CIBIL Score Complete Details : ಬ್ಯಾಂಕುಗಳು ಅಥವಾ ಫೈನಾನ್ಸ್ ಕಂಪನಿಗಳಲ್ಲಿ ಕಡಿಮೆ ಬಡ್ಡಿಯ ಸುಲಭ ಸಾಲ (Low interest loan) ಪಡೆಯಲು ಬೇಕಾಗುವ ಅರ್ಹತೆಗಳೇನು? ಸಿಬಿಲ್ ಸ್ಕೋರ್ (CIBIL Score) ಅಥವಾ ಕ್ರೆಡಿಟ್ ಸ್ಕೋರ್ (CREDIT Score) ಮಹತ್ವವೇನು? ಕಡಿಮೆ ಬಡ್ಡಿ ಲೋನ್ ಪಡೆಯಲು ಅತ್ಯುತ್ತಮ ಸಿಬಿಲ್ ಸ್ಕೋರ್ ಅಗತ್ಯ ಏಕೆ? ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ಏನಿದು ಸಿಬಿಲ್ ಸ್ಕೋರ್?
ಯಾವುದೇ ಬ್ಯಾಂಕಿನಲ್ಲಿ ಅಥವಾ ಫೈನಾನ್ಸ್ ಕಂಪನಿಯಲ್ಲಿ ಲೋನ್ ತೆಗೆದುಕೊಳ್ಳಲು ಅತಿ ಮುಖ್ಯವಾಗಿ ಬೇಕಾಗಿರುವುದು ಸಿಬಿಲ್ ಸ್ಕೋರ್. ಸಿಬಿಲ್ ಸ್ಕೋರ್ ಎಂಬುವುದು 300 ರಿಂದ 900ರ ನಡುವಣ ಒಂದು ಸಂಖ್ಯೆಯಾಗಿದ್ದು; ಬ್ಯಾಂಕುಗಳಿAದ ಲೋನ್ ಪಡೆಯಲು ಪಾರದರ್ಶಕವಾದ ಪ್ರಮುಖ ಮಾಹಿತಿಯನ್ನು ಇದು ಒದಗಿಸುತ್ತದೆ.
ಕ್ರೆಡಿಟ್ ಇನ್ಫಾರ್ಮಶನ್ ಬ್ಯುರೋ ಇಂಡಿಯಾ ಲಿಮಿಟೆಡ್ ಎಂಬುವುದು ‘ಸಿಬಿಲ್’ನ ಪೂರ್ಣಾರ್ಥ. (Credit Information Bureau India Limited – CIBIL) ಇಸ್ವಿ 2000ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ವ್ಯಕ್ತಿಗಳು ಮತ್ತು ಸಂಸ್ಥೆಗಳ ಎಲ್ಲಾ ಕ್ರೆಡಿಟ್ ಸಂಬ೦ಧಿತ ಚಟುವಟಿಕೆಗಳ ದಾಖಲೆಗಳ ನಿರ್ವಹಣೆಯಲ್ಲಿ ತೊಡಗಿದೆ.
ಭಾರತದ ಕ್ರೆಡಿಟ್ ಬ್ಯುರೋ ಆದ ಸಿಬಿಲ್ ಸಂಸ್ಥೆಯನ್ನು ಹೊರತುಪಡಿಸಿ ಇನ್ನು ಹಲವಾರು ಕ್ರೆಡಿಟ್ ಮಾಹಿತಿಯನ್ನು ಸಂಗ್ರಹಿಸುವ, ಒದಗಿಸುವ ಮತ್ತು ನಿರ್ವಹಣೆ ಮಾಡುವ ಅನೇಕ ಸಂಸ್ಥೆಗಳಿವೆ. ಅವುಗಳಲ್ಲಿ ಎಕ್ಸ್ ಫೆರಿಯನ್ (Experian), ಇಕ್ವಿಫ್ಯಾಕ್ಸ್ (Equifax) ಹಾಗೂ ಸಿಆರ್‌ಐಎಫ್ (CRIF) ಮುಖ್ಯ ಬ್ಯುರೋಗಳಾಗಿವೆ.
