ನಿಮ್ಮ ಜಮೀನು ಒತ್ತುವರಿಯಾದರೆ ತಗಾದೆ ಇಲ್ಲದೇ ಹದ್ದುಬಸ್ತು ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ತಜ್ಞರ ಸರಳ ಸಲಹೆ… Haddubastu land survey

WhatsApp
Telegram
Facebook
Twitter
LinkedIn

Haddubastu land survey : ಯಾವುದೇ ರೀತಿಯ ಹೊಡದಾಟ, ಬಡಿದಾಟವಿಲ್ಲದೇ ನ್ಯಾಯ ಸಮ್ಮತವಾಗಿ ಒತ್ತುವರಿಯಾದ ಜಮೀನನ್ನು ಸುಲಭವಾಗಿ ತೆರವುಗೊಳಿಸುವುದು ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾವ ದಾಖಲೆಗಳು ಬೇಕು? ತೆರವು ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ? ಎಂಬ ವಿಚಾರಗಳ ಬಗ್ಗೆ ಬಹಳಷ್ಟು ರೈತರಿಗೆ ಮಾಹಿತಿ ಕೊರತೆ ಇದೆ. ಅಂತಹ ರೈತರಿಗೆ ತಜ್ಞರ ಉಪಯುಕ್ತ ಸಲಹೆ ಇಲ್ಲಿದೆ…

ಸಾಮಾನ್ಯವಾಗಿ ರೈತರು ಜಮೀನು ಉಳಿಮೆ ಮಾಡುವಾಗ ಅಕ್ಕಪಕ್ಕದ ಜಮೀನು ಭಾಗವನ್ನು ಸಾಧ್ಯವಾದಷ್ಟು ಒತ್ತಿ ಉಳುವುದುಂಟು. ಎರಡೂ ಕಡೆಯವರು ಹೀಗೆಯೇ ಒತ್ತಿ ಉಳಲು ಶುರುವಿಟ್ಟರೆ ಇಬ್ಬರ ನಡುವೆ ತಕರಾರು ಏಳುವುದು ಸರ್ವೇ ಸಾಮಾನ್ಯ. ಅನೇಕ ವರ್ಷಗಳ ಕಾಲ ಈ ಪ್ರಕ್ರಿಯೇ ನಡೆಯುತ್ತ ಬಂದರೆ ಎರಡೂ ಜಮೀನು ಗಡಿ ಭಾಗದಲ್ಲಿದ್ದ ಹದ್ದುಬಸ್ತು ಕಲ್ಲು ಕೂಡ ಹೂತು ಹೋಗಿರುತ್ತದೆ ಅಥವಾ ನಾಶವಾಗಿರುತ್ತದೆ. ಹೀಗಾದಾಗ ಎರಡೂ ಕಡೆಯ ರೈತರ ನಡುವೆ ಹುಟ್ಟುವ ತಕರಾರು ಜಗಳವಾಗಿ ಮಾರ್ಪಟ್ಟು ಕೊನೆಗೆ ಹೊಡಿಬಡಿ ಹಂತಕ್ಕೂ ತಲುಪುವುದುಂಟು.

ಊರಿನ ಪ್ರಮುಖರನ್ನು ಕರೆಯಿಸಿ ತಮ್ಮ ತಮ್ಮಲ್ಲೇ ಹೊಂದಾಣಿಕೆ ಮಾಡಿಕೊಂಡರೆ ಇದು ಸಮಸ್ಯೆಯೇ ಅಲ್ಲ. ಬಹುತೇಕ ಸಂದರ್ಭದಲ್ಲಿ ಊರಿನ ಪ್ರಮುಖರ ಕಿವಿಗೆ ವಿಚಾರ ತಲಯಪುವ ಮೊದಲೇ ಆಗಬಾರದ್ದು ಆಗಿ ಹೋಗಿರುತ್ತದೆ. ಹೀಗಾದಾಗ ಎರಡೂ ಕುಟುಂಬಗಳ ನೆಮ್ಮದಿ ಹಾಳು. ಇಬ್ಬರ ನಡುವಿನ ವಿಶ್ವಾಸಕ್ಕೂ ಧಕ್ಕೆ!

