ಆಗಲಿದೆ.
ಇನ್ನು ವಾರ್ಷಿಕ ಆದಾಯ ಮಿತಿ 2 ಲಕ್ಷ ರೂಪಾಯಿ ಹೊಂದಿರುವ, 18 ವರ್ಷ ಮೇಲ್ಪಟ್ಟ ವಯೋಮಿತಿಯುಳ್ಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ 1 ಲಕ್ಷದಿಂದ 3 ಲಕ್ಷ ರೂಪಾಯಿ ವರೆಗೆ ಸಾಲ ಸಿಗಲಿದ್ದು; ಇದರಲ್ಲಿ ಶೇ.50ರಷ್ಟು ಸಹಾಯಧನ ಸಿಗಲಿದೆ. ಅಂದರೆ ಬರೋಬ್ಬರಿ 1.5 ಲಕ್ಷ ರೂಪಾಯಿ ಉಚಿತವಾಗಿ ಸಿಗಲಿದೆ.
ಚೇತನ ಯೋಜನೆ
ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 30,000 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು ಈ ಯೋಜನೆಯಡಿ ಆರ್ಥಿಕ ಸಹಾಯ ಪಡೆಯಬಹುದಾಗಿದೆ.
ಧನಶ್ರೀ ಯೋಜನೆ
ಈ ಯೋಜನೆಯಡಿ ಆಸಕ್ತ ಮಹಿಳೆಯರು ಸ್ವಯಂ ಉದ್ಯೋಗ ಆರಂಭಿಸಲು 30,000 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. 18 ರಿಂದ 60 ವರ್ಷ ವಯಸ್ಸಿನೊಳಗಿನ ಮಹಿಳೆಯರು ನೆರವು ಪಡೆದು ಸ್ವಯಂ ಉದ್ಯೋಗ ಆರಂಭಿಸಬಹುದಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ
ಲಿಂಗತ್ವ ಅಲ್ಪಸಂಖ್ಯಾತರು ಅಂದರೆ ಮಂಗಳಮುಖಿಯರ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು 30,000 ರೂಪಾಯಿ ಉಚಿತ ಪ್ರೋತ್ಸಾಹಧನ ನೀಡಲಾಗುತ್ತದೆ.
ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ
1993-94 ಮತ್ತು 2007-08ರ ಸಮೀಕ್ಷೆಯಲ್ಲಿ ಗುರುತಿಸಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಕೂಡ ಉಚಿತ 30,000 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು. ಉದ್ಯೋಗಿನಿ ಯೋಜನೆಯ SCSP/TSP ಬಳಕೆಯಾಗದ (Unspent) ಅನುದಾನದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾಪೇಕ್ಷಿಗಳು / ಅರ್ಜಿದಾರರು ಸಹ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಎಲ್ಲ ಯೋಜನೆಗಳು ಸೇವಾಸಿಂಧು ಪೋರ್ಟಲ್‌ನಲ್ಲಿ https://sevasindhu.karnataka.gov.in ಲಭ್ಯವಿರುತ್ತದೆ. ಅರ್ಜಿದಾರರು ಹತ್ತಿರದ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಸರ್ಕಾರದ ವಿವೇಚನಾ ಕೋಟಾ ಮತ್ತು ನಿಗಮದ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾಪೇಕ್ಷಿಗಳು / ಅರ್ಜಿದಾರರು ಮಾನ್ಯ ಸಚಿವರು / ಮಾನ್ಯ ಶಾಸಕರು, ಕರ್ನಾಟಕ ಸರ್ಕಾರ / ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಶಿಫಾರಸ್ಸು ಪತ್ರ ಪಡೆದು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-10-2024
ಹೆಚ್ಚಿನ ಮಾಹಿತಿಗೆ : ಆಯಾ ಜಿಲ್ಲೆಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಛೇರಿ ಸಂಪರ್ಕಿಸಬಹುದಾಗಿದೆ.