ಸಿಬಿಲ್ ಸ್ಕೋರ್ ಮಹತ್ವವೇನು?
ಸಿಬಿಲ್ ಸ್ಕೋರ್ ಎಂಬುವುದು ಒಬ್ಬ ವ್ಯಕ್ತಿಯ ವೈಯಕ್ತಿಕ ಸಾಲದ ಇತಿಹಾಸ, ಮರುಪಾವತಿಯ ನಡುವಳಿಕೆಯ ಮಾಹಿತಿಯನ್ನು ಪಾರದರ್ಶಕವಾಗಿ ತಿಳಿಸಿ ಕೊಡುತ್ತದೆ. ಸಿಬಿಲ್ ಸ್ಕೋರ್ ಆಧಾರದ ಮೇಲೆ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಒಬ್ಬ ವ್ಯಕ್ತಿಗೆ ಸಾಲವನ್ನು ತೆಗೆದುಕೊಳ್ಳಲು ಅರ್ಹನೋ ಅಥವಾ ಅನರ್ಹನೋ ಎಂಬ ಮಾಹಿತಿ ತಿಳಿಸುತ್ತದೆ.
ಯಾವುದೇ ಒಂದು ಬ್ಯಾಂಕಿನಲ್ಲಿ ಸಾಲವನ್ನು ಪಡೆಯಲು ಅತಿ ಮುಖ್ಯವಾಗಿ ಬೇಕಾಗಿರುವುದು ಸಿಬಿಲ್ ಸ್ಕೋರ್ (CIBIL SCORE) ಅಥವಾ ಕ್ರೆಡಿಟ್ ಸ್ಕೋರ್ (CREDIT SCORE). ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಬ್ಯಾಂಕುಗಳ ನಿಮ್ಮ ಸಾಲದ ಅರ್ಜಿಯನ್ನು ಸಂಪೂರ್ಣವಾಗಿ ನಿರಾಕರಿಸುತ್ತವೆ ಅಥವಾ ಇತರೆ ಹೆಚ್ಚಿನ ಮೇಲಾಧಾರವನ್ನು ಕೇಳುತ್ತವೆ.
ಕಡಿಮೆ ಬಡ್ಡಿ ಲೋನ್ ಪಡೆಯಲು ಅತ್ಯುತ್ತಮ ಸಿಬಿಲ್ ಸ್ಕೋರ್ ಅಗತ್ಯ
ನಿಮ್ಮ ಸಿಬಿಲ್ ಸ್ಕೋರ್ 750 ಮತ್ತು 900ರ ನಡುವೆ ಇದ್ದರೆ, ನೀವು ‘ಅತ್ಯುತ್ತಮವಾದ ಕ್ರೆಡಿಟ್ ಸ್ಕೋರ್’ ಹೊಂದಿದ್ದೀರಿ ಎಂದರ್ಥ. ಈ ಸ್ಕೋರ್ ಅನ್ನು ನೀವು ಹೊಂದಿದ್ದರೆ, ಯಾವುದೇ ಬ್ಯಾಂಕಿನಲ್ಲಿ ನಿಮಗೆ ಲೋನ್ ಬಹಳ ಸುಲಭವಾಗಿ ಸಿಗುತ್ತದೆ. ನಿಮ್ಮ ಸಿಬಿಲ್ ಸ್ಕೋರ್ 650 ರಿಂದ 750ರ ವರೆಗೆ ಇದ್ದರೆ ಉತ್ತಮವಾದ ಸಿಬಿಲ್ ಸ್ಕೋರ್ ಹೊಂದಿದ್ದಿರಿ ಎಂದರ್ಥ.