ಇದು ಜಮೀನು ಒತ್ತುವರಿ ವಿಚಾರದ ರೈತರ ನಡುವಿನ ಸಾಮಾನ್ಯ ಪ್ರಕರಣವಾಯ್ತು. ಇನ್ನು ಕೆಲವು ಸಂದರ್ಭದಲ್ಲಿ ಬಲಾಢ್ಯರು ಬಡಪಾಯಿ ರೈತನ ಜಮೀನು ಒತ್ತುವರಿ ಮಾಡಿ, ತಮ್ಮ ಪಾಲಿನ ಅಥವಾ ತಾವು ಖರೀದಿಸಿದ ಭೂಮಿ ಕನ್ವರ್ಷನ್ ಮಾಡಿ ಬಡಾವಣೆ ನಿರ್ಮಾಣ ಮಾಡುವ ಸಂದರ್ಭದಲ್ಲೂ ಈ ಸಮಸ್ಯೆ ತಲೆದೋರುವುದುಂಟು. ಆಗ ಬಡ ರೈತ ಊರ ಪ್ರಮುಖರಲ್ಲೂ ಮೊರೆ ಇಡಲಾಗದೇ, ಕೋರ್ಟು ಕಚೇರಿಗೂ ಅಲೆಯಲಾಗದೇ ಬಲಾಢ್ಯರ ಒತ್ತಡಕ್ಕೆ ತನ್ನ ಜಮೀನು ಒತ್ತುವರಿಯನ್ನು ಸಹಿಸಿಕೊಂಡಿರಬೇಕಾಗುತ್ತದೆ.

ಹದ್ದುಬಸ್ತು ಎಂದರೇನು?

ಒತ್ತುವರಿಯಾದ ಜಮೀನು ತೆರವುಗೊಳಿಸಿ ಕರಾರುವಾಕ್ಕಾಗಿ ಅಳತೆ ಮಾಡಿ ನಿಖರ ಗಡಿ ಗುರುತಿಸಿ ಬಂದೋಬಸ್ತ್ ಮಾಡಿಕೊಳ್ಳುವುದನ್ನು ‘ಹದ್ದುಬಸ್ತು’ ಎಂದು ಕರೆಯುತ್ತಾರೆ. ಪ್ರತಿ ಜಮೀನಿಗೂ ಹದ್ದುಬಸ್ತು ಇದ್ದೇ ಇರುತ್ತೆ. ಆದರೆ ಅದು ಕಾಲಾಂತರದಲ್ಲಿ ಅಳಿಸಿ ಹೋಗಿರುವುದುಂಟು.

ಇದಕ್ಕೆ ರೈತರು ತಮ್ಮ ಆಧಾರ್ ಕಾರ್ಡ್, ಪಹಣಿಯೊಂದಿಗೆ ನಾಡಕಚೇರಿಯಲ್ಲಿ ಹದ್ದುಬಸ್ತು ಸರ್ವೆಗೆ ಹಣ ಪಾವತಿಸಿ ಅರ್ಜಿ ಸಲ್ಲಸಬೇಕು. ಭೂಮಾಪಕರು ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನು ಅಳತೆ ಮಾಡಿ ನಾಶವಾಗಿ ಹೋಗಿರುವ ಗಡಿ ಭಾಗವನ್ನು ಗುರುತಿಸಿ ಪಕ್ಕಾ ಗಡಿ ಗುರುತು ಮಾಡಿಕೊಡುತ್ತಾರೆ.

