SBI Deputy Manager and Assistant Manager Recruitment 2024 : ದೇಶದ ಪ್ರತಿಷ್ಠಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಡೆಪ್ಯುಟಿ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಬಿಇ, ಬಿಟೆಕ್, ಎಂ.ಟೆಕ್, ಎಂಸಿಎ, ಎಂಎಸ್ಸಿ ನಂತಹ ತಾಂತ್ರಿಕ ಪದವೀಧರರಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಇವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಐಟಿ ವಿಭಾಗದ (IT Division) ಹುದ್ದೆಗಳಾಗಿದ್ದು; ಒಟ್ಟು 1,153 ಹುದ್ದೆಗಳಿಗೆ ನೇಮಕ ನಡೆಯಲಿದೆ. ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ಅನುಭವ ಮುಖ್ಯವಾಗಿದ್ದರೆ, ಅಸಿಸ್ಟೆಂಟ್ ಮ್ಯಾನೇಜರ್ಗಳನ್ನು ಆನ್ಲೈನ್ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹುದ್ದೆಗಳ ವಿವರ
- ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಮತ್ತು ಡೆಲಿವರಿ : 187
- ಇನ್ಫ್ರಾ ಸಪೋರ್ಟ್ ಆ್ಯಂಡ್ ಕ್ಲೌಡ್ ಆಪರೇಟರ್ಸ್ : 412
- ನೆಟ್’ವರ್ಕಿಂಗ್ ಅಪರೇಷನ್ಸ್ : 80
- ಐಟಿ ಆರ್ಕಿಟೆಕ್ಟ್ : 27
- ಇನ್ಫಾರ್ಮೇಷನ್ ಸೆಕ್ಯುರಿಟಿ : 07
- ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್ಸ್) : 784
- ಬ್ಯಾಕ್ಲಾಗ್ ಹುದ್ದೆಗಳು ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್ಸ್) : 14
ವಯೋಮಿತಿ ವಿವರ
ಡೆಪ್ಯುಟಿ ಮ್ಯಾನೇಜರ್ಗಳಿಗೆ ಕನಿಷ್ಠ 25 ಹಾಗೂ ಗರಿಷ್ಠ 35 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಕನಿಷ್ಠ 21 ಗರಿಷ್ಠ 30 ವರ್ಷದೊಳಗಿರಬೇಕು. ಒಟ್ಟು 64 ಹುದ್ದೆಗಳನ್ನು ವಿವಿಧ ರೀತಿಯ ಅಂಗವೈಕಲ್ಯ ಹೊಂದಿದ ಅಭ್ಯರ್ಥಿಗಳಿಗಾಗಿ ಮೀಸಲಿಡಲಾಗಿದೆ.
ವಿದ್ಯಾರ್ಹತೆ ಏನಿರಬೇಕು?
ಆಯಾ ಹುದ್ದೆಗೆ ತಕ್ಕಂತೆ ಬಿಇ, ಬಿ.ಟೆಕ್, ಎಂ.ಟೆಕ್, ಎಂಸಿಎ, ಎಂ.ಎಸ್ಸಿ ಹಾಗೂ ತತ್ಸಮಾನ ವಿದ್ಯಾರ್ಹತೆಯನ್ನು ಕೇಳಲಾಗಿದೆ. ಇವುಗಳು ಮಾಹಿತಿ ತಂತ್ರಜ್ಞಾನಾಧಾರಿತ ಹುದ್ದೆಗಳು ಆಗಿರುವುದರಿಂದ ವಿದ್ಯಾರ್ಹತೆ ಜತೆಗೆ, ಅಯಾ ಕ್ಷೇತ್ರದಲ್ಲಿ ಪರಿಣತಿ ಹಾಗೂ ಅನುಭವವೂ ಅವಶ್ಯಕ.