550 ರಿಂದ 650ರ ಸ್ಕೋರ್ ನೀವು ಹೊಂದಿದ್ದರೆ, ಸರಾಸರಿ ಇದೆ ಎಂಬರ್ಥ. ಒಂದು ವೇಳೆ ನಿಮ್ಮ ಸ್ಕೋರ್ 300 ರಿಂದ 500ರ ವರೆಗೆ ಇದ್ದರೆ ಕಳಪೆ ಸ್ಕೋರ್ ಹೊಂದಿದ್ದೀರಿ ಎಂದರ್ಥ. ಈ ಅಂತರದಲ್ಲಿ ನಿಮ್ಮ ಸ್ಕೋರ್ ಇದ್ದರೆ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳಿAದ ಸಾಲ ಪಡೆಯುವುದು ಕಷ್ಟ ಕಷ್ಟ!
ಸಿಬಿಲ್ ಸ್ಕೋರ್ ಕಡಿಮೆಯಾಗಲು ಕಾರಣ ಮತ್ತು ಪರಿಹಾರ
ಕಾರಣ 1 : ನಿಮ್ಮ ಹಳೆಯ ಸಾಲದ ಮರುಪಾವತಿ ಮೊತ್ತವನ್ನು ಅಥವಾ EMI ಮೊತ್ತವನ್ನು ಕಾಲ ಕಾಲಕ್ಕೆ ಸರಿಯಾಗಿ ಪಾವತಿ ಮಾಡದಿರುವುದೇ ಸಿಬಿಲ್ ಸ್ಕೋರ್ ಕಡಿಮೆಯಾಗಲು ಮುಖ್ಯ ಕಾರಣವಾಗುತ್ತದೆ.
ಪರಿಹಾರ : ನಿಮ್ಮ ಸಿಬಿಲ್ ಸ್ಕೋರ್ ಅನ್ನು ಉತ್ತಮವಾಗಿಟ್ಟುಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳಲು ನಿಮ್ಮ ಎಲ್ಲಾ EMIಗಳನ್ನು ಮತ್ತು ಕ್ರೆಡಿಟ್ ಕಾರ್ಡ್ ಬಿಲ್’ಗಳನ್ನು ಸರಿಯಾದ ಸಮಯಕ್ಕೆ ಅಥವಾ ನಿಗದಿತ ದಿನಾಂಕದ ಒಳಗಾಗಿಯೇ ಮರುಪಾವತಿ ಮಾಡಿ. ಸಾಧ್ಯವಾದರೆ ಒಮ್ಮೆಲೆ ಸಂಪೂರ್ಣ ಸಾಲದ ಮೊತ್ತವನ್ನು ಮರುಪಾವತಿ ಮಾಡಿದರೆ ಇನ್ನೂ ಒಳ್ಳೆಯದು.
ಕಾರಣ 2 : ನೀವು ವಿವಿಧ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಅವುಗಳ ಮರುಪಾವತಿಯನ್ನು ಸರಿಯಾದ ಸಮಯಕ್ಕೆ ಮಾಡದೇ ಇದ್ದರೂ ಕೂಡ ಸಿಬಿಲ್ ಸ್ಕೋರ್ ಕಳಪೆ ಪಟ್ಟಿಗೆ ಇಳಿಯುತ್ತದೆ.
ಪರಿಹಾರ : ಒಂದು ವೇಳೆ ನಿಮ್ಮ ಬಳಿ ಒಂದಕ್ಕಿ೦ತ ಹೆಚ್ಚು ಕ್ರೆಡಿಟ್ ಕಾರ್ಡ್’ಗಳಿದ್ದರೆ, ಉಪಯೋಗಿಸದೇ ಇರುವ ಕ್ರೆಡಿಟ್ ಕಾರ್ಡು’ಗಳನ್ನು ರದ್ದುಗೊಳಿಸಿ ಮತ್ತು ಸಕ್ರಿಯವಾಗಿ ಬಳಸುವ ಒಂದು ಕಾರ್ಡನ್ನು ಮಾತ್ರ ಸರಿಯಾಗಿ ನಿರ್ವಹಿಸಿ.