ಇದರಿಂದ ಜಮೀನಿನ ಯಾವ ಭಾಗ ಒತ್ತುವರಿಯಾಗಿದೆ? ಎಷ್ಟು ಪ್ರದೇಶ ಒತ್ತುವರಿಯಾಗಿದೆ? ಯಾರು ಒತ್ತುವರಿ ಮಾಡಿಕೊಂಡಿದ್ದಾರೆ? ಎಂಬುವುದು ಪತ್ತೆಯಾಗುತ್ತದೆ. ಪಕ್ಕಾ ಗಡಿ ಗುರುತು ಸಿಗುತ್ತದೆ. ಒಂದು ವೇಳೆ ಈ ಅಳತೆಯಿಂದ ಅರ್ಜಿದಾರರಿಗೆ ಅಥವಾ ಪಕ್ಕದ ಜಮೀನಿನವರಿಗೆ ಸಮಾಧಾನವಾಗಿಲ್ಲ ಎಂದರೆ ಮತ್ತೆ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶವಿದೆ.

ಅರ್ಜಿ ಹೇಗೆ ಸಲ್ಲಿಸಬೇಕು?

ನಿಮ್ಮ ಜಮೀನು ಒತ್ತುವರಿ ಆಗಿದೆ ಎಂಬ ಗುಮಾನಿ ನಿಮಗಿದ್ದರೆ ಅವರೊಂದಿಗೆ ಕದನಕ್ಕಿಳಿಯದೇ ಅರ್ಜಿ ಸಲ್ಲಿಸಿ ಅನುಮಾನ ಪರಿಹರಿಸಿಕೊಳ್ಳಬಹುದು. ಹದ್ದುಬಸ್ತಿಗೆ ಅರ್ಜಿ ಸಲ್ಲಿಸುವ ರೈತರು ತಮ್ಮ ಆಧಾರ್ ಕಾರ್ಡ್, ಇತ್ತೀಚಿನ ಪಹಣಿಯೊಂದಿಗೆ ಅರ್ಜಿ ನಮೂನೆ ಭರ್ತಿ ಮಾಡಬೇಕು.

ಅರ್ಜಿ ನಮೂನೆಯಲ್ಲಿ ಮುಖ್ಯವಾಗಿ ಚೆಕ್ಕುಬಂದಿ ವಿವರ, ನಿಮ್ಮ ಜಮೀನಿನ ಅಕ್ಕಪಕ್ಕದವರ ಹೆಸರು, ಅವರ ಮೊಬೈಲ್ ನಂಬರ್ ಹಾಗೂ ವಿಳಾಸವನ್ನು ಭರ್ತಿ ಮಾಡಿ ನಿಮ್ಮ ಹೋಬಳಿಯಲ್ಲಿರುವ ನಾಡಕಚೇರಿ ಅಥವಾ ತಾಲೂಕು ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ರಸೀದಿ ಪಡೆದುಕೊಳ್ಳಬೇಕು.

ಸರ್ವೆಗೆ ಶುಲ್ಕವೆಷ್ಟು?

ಈ ಸಂದರ್ಭದಲ್ಲಿ ಸರ್ವೇ ಶುಲ್ಕ ಪಾವತಿಸಬೇಕಾಗುತ್ತದೆ. ಈ ಮೊದಲು ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿ ಸರ್ವೆ ಅಥವಾ ಹಿಸ್ಸಾ ಸರ್ವೆ ನಂಬರಿಗೆ ಜಮೀನುದಾರರ ಅರ್ಜಿ ಶುಲ್ಕ 35 ರೂಪಾಯಿ ಮಾತ್ರ ಪಾವತಿಸಲಾಗುತಿತ್ತು. ಆದರೆ, ಈಗ ನಗರ ಹಾಗೂ ಗ್ರಾಮೀಣ ಪ್ರದೇಶಗಳೆಂದು ಪ್ರತ್ಯೇಕಿಸಿ 4,000 ರೂಪಾಯಿ ವರೆಗೆ ಶುಲ್ಕ ಹೆಚ್ಚಿಸಲಾಗಿದೆ. ಗ್ರಾಮೀಣ ವ್ಯಾಪ್ತಿಯಲ್ಲಿ ಎರಡು ಎಕರೆ ವರೆಗೆ 1,500 ರೂಪಾಯಿ ಮತ್ತು ಎರಡು ಎಕರೆಗಿಂತ ಹೆಚ್ಚಾದರೆ, ಪ್ರತಿ ಎಕರೆಗೆ ಹೆಚ್ಚುವರಿ 400 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.