ವೇತನ ಶ್ರೇಣಿ ವಿವರ
ಡೆಪ್ಯುಟಿ ಮ್ಯಾನೇಜರ್ಗಳಿಗೆ 64,820 – 93,960 ರೂಪಾಯಿ ವರೆಗಿನ ವೇತನ ಶ್ರೇಣಿಯಿದೆ. ಅಸಿಸ್ಟೆಂಟ್ ಮ್ಯಾನೇಜರ್ಗಳಿಗೆ 48,480 – 85,920 ರೂಪಾಯಿ ವರೆಗೆ ಸಂಬಳ ಇರಲಿದೆ. ಇದರ ಜತೆಗೆ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ಪಿಎಫ್, ಆರೋಗ್ಯ ವಿಮೆ ಸೌಲಭ್ಯ ಮೊದಲಾದವುಗಳನ್ನು ಒದಗಿಸಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳು ಒಂದು ವರ್ಷದ ಪ್ರೊಬೇಷನ್ ಅವಧಿಯನ್ನು ಪೂರೈಸಬೇಕು. ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದವರು ಐದು ವರ್ಷಗಳ ಅವಧಿಯ ಸೇವಾ ಖಾತ್ರಿಗೆ 2 ಲಕ್ಷ ರೂಪಾಯಿ ಬಾಂಡ್ ಸಲ್ಲಿಸಬೇಕು.
ಸಿಬಿಲ್ ಸ್ಕೋರ್ ಅಗತ್ಯ
ಬ್ಯಾಂಕಿ೦ಗ್ ಹುದ್ದೆಗಳಿಗೆ ಸಿಬಿಲ್ ಸ್ಕೋರ್ ಮುಖ್ಯವಾಗುತ್ತದೆ. ಅರ್ಜಿದಾರರು ಬ್ಯಾಂಕ್ ಹಾಗೂ ಮುಖ್ಯ ಇತರ ಹಣಕಾಸು ಸಂಸ್ಥೆಗಳಿಗೆ ಸುಸ್ತಿದಾರರಾಗಿದ್ದಲ್ಲಿ ಅಥವಾ ಕ್ರೆಡಿಟ್ ಸ್ಕೋರ್ ಉತ್ತಮವಾಗಿ ಇರದಿದ್ದಲ್ಲಿ ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ. ನೇಮಕಾತಿ ದಿನಾಂಕಕ್ಕೂ ಮುನ್ನ ಸಾಲ ಮರುಪಾವತಿಯನ್ನು ಮಾಡಿದ ಅಥವಾ ಹಾಗೂ ಕ್ರೆಡಿಟ್ ಸಂಸ್ಥೆಯಿ೦ದ ಆ ಬಗ್ಗೆ ಪಡೆದ ಪ್ರಮಾಣಪತ್ರವನ್ನು ಸಲ್ಲಿಸುವುದು ಅಗತ್ಯವಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಅನುಭವ, ವಿದ್ಯಾರ್ಹತೆ ಹಾಗೂ ವಿಶೇಷತೆಗಳ ಆಧಾರದಲ್ಲಿ ಆಯ್ದ ಅಭ್ಯರ್ಥಿಗಳನ್ನು ವಿವಿಧ ಹಂತಗಳ ಸಂದರ್ಶನ ಹಾಗೂ ಸಂವಾದಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ಇನ್ನು ಅಸಿಸ್ಟೆಂಟ್ ಮ್ಯಾನೇಜರ್ಗಳಿಗೆ ಸಾಮಾನ್ಯ ಜ್ಞಾನ ಹಾಗೂ ವೃತ್ತಿಪರ ತಿಳಿವಳಿಕೆಯ ಮಟ್ಟ ಅಳೆಯಲು ಆನ್ಲೈನ್ ಪರೀಕ್ಷೆ, ಸಂದರ್ಶನ ಇರಲಿದೆ. ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ 750 ರೂಪಾಯಿ ಅರ್ಜಿ ಶುಲ್ಕವಿದ್ದು; ಉಳಿದವರಿಗೆ ಯಾವುದೇ ಶುಲ್ಕವಿಲ್ಲ.