ಸಿಬಿಲ್ ಸ್ಕೋರ್ ಚೆಕ್ ಮಾಡಿಯೇ ಸಾಲಕ್ಕೆ ಅರ್ಜಿ ಹಾಕಿ
ಹೌದು, ಯಾವುದೇ ಒಂದು ಸಾಲಕ್ಕೆ ಅಥವಾ ಲೋನ್’ಗೆ ಅರ್ಜಿ ಸಲ್ಲಿಸುವಾಗ, ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಅತ್ಯುತ್ತಮವಾಗಿದೆಯೋ ಇಲ್ಲವೋ ಎಂದು ಪರಿಶೀಲಿಸಿಕೊಂಡು ನಂತರ ಅರ್ಜಿ ಸಲ್ಲಿಸುವುದು ಬಹಳ ಉತ್ತಮ.
ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಅಥವಾ ಕಳಪೆಯಾಗಿದ್ದರೆ ಅನೇಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನಿಮ್ಮ ಸಾಲದ ಅರ್ಜಿಯನ್ನು ಸಾರಾಸಗಟು ನಿರಾಕರಿಸುತ್ತವೆ. ಈ ನಿರಾಕರಣೆ ಕೂಡ ನಿಮ್ಮ ಸಿಬಿಲ್ ಸ್ಕೋರ್‌ನ ಮೇಲೆ ಪರಿಣಾಮ ಬಿರುತ್ತದೆ.
ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ?
ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಅನ್ನು ಚೆಕ್ ಮಾಡಲು ಹಲವಾರು ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್’ಗಳು ಇವೆ. ನಿಮಗೆ ಸುಲಭವೆನ್ನಿಸುವ ಮಾರ್ಗದಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಚೆಕ್ ಮಾಡಬಹುದಾಗಿದೆ.
PhonePe, Google Pay, BHIM UPI ಸೇರಿದಂತೆ ವಿವಿಧ ಡಿಜಿಟಲ್ ಪೇಮೆಂಟ್ ಮೊಬೈಲ್ ಆ್ಯಪ್’ಗಳ ಮೂಲಕ ಸಿಬಿಲ್ ಸ್ಕೋರ್ ಅನ್ನು ಸರಳವಾಗಿ ಚೆಕ್ ಮಾಡಬಹುದು.
PhonePe Appನಲ್ಲಿ ಲೋನ್/Loan ವಿಭಾಗದಲ್ಲಿರುವ Credit Score ಮೇಲೆ ಕ್ಲಿಕ್ ಮಾಡಿ, ಪಾನ್ ನಮೂದಿಸಿ ಮುಂದುವರೆದರೆ ನಿಮ್ಮ ಸಿಬಿಲ್ ಸ್ಕೋರ್ ಮಾಹಿತಿ ಸಿಗುತ್ತದೆ.
ಅದೇ ರೀತಿ Google Pay Appನಲ್ಲಿ ಕೊನೆಯಲ್ಲಿರುವ Manage Your Money ವಿಭಾಗದಲ್ಲಿ Check Your CBIL Score for free ಮೇಲೆ ಕ್ಲಿಕ್ ಮಾಡಿ ಹೆಸರು ಮತ್ತು ಪಾನ್ ನಂಬರ್ ಹಾಕಿ ಮುಂದುವರೆದರೆ ನಿಮ್ಮ ಸಿಬಿಲ್ ಸ್ಕೋರ್ ಮಾಹಿತಿ ಸಿಗುತ್ತದೆ.
ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ | ₹5 ಲಕ್ಷಕ್ಕೆ ₹10 ಲಕ್ಷ ಗ್ಯಾರಂಟಿ Kisan Vikas Patra-KVP