ಹೀಗೆ ಸರ್ವೇ ಶುಲ್ಕದ ಸಮೇತ ಅರ್ಜಿ ಸಲ್ಲಿಸಿದ ನಂತರ, ನಿಮ್ಮ ಅರ್ಜಿಯನ್ನು ಭೂ ಮಾಪಕರಿಗೆ ವರ್ಗಾವಣೆ ಮಾಡಲಾಗುತ್ತದೆ. ಆಗ ಭೂಮಾಪಕರು ಎರಡೂ ಕಡೆಯವರಿಗೆ ನೋಟಿಸ್ ಕೊಟ್ಟು ದಿನಾಂಕವನ್ನು ನಿಗದಿಪಡಿಸುತ್ತಾರೆ. ಅವರು ಹೇಳಿರುವ ದಿನಾಂಕದAದು ಅರ್ಜಿದಾರರ ಮತ್ತು ಪಕ್ಕದ ಜಮೀನುದಾರರ ಸಮ್ಮುಖದಲ್ಲಿ ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನಿನ ಅಳತೆ ಕಾರ್ಯ ನಡೆಯುತ್ತದೆ. ಅಳತೆ ಕಾರ್ಯ ಮುಗಿದ ನಂತರ ಅರ್ಜಿದಾರ ಬಾಂದುಕಲ್ಲುಗಳನ್ನು ಹಾಕಿಕೊಳ್ಳಬೇಕಾಗುತ್ತದೆ.

ನ್ಯಾಯಾಲಯದ ಮೊರೆ

ಹಾಗೊಂದು ವೇಳೆ, ಪಕ್ಕದ ಜಮೀನಿನ ಮಾಲೀಕರು ಒತ್ತುವರಿ ಬಿಡಲು ಒಪ್ಪದೇ ಇದ್ದಲ್ಲಿ, ಸಿವಿಲ್ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಆಗ ಹದ್ದುಬಸ್ತು ನಕ್ಷೆ ಹಾಗೂ ವರದಿ ನ್ಯಾಯಾಲಯದಲ್ಲಿ ಪ್ರಮುಖ ಆಧಾರವಾಗಿರುತ್ತದೆ. ಅಕ್ಕಪಕ್ಕದ ಜಮೀನಿನವರು ಏನಾದರೂ ನ್ಯಾಯಾಲಯದಿಂದ ತಡೆ ಆಜ್ಞೆ ತಂದಿದ್ದಲ್ಲಿ ಅಳತೆ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಕೆಲವು ಸಲ ಅಳತೆ ಕಾರ್ಯ ಸಮಯದಲ್ಲಿ ಶಾಂತಿ ಭಂಗ ಉಂಟಾಗಬಹುದು ಎಂದು ಮೊದಲೇ ಗೊತ್ತಿದ್ದರೆ ಸೂಕ್ತ ಪೋಲಿಸ್ ಬಂದೋಬಸ್ತಿಗೆ ಅರ್ಜಿ ಸಲ್ಲಿಸಬೇಕು. ನ್ಯಾಯಾಲಯದಲ್ಲಿ ಹದ್ದುಬಸ್ತಿನ ನಕ್ಷೆ, ಪಹಣಿ ಎಂಆರ್ (ಮ್ಯುಟೇಷನ್ ರೆಜಿಸ್ಟರ್) ನೋಂದಣಿ ಪತ್ರಗಳಿಗೆ ವಕೀಲರ ಮೂಲಕ ಅರ್ಜಿ ಸಲ್ಲಿಸಿ ನ್ಯಾಯ ಪಡೆದುಕೊಳ್ಳಬಹುದು. ಪೊಟೆಕ್ಷನ್ ಆರ್ಡರ್ ತೆಗೆದುಕೊಂಡು ಪೋಲಿಸರ ಸಮ್ಮುಖದಲ್ಲಿ ಒತ್ತುವರಿ ತೆರೆವುಗೊಳಿಸುವುದಕ್ಕೆ ಕೋರ್ಟ್ ಆದೇಶ ನೀಡುತ್ತದೆ.

Samagra Krushi   About Us